ಸಹಚರರಿಂದಲೇ ರಹಸ್ಯ ಬಯಲಾಯ್ತು... ಕುಖ್ಯಾತ ರೌಡಿಶೀಟರ್ ಕುಣಿಗಲ್ ಗಿರಿ ಬಂಧನ

kunigal giri
Published on

ಬೆಂಗಳೂರು: ಕಾಮಾಕ್ಷಿಪಾಳ್ಯದಲ್ಲಿ ನ. 7ರಂದು ನಡೆದ ಕಾರು ಚಾಲಕ ಮಂಜುನಾಥ್​ ಎಂಬಾತನ ಹತ್ಯೆ ಪ್ರಕರಣದಲ್ಲಿ ರೌಡಿಶೀಟರ್​ ಕುಣಿಗಲ್​ ಗಿರಿಯನ್ನು ಪೊಲೀಸರು ಬಂಧಿಸಿದ್ದಾರೆ. ನೂರಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಬಂಧಿತ ಆರೋಪಿ ಕುಣಿಗಲ್​ ಗಿರಿ ಹೇಳಿಕೆ ನೀಡಿದ್ದಾನೆ.

ಮಂಜುನಾಥ್​ ಹತ್ಯೆಗೆ ಸಹಚರರಾದ ವಿಶ್ವನಾಥ್​ ಅಲಿಯಾಸ್​ ಸೈಕೋ ಹಾಗೂ ಲಕ್ಷ್ಮಣ ಅಲಿಯಾಸ್​ ಸುಳಿಗೆ ಸೂಚಿಸಿದ್ದ. ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿತ್ತು. ಅವರು ನೀಡಿದ ಮಾಹಿತಿ ಹಾಗೂ ತನಿಖೆ ವೇಳೆ ಸಿಕ್ಕ ಸಾಕ್ಷಿಯನ್ನು ಆಧರಿಸಿ ಕುಣಿಗಲ್​ ಗಿರಿಯನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ. ಸಂಜೀವ್​ ಎಂ.ಪಾಟೀಲ್​ ತಿಳಿಸಿದ್ದಾರೆ. ವಿಶ್ವನಾಥ್​ ಅಲಿಯಾಸ್​ ಸೈಕೋ ಈ ಹಿಂದೆ ಅಪರಾಧ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ. ಈತನನ್ನು ಕುಣಿಗಲ್​ ಗಿರಿ ಜಾಮೀನಿನ ಮೇಲೆ ಹೊರತಂದಿದ್ದ. ಇದೇ ವಿಶ್ವಾಸಕ್ಕೆ ಕುಣಿಗಲ್​ ಗಿರಿಯ ಶಿಷ್ಯನಾಗಿ ವಿಶ್ವನಾಥ್​ ಗುರುತಿಸಿಕೊಂಡಿದ್ದ. ಕೆಲ ತಿಂಗಳ ಹಿಂದೆ ಚಾಲಕ ಮಂಜುನಾಥ್​ ಮತ್ತು ಕುಣಿಗಲ್​ ಗಿರಿ ನಡುವೆ ವೈಮನಸ್ಸು ಉಂಟಾಗಿತ್ತು. ಮಂಜುನಾಥ್​ ಜನರ ಮುಂದೆ ಗಿರಿ ಬಗ್ಗೆ ಅವಹೇಳನ ಮಾಡಿಕೊಂಡು ತಿರುಗಾಡುತ್ತಿದ್ದ. ಈ ವಿಚಾರ ಗಿರಿಗೆ ಗೊತ್ತಾಗಿದ್ದು, ಆತನನ್ನು ವಿಚಾರಿಸಿಕೊಳ್ಳುವಂತೆ ಸಹಚರ ವಿಶ್ವನಾಥ್​ಗೆ ಸೂಚಿಸಿದ್ದ.

ವಿಶ್ವನಾಥ್​ನ ಸ್ನೇಹಿತ ಲಕ್ಷ್ಮಣ ಅಲಿಯಾಸ್​ ಸುಳಿ ಹಾಗೂ ಮಂಜುನಾಥ್​ ನಡುವೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆಯಾಗಿತ್ತು. ರಾಜೀಸಂಧಾನದ ನೆಪದಲ್ಲಿ ನ.7ರಂದು ಮಂಜುನಾಥ್​ನನ್ನು ಕರೆದೊಯ್ದಿದ್ದರು. ತಲಘಟ್ಟಪುರದ ನಿರ್ಜನ ಪ್ರದೇಶದಲ್ಲಿ ವಿಶ್ವನಾಥ್​, ಲಕ್ಷ್ಮಣ ಮತ್ತು ಮಂಜು ಸೇರಿ ಮದ್ಯದ ಪಾರ್ಟಿ ಮಾಡಿದ್ದರು. ಈ ವೇಳೆ ಮಂಜುನಾಥ್​ನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು. ಬಳಿಕ ಶವವನ್ನು ಕಾಮಾಕ್ಷಿಪಾಳ್ಯದಲ್ಲಿ ತಂದು ಎಸೆದಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಾದ ವಿಶ್ವನಾಥ್​ ಮತ್ತು ಲಕ್ಷ್ಮಣನನ್ನು ಬಂಧಿಸಲಾಗಿತ್ತು.

ವಿಶ್ವನಾಥ್​ ತಾನು ಕುಣಿಗಲ್​ ಗಿರಿಯ ಸಹಚರ ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ. ಆರೋಪಿಗಳ ಮೊಬೈಲ್​ ಪರಿಶೀಲಿಸಿದಾಗ ಆರೋಪಿಗಳ ಜತೆಗೆ ಕುಣಿಗಲ್​ ಗಿರಿ ನಿರಂತರ ಸಂಪರ್ಕದಲ್ಲಿದ್ದ ಎಂಬುದು ಗೊತ್ತಾಗಿದೆ. ಮಂಜುನಾಥ್​ನನ್ನು ವಿಚಾರಿಸಿಕೊಳ್ಳುವಂತೆ ಗಿರಿ ಸೂಚಿಸಿದ್ದ ಎಂಬುದಾಗಿ ವಿಶ್ವನಾಥ್​ ಹೇಳಿಕೆ ನೀಡಿದ್ದ. ಇದನ್ನು ಆಧರಿಸಿ ಕುಣಿಗಲ್​ನಲ್ಲಿದ್ದ ಗಿರಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನೂರಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಬಂಧಿತ ಆರೋಪಿ ಕುಣಿಗಲ್​ ಗಿರಿ ಹೇಳಿಕೆ ನೀಡಿದ್ದಾನೆ. 75 ಪ್ರಕರಣಗಳ ಮಾಹಿತಿ ಸಂಗ್ರಹಿಸಲಾಗಿದೆ. ಇನ್ನುಳಿದ ಪ್ರಕರಣಗಳನ್ನು ಪರಿಶೀಲಿಸಲಾಗುತ್ತಿದೆ. ಗ್ರಾಪಂ ಚುನಾವಣೆಯಲ್ಲಿ ತನ್ನ ಬೆಂಬಲಿಗರ ಪರವಾಗಿ ಪ್ರಚಾರದಲ್ಲಿ ತೊಡಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ತಿಂಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಇದೆ. ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಕುಣಿಗಲ್ ಗಿರಿಯ ಆರ್ಭಟ ಜೋರಾಗಿದೆ. ಚುನಾವಣೆಯಲ್ಲಿ ತನ್ನ ಬೆಂಬಲಿಗರ ಪರವಾಗಿ ಪ್ರಚಾರದಲ್ಲಿ ತೊಡಗಿದ್ದ ಗಿರಿ, ಅವಿರೋಧ ಆಯ್ಕೆಗೆ ಸಿದ್ಧತೆ ನಡೆಸಿದ್ದ ಎಂದು ಗೊತ್ತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net