ನೂಕುನುಗ್ಗಲಿನಿಂದ ೩೦ ಮಂದಿ ಅಸ್ವಸ್ಥ - ಉರುಸ್ ಕಾರ್ಯಕ್ರಮಕ್ಕೆ ಹರಿದು ಬಂದ ಜನಪ್ರವಾಹ

PTR_29 JUN_8
Published on

ಕಡಬ ತಾಲೂಕಿನ ಕುದ್ಮಾರ್ ಫಝಲ್‌ನಗರದಲ್ಲಿ ‘ಕೂರತ್ ತಂಙಳ್’ ಎಂದೇ ಪ್ರಸಿದ್ಧರಾಗಿದ್ದ ಖುರ್ರ್‍ಅತುಸ್ವಾದಾತ್ ಸಯ್ಯದ್ ಫಝಲ್ ಕೊಯಮ್ಮ ತಂಙಳ್ ಅಲ್ ಬುಖಾರಿ ಹೆಸರಿನಲ್ಲಿ ನಡೆದ ಉರುಸ್ ಮುಬಾರಕ್‌ನ ಕೊನೆಯ ದಿನ ಲಕ್ಷಾಂತರ ಮಂದಿ ಆಗಮಿಸಿದ ಪರಿಣಾಮ ನೂಕುನುಗ್ಗಲು ಉಂಟಾಗಿ ಹಲವು ಮಂದಿ ಅಸ್ವಸ್ಥಗೊಂಡಿದ್ದಾರೆ.

ಹಸ್ನಾ(೧೮), ಪಾಯಿಝಾ(೧೮), ಸಮ್ರಿನ್(೧೯), ಮೈಮೂನಾ(೩೬) ಸಹಿತ ೬ ಮಂದಿ ಪುತ್ತೂರು ಆಸ್ಪತ್ರೆಯಲ್ಲಿ, ಮೂವರು ಕಾಣಿಯೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ೨೦ಕ್ಕೂ ಅಽಕ ಮಂದಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಜೂನ್ ೨೬ರಿಂದ ೨೯ರವರೆಗೆ ನಡೆದ ಉರುಸ್ ಕಾರ್ಯಕ್ರಮದ ಕೊನೆಯ ದಿನ ೩೦-೪೦ ಸಾವಿರ ಮಂದಿ ಸೇರುವ ನಿರೀಕ್ಷೆಯಿದ್ದು, ವ್ಯವಸ್ಥೆ ಮಾಡಲಾಗಿತ್ತು. ಆದರೆ ಲಕ್ಷಕ್ಕೂ ಮಿಕ್ಕಿ ಜನರು ಆಗಮಿಸಿ ಪ್ರಾರ್ಥನೆಯಲ್ಲಿ ತೊಡಗಿದ್ದರು. ಮಧ್ಯಾಹ್ನ ಅನ್ನದಾನ ಸಂದರ್ಭ ಊಟದ ಸರತಿ ಸಾಲಿನಲ್ಲಿ ನೂಕುನುಗ್ಗಲು ಉಂಟಾಗಿ ಹಲವರಿಗೆ ಉಸಿರಾಟಲು ಸಮಸ್ಯೆಯಾಗಿದೆ ಎನ್ನಲಾಗಿದೆ. ಕೆಲಮೂಲಗಳ ಪ್ರಕಾರ ಜೇನುಗೂಡಿಗೆ ಹಾನಿಯಾಗಿ ನೊಣಗಳು ದಾಳಿ ನಡೆಸಿವೆ ಎನ್ನಲಾದರೂ ಅಸ್ವಸ್ಥರಾದವರಿಗೆ ಜೇನುನೊಣ ಕಚ್ಚಿರುವ ಕುರುಹು ಕಾಣಿಸಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

೨ ಕಿ.ಮೀ. ವ್ಯಾಪ್ತಿ ವಾಹನ ದಟ್ಟಣೆ

ಕಿಕ್ಕಿರಿದ ಜನಸಂದಣಿಯಲ್ಲಿ ಆಂಬುಲೆನ್ಸ್ ಬರಲು ಪರದಾಡಬೇಕಾಯಿತು. ಸುಮಾರು ೩೦ ಆಂಬುಲೆನ್ಸ್ ಸ್ಥಳಕ್ಕಾಗಮಿಸಿದೆ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಭಾನುವಾರ ಬೆಳಗ್ಗೆಯಿಂದಲೇ ಲಕ್ಷಾಂತರ ಮಂದಿ ಆಗಮಿಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಸ್ಥಳವನ್ನು ಸಂಪರ್ಕಿಸುವ ಎಲ್ಲ ರಸ್ತೆಗಳು ಬ್ಲಾಕ್ ಆಗಿತ್ತು. ಸುಬ್ರಹ್ಮಣ್ಯ-ಮಂಜೇಶ್ವರ ರಸ್ತೆಯ ಸವಣೂರಿನಿಂದ ಬರೆಪ್ಪಾಡಿ ತನಕ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕುದ್ಮಾರಿನಿಂದ ಸುಮಾರು ೨ ಕಿ.ಮೀ. ವ್ಯಾಪ್ತಿಯಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ನಾಣಿಲ-ಕುದ್ಮಾರು ಒಳ ರಸ್ತೆ, ಶಾಂತಿಮೊಗರು-ಆಲಂಕಾರು ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರು ಪರದಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net