ಹುಬ್ಬಳ್ಳಿ: ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕ ಸಂಘದ ರಾಜ್ಯ ಮಟ್ಟದ ಮೊದಲ ಸಮ್ಮೇಳನ ಜು. 9ರಂದು ಧಾರವಾಡದ ಕಾಲೇಜು ರಸ್ತೆಯ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ. ಸೋಮಶೇಖರ್ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 10.30ಕ್ಕೆ ಧಾರವಾಡದ ಕಡಪಾ ಮೈದಾನದಿಂದ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ಕಾರ್ಮಿಕರಿಂದ ಮೆರವಣಿಗೆ ಆರಂಭವಾಗಲಿದೆ. ಬಳಿಕ 11 ಗಂಟೆಗೆ ಸಮ್ಮೇಳನ ಉದ್ಘಾಟನೆ ನಡೆಯಲಿದೆ ಎಂದರು.
ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಕೆ. ಸೋಮಶೇಖರ್ ಯಾದಗಿರಿ ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದು, ಅಧ್ಯಕ್ಷತೆಯನ್ನುಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ಕಾರ್ಯದರ್ಶಿ ಎ. ದೇವದಾಸ, ರಾಜ್ಯ ಸಮಿತಿ ಸದಸ್ಯಗಂಗಾಧರ ಬಡಿಗೇರ ಭಾಗವಹಿಸಲಿದ್ದಾರೆ ಎಂದರು.
ಸಂಘದಿಂದ ನಡೆಯುತ್ತಿರುವ ಮೊದಲ ಸಮ್ಮೇಳನ ಇದಾಗಿದ್ದು, 20 ಜಿಲ್ಲೆಯ ಸಾವಿರ ಜನ ಕಾರ್ಮಿಕರು ಹಾಗೂ 300 ಪ್ರತಿನಿಧಿಗಳು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಸಂಘದ ಪ್ರಮುಖ ಬೇಡಿಕೆಗಳಾದ ಶೈಕ್ಷಣಿಕ ಸಹಾಯಧನ ತಕ್ಷಣ ಬಿಡುಗಡೆ ಮಾಡಬೇಕು, ಕಟ್ಟಡ ಕಾರ್ಮಿಕರಿಗೆ ಸ್ವಂತ ಮನೆ ನಿರ್ಮಿಸಿ ಕೊಳ್ಳಲು 5 ಲಕ್ಷ ರೂ. ಸಹಾಯ ಧನ ನೀಡಬೇಕು, ಮಂಡಳಿಯ ಸದಸ್ಯತ್ವ ನವೀಕರಣ ಅವಧಿಯನ್ನು ಕೇವಲ 1 ವರ್ಷಕ್ಕೆ ಇಳಿಸಿಸುವ ಮಂಡಳಿ ನಿರ್ಧಾರ ಕೈಬಿಡಬೇಕು, ಮಂಡಳಿಯ ಹಣ ಪೋಲಾಗಿಸುವ ಯೋಜನೆ ನಿಲ್ಲಿಸಬೇಕು. ಅವಶ್ಯಕತೆ ಇರುವ ಮಕ್ಕಳಿಗೆ ಮಾತ್ರ ಲ್ಯಾಪ್ಟಾಪ್, ಟ್ಯಾಬ್ ಖರೀದಿಸಲು ಡಿಬಿಟಿ ಮೂಲಕ ಸಹಾಯಧನ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಸಮಿತಿ ಸದಸ್ಯ ಗಂಗಾಧರ ಬಡಿಗೇರ, ಎಂ.ಬಿ. ತಾಯದಾಸ್, ಕೆ. ದೇವದಾಸ, ಯೋಗಪ್ಪ ಜೋತಪ್ಪನವರ, ಅಲ್ಲಾಭಕ್ಷ ಕಿತ್ತೂರ ಗೋಷ್ಠಿಯಲ್ಲಿದ್ದರು.