

ಮುಂಬೈ: ಅಮೀರ್ ಖಾನ್ ಅವರ ಮಾಜಿ ಪತ್ನಿ ಕಿರಣ್ ರಾವ್ ನಿರ್ದೇಶಿಸಿರುವ ಲಾಪತಾ ಲೇಡಿಸ್ ಸಿನಿಮಾ ಆಸ್ಕರ್ ಪ್ರಶಸ್ತಿಗೆ ಭಾರತದ ಅಧಿಕೃತ ಪ್ರವೇಶವಾಗಿ ಆಯ್ಕೆಯಾಗಿದೆ ಎಂದು ಫಿಲಂ ಫೆಡರೇಷನ್ ಆಫ್ ಇಂಡಿಯಾ ಸೋಮವಾರ(ಸೆಪ್ಟೆಂಬರ್ 23) ಪ್ರಕಟಿಸಿದೆ. ಈ ಸಿನಿಮಾವು 2024 ಮಾರ್ಚ್ 1ರಂದು ರಿಲೀಸ್ ಆಗಿತ್ತು.
ಫಿಲಂ ಫೆಡರೇಷನ್ ಆಫ್ ಇಂಡಿಯಾದ ಈ ಪ್ರಕಟನೆ ಚಿತ್ರರಂಗದಲ್ಲಿ ಹಾಗೂ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಆಯ್ಕೆ ಸಮಿತಿಯು ಚಿತ್ರದ ನಿರೂಪಣೆ ಮತ್ತು ಕಥೆ ಹೇಳುವ ಶೈಲಿಯನ್ನು ಶ್ಲಾಘಿಸಿತು. ಮತ್ತು ಈ ಸಿನಿಮಾ ಆಸ್ಕರ್ ತೀರ್ಪುಗಾರರನ್ನೂ ಆಕರ್ಷಿಸುತ್ತದೆ ಎಂಬುದು ನಮ್ಮ ನಂಬಿಕೆ ಎಂದು ಹೇಳಿದರು.
ಇತ್ತೀಚೆಗಷ್ಟೇ ಕಿರಣ್ ರಾವ್ ಅವರು ಲಾಪತಾ ಲೇಡಿಸ್ ಸಿನಿಮಾ ಆಸ್ಕರ್‌ಗೆ ಹೋಗಬೇಕೆಂಬುದು ನನ್ನ ಕನಸು ಎಂದಿದ್ದರು. ಈ ಬಗ್ಗೆ ಮಾತನಾಡಿದ ಅವರು, ಲಾಪತಾ ಲೇಡಿಸ್ ಸಿನಿಮಾ ಅಕಾಡೆಮಿ ಪ್ರಶಸ್ತಿಗಳಿಗೆ ಭಾರತದ ಅಧಿಕೃತ ಪ್ರವೇಶವಾಗಿ ಆಯ್ಕೆಯಾಗಿರುವುದು ನನಗೆ ಅತ್ಯಂತ ಗೌರವ ಮತ್ತು ಸಂತೋಷವಾಗಿದೆ ಎಂದು ಹೇಳಿದರು.
ಈ ಗೌರವವು ನನ್ನ ಇಡೀ ತಂಡದ ಕಠಿಣ ಪರಿಶ್ರಮಕ್ಕೆ ಸಾಕ್ಷಿಯಾಗಿದೆ. ಅವರ ಸಮರ್ಪಣೆ ಮತ್ತು ಉತ್ಸಾಹವು ಈ ಕಥೆಗೆ ಜೀವ ತುಂಬಿದೆ. ಸಿನಿಮಾ ಯಾವಾಗಲೂ ಹೃದಯಗಳನ್ನು ಸಂಪರ್ಕಿಸಲು, ಗಡಿಗಳನ್ನು ಮೀರಲು ಮತ್ತು ಅರ್ಥಪೂರ್ಣ ಸಂಭಾಷಣೆಗಳನ್ನು ಬೆಳಗಿಸಲು ಪ್ರಬಲ ಮಾಧ್ಯಮವಾಗಿದೆ. ಈ ಚಿತ್ರವು ಭಾರತದಲ್ಲಿದ್ದಂತೆಯೇ ಪ್ರಪಂಚದಾದ್ಯಂತದ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂದು ಭಾವಿಸುತ್ತೇನೆ ಎಂದಿದ್ದಾರೆ. ಆಸ್ಕರ್ ನಾಮನಿರ್ದೇಶನದಕ್ಕಿ ಪ್ರತಿಕ್ರಿಯಿಸಿದ ಚಿತ್ರತಂಡ ಸಂತೋಷವಾಗಿದೆ ಎಂದು ಹೇಳಿ ಕೃತಜ್ಞತೆಯನ್ನು ವ್ಯಕ್ತಪಡಿಸಿದೆ.
97ನೇ ಆಸ್ಕರ್ ಪ್ರಶಸ್ತಿಗೆ ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾದ ಸಮಿತಿಯು 29 ಚಲನಚಿತ್ರಗಳ ಪಟ್ಟಿಯನ್ನು ಕಳುಹಿಸಿದೆ.ರಣಬೀರ್ ಕಪೂರ್ ಅವರ 'ಅನಿಮಲ್', ಮಲಯಾಳಂ ಚಿತ್ರ 'ಆಟ್ಟಂ', ಪಾಯಲ್ ಕಪಾಡಿಯಾ ಅವರ 'ಆಲ್ ವಿ ಇಮ್ಯಾಜಿನ್ ಆಡ್ ಲೈಟ್', ತೆಲುಗಿನ ಹನುಮಾನ್, ಕಲ್ಕಿ 2898 AD, ಸ್ವಾತಂತ್ರ್ಯ ವೀರ್ ಸಾವರ್ಕರ್', 'ಆರ್ಟಿಕಲ್ 370', ಚಂದು ಚಾಂಪಿಯನ್ ಸಿನಿಮಾಗಳು ಪಟ್ಟಿಯಲ್ಲಿ ಸೇರಿದ್ದವು.
97ನೇ ಆಸ್ಕರ್‌ಗೆ ನಾಮನಿರ್ದೇಶನಗಳನ್ನು 2025 ಜನವರಿ 17 ರಂದು (ಶುಕ್ರವಾರ) ಪ್ರಕಟಿಸಲಾಗುವುದು. ಆಸ್ಕರ್ 2025ರ ವಿಜೇತರನ್ನು 2025 ಮಾರ್ಚ್ 2 ರ ಭಾನುವಾರದಂದು ಘೋಷಿಸಲಾಗುತ್ತದೆ. ಆಸ್ಕರ್ 2025 ಈ ವರ್ಷದ ಪ್ರದರ್ಶನದಂತೆ 7 ಗಂಟೆಗೆ (EST) ಪ್ರಾರಂಭವಾಗುತ್ತದ
95ನೇ ಆವೃತ್ತಿಯಲ್ಲಿ ಭಾರತವು ಉತ್ತಮ ಪ್ರದರ್ಶನ ನೀಡಿತು. SS ರಾಜಮೌಳಿ ಅವರ RRR ಸಿನಿಮಾದ ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆಗಾಗಿ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಕಾರ್ತಿಕಿ ಗೊನ್ಸಾಲ್ವೆಸ್ ಮತ್ತು ಗುನೀತ್ ಮೊಂಗಾ ಅವರ ಸಾಕ್ಷ್ಯಚಿತ್ರ ದಿ ಎಲಿಫೆಂಟ್ ವಿಸ್ಪರ್ಸ್, ಅತ್ಯುತ್ತಮ ಸಾಕ್ಷ್ಯಚಿತ್ರ (ಸಣ್ಣ) ವಿಭಾಗದಲ್ಲಿ ಗೆದ್ದಿದೆ. ಅದೇ ಸಮಯದಲ್ಲಿ, ಶೌನಕ್ ಸೇನ್ ಅವರ ಆಲ್ ದಟ್ ಬ್ರೀತ್ಸ್ ಅತ್ಯುತ್ತಮ ಸಾಕ್ಷ್ಯಚಿತ್ರದ ಅಂತಿಮ ಪಟ್ಟಿಗೆ ಸೇರಿಸುವಲ್ಲಿ ಯಶಸ್ವಿಯಾಗಿದೆ.(ಏಜೆನ್ಸೀಸ್)