ಮಲೆನಾಡು, ಉತ್ತರ ಮಳೆಗೆ ತತ್ತರ ಹಳ್ಳದಲ್ಲಿ ಕೊಚ್ಚಿಹೋದ ಕೂಲಿಕಾರ | 217 ಮಂದಿ ಕಾಳಜಿ ಕೇಂದ್ರಕ್ಕೆ

ವಿಜಯವಾಣಿ (4)
Published on

ಬೆಂಗಳೂರು: ಶಿವಮೊಗ್ಗ ಹಾಗೂ ಉತ್ತರ ಕರ್ನಾಟಕ ಭಾಗದ ಕೆಲ ಜಿಲ್ಲೆಗಳಲ್ಲಿ ಮಳೆ ಆರ್ಭಟ ಜೋರಾಗಿದ್ದು, ಹೊನ್ನಾವರ ತಾಲೂಕು ಅನಂತವಾಡಿ ಮಠಾಕೇರಿ ಬಳಿ ಶುಕ್ರವಾರ ಕೂಲಿ ಕಾರ್ವಿುಕನೊಬ್ಬ ಕೊಚ್ಚಿಹೋಗಿದ್ದಾನೆ. ಖಾಸಗೇರಿಯ ಜನಾರ್ದನ ರಾಮ ಮರಾಠಿ (45) ಮೃತಪಟ್ಟ ವ್ಯಕ್ತಿ. ಈತ ನಿತ್ಯದಂತೆ ಹಳ್ಳ ದಾಟುವಾಗ ನೀರಿನ ಸೆಳವಿಗೆ ಸಿಕ್ಕಿ ಕೊಚ್ಚಿಕೊಂಡು ಹೋಗಿದ್ದಾನೆ.

ಹರಿವು ಹೆಚ್ಳಳ: ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ಜೋರಾಗಿ ಮಳೆ ಸುರಿಯುತ್ತಿರುವುದರಿಂದ ನದಿಗಳು ತುಂಬಿ ಹರಿಯುತ್ತಿವೆ. ಕೆಲವು ಕಡೆ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿದೆ. ಹೊನ್ನಾವರದಲ್ಲಿ 10, ಕುಮಟಾದಲ್ಲಿ 2, ಕಾರವಾರದಲ್ಲಿ 1 ಸೇರಿ ಒಟ್ಟು 13 ಕಾಳಜಿ ಕೇಂದ್ರ ತೆರೆದು ಒಟ್ಟು 217 ಜನರಿಗೆ ಅಲ್ಲಿ ಆಶ್ರಯ ನೀಡಲಾಗಿದೆ. ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದು, ವಿವಿಧೆಡೆ ವಿದ್ಯುತ್ ಕಡಿತವಾಗಿದೆ. ಲಿಂಗನಮಕ್ಕಿ ಅಣೆಕಟ್ಟೆ ಭರ್ತಿ ಹಂತ ತಲುಪಿದ್ದು, ನೀರು ಬಿಡುವ ಎರಡನೇ ಮುನ್ನೆಚ್ಚರಿಕೆ ನೋಟಿಸ್ ಹೊರಡಿಸಲಾಗಿದೆ.

ಜು. 26ರಂದು ಕರಾವಳಿ ಭಾಗದಲ್ಲಿ ಶಾಲೆಗಳಿಗೆ ರಜೆ ಘೊಷಿಸಲಾಗಿದೆ. ಧಾರವಾಡ, ಹಾವೇರಿ, ಗದಗ ಜಿಲ್ಲೆಯಲ್ಲಿ ಸಹ ಶುಕ್ರವಾರ ಮೇಲಿಂದ ಮೇಲೆ ಮಳೆ ಸುರಿದಿದ್ದರಿಂದ ಜನಜೀವನದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಯ ಉಂಟಾಯಿತು. ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಆರ್ಭಟ ಜೋರಾಗಿದ್ದು, ಇಡೀ ದಿನ ಜಿಟಿಜಿಟಿ ಮಳೆಯಾಗಿದ್ದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಮುಂಜಾಗ್ರತಾ ಕ್ರಮವಾಗಿ ತೀರ್ಥಹಳ್ಳಿ, ಹೊಸನಗರ, ಶಿಕಾರಿಪುರ ಮತ್ತು ಭದ್ರಾವತಿ ತಾಲೂಕಿನಲ್ಲಿ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೊಷಿಸಲಾಗಿತ್ತು. ಮುಂಗಾರು ಬಿರುಸಾಗಿದ್ದು, ಪ್ರಮುಖ ನದಿಗಳ ಹರಿವಿನಲ್ಲಿ ಏರಿಕೆಯಾಗಿದೆ. ತುಂಗಾ, ಭದ್ರಾ, ಲಿಂಗನಮಕ್ಕಿ ಜಲಾಶಯಗಳ ಒಳಹರಿವಿನಲ್ಲಿ ಗಣನೀಯ ಪ್ರಮಾಣದ ಹೆಚ್ಚಳ ಕಂಡುಬಂದಿದೆ. ಲಿಂಗನಮಕ್ಕಿ ಜಲಾಶಯ ಭರ್ತಿಗೆ 12 ಅಡಿ, ಭದ್ರಾ ಜಲಾಶಯ ಭರ್ತಿಗೆ 6 ಅಡಿ ಬಾಕಿಯಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಸಾಧಾರಣ ಮಳೆಯಾಗುತ್ತಿದೆ. ಐದು ತಾಲೂಕುಗಳ ಶಾಲೆಗಳಿಗೆ ಶನಿವಾರ ರಜೆ ನೀಡಲಾಗಿದೆ.

ರೆಡ್ ಅಲರ್ಟ್: ಕರಾವಳಿ, ಮಲೆನಾಡು ವ್ಯಾಪ್ತಿಯ ಜಿಲ್ಲೆಗಳಲ್ಲಿ ಮುಂದಿನ 5 ದಿನ ಇನ್ನಷ್ಟು ತೀವ್ರವಾಗಿ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಜು.26ರಂದು ಭಾರಿ ಪ್ರಮಾಣದಲ್ಲಿ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಅಲ್ಲದೆ, ಈ ಜಿಲ್ಲೆಗಳಲ್ಲಿ 29ರವರೆಗೆ ಆರೆಂಜ್ ಅಲರ್ಟ್ ಸಹ ನೀಡಲಾಗಿದೆ. ಕೊಡಗು ಜಿಲ್ಲೆಯಲ್ಲೂ ಭಾರಿ ಮಳೆ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಬೆಳಗಾವಿಯಲ್ಲಿ ಮುಂದಿನ 3 ದಿನ ಆರೆಂಜ್ ಅಲರ್ಟ್ ನೀಡಲಾಗಿದೆ.

ಬೀದರ್, ಧಾರವಾಡ, ಹಾವೇರಿ, ಕಲಬುರಗಿಯಲ್ಲಿ ಜು.26ರಂದು ಯೆಲ್ಲೋ ಅಲರ್ಟ್ ಇರಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅಲ್ಪ ಕ್ಷೀಣವಾಗಿದ್ದರೂ ಭಾರಿ ಗಾಳಿ ಜತೆ ಕೆಲವೊಮ್ಮೆ ಸುರಿದ ಅಬ್ಬರದ ಮಳೆಗೆ ಹಲವೆಡೆ ಹಾನಿ ಸಂಭವಿಸಿದೆ. ಉಡುಪಿ ಜಿಲ್ಲೆಯಲ್ಲಿ ಮಳೆ ಬಿರುಸು ಮುಂದುವರಿದಿದೆ. ಕುಕ್ಕೆ ಸುಬ್ರಹ್ಮಣ್ಯ ಸೇರಿ ಘಟ್ಟ ಪ್ರದೇಶ, ಕುಮಾರಪರ್ವತ ಭಾಗಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಕುಮಾರಧಾರಾ ಸ್ನಾನಘಟ್ಟ ಮುಳುಗಡೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net