

ವಿಜಯವಾಣಿ ಸುದ್ದಿಜಾಲ ಮಂಗಳೂರು
ರಾಜ್ಯದ ಅನುದಾನ ರಹಿತ ಪದವಿಪೂರ್ವ ಕಾಲೇಜುಗಳ ಮಾನ್ಯತೆಯನ್ನು ಈ ವರ್ಷದಿಂದ ಮುಂದಿನ 10 ವರ್ಷಗಳ ಅವಧಿಗೆ ನವೀಕರಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವ ಮಧು ಬಂಗಾರಪ್ಪ ಅವರು ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಕರ್ನಾಟಕ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘ (ಕುಪ್ಮಾ)ದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಜರುಗಿದ ಸಭೆಯಲ್ಲಿ ಸಚಿವರು ಈ ಸೂಚನೆ ನೀಡಿದರು.
ಸಂಘದ ಬೇಡಿಕೆಗೆ ಸ್ಪಂದಿಸಿ ಸಚಿವರು ಈ ಸೂಚನೆ ನೀಡಿದರು ಎಂದು ಕುಪ್ಮಾ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮತ್ತು ಕಾರ್ಯದರ್ಶಿ ಪ್ರೊ.ನರೇಂದ್ರ ಎಲ್.ನಾಯಕ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಆನ್‌ಲೈನ್ ಅರ್ಜಿಯಲ್ಲಿರುವ ದಾಖಲೆಗಳನ್ನು ಮಾತ್ರ ಪರಿಗಣಿಸಲಾಗುವುದು ಎಂದು ತಿಳಿಸಿದ ಸಚಿವರು, ಇದಕ್ಕೆ ತಗಲುವ ಶುಲ್ಕವನ್ನು ಖಾಸಗಿ ಆಡಳಿತ ಮಂಡಳಿಗಳು ಪಾವತಿಸಲು ಸಿದ್ಧರಿರಬೇಕೆಂದು ಸೂಚಿಸಿದ್ದಾರೆ.
ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಶಾಲಾ ಶಿಕ್ಷಣ (ಪದವಿ ಪೂರ್ವ) ನಿರ್ದೇಶಕಿ ಸಿಂಧು ರೂಪೇಶ್, ಜಂಟಿ ನಿರ್ದೇಶಕಿ ಶ್ವೇತಾ. ಜಿ.ಎನ್, ಕುಪ್ಮಾದ ಅಧ್ಯಕ್ಷ ಡಾ. ಮೋಹನ್ ಆಳ್ವ, ಕಾರ್ಯದರ್ಶಿ ಪ್ರೊ.ನರೇಂದ್ರ ಎಲ್.ನಾಯಕ್ , ಗೌರವಾಧ್ಯಕ್ಷ ಪ್ರೊ.ಎಂ.ಬಿ ಪುರಾಣಿಕ್, ಉಪಾಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿ, ಯುವರಾಜ್ ಜೈನ್, ಸದ್ಯಸರಾದ ಸುಬ್ರಹ್ಮಣ್ಯ ನಟ್ಟೋಜ, ಜೊತೆ ಕಾರ್ಯದರ್ಶಿ ವಿಶ್ವನಾಥ ಶೇಷಾಚಲ, ಬೆಂಗಳೂರಿನ ದಕ್ಷಿಣ ಜಿಲ್ಲಾಧ್ಯಕ್ಷ ಡಾ.ಜಯರಾಮ ಶೆಟ್ಟಿ, ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿ ದೇವರಾಜ ಬಿ, ದಾವಣಗೆರೆಯ ಜಿಲ್ಲೆಯ ಅಧ್ಯಕ್ಷ ಎಸ್.ಜೆ ಶ್ರೀಧರ್, ಹಾವೇರಿ ಜಿಲ್ಲೆಯ ಅಧ್ಯಕ್ಷ ಸತೀಶ ಬಾಗಣ್ಣನವರ, ಖಜಾಂಚಿ ರಮೇಶ ಕೆ ಉಪಸ್ಥಿತರಿದ್ದರು.