

ಗಂಗಾವತಿ: ನಗರದ ಇಸ್ಲಾಂಪುರ ಶ್ರೀ ಈರಣ್ಣ ದೇವರ ದೇವಾಲಯದ 29ನೇ ವರ್ಷದ ಕುಂಭಮಹೋತ್ಸವ ನಿಮಿತ್ತ ಗುರುವಾರ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಐತಿಹಾಸಿಕ ಹಿನ್ನೆಲೆಯ ದೇವಾಲಯವಾಗಿದ್ದು, ಶ್ರಾವಣ ಮಾಸದ ನಿಮಿತ್ತ ದೇವಾಲಯದಲ್ಲಿ ಅಭಿಷೇಕ, ರುದ್ರಾಭಿಷೇಕ, ಹೂವಿನ ಅಲಂಕಾರ ಮತ್ತು ಸಾಮೂಹಿಕ ಪ್ರಸಾದ ವಿತರಿಸಲಾಯಿತು. ಇದಕ್ಕೂ ಮುನ್ನ ಶ್ರೀ ವೀರಭದ್ರೇಶ್ವರ ಭಾವಚಿತ್ರವನ್ನು ನಗರದ ಶ್ರೀ ಕೊಟ್ಟೂರು ಬಸವೇಶ್ವರ ದೇವಾಲಯದಿಂದ ಶ್ರೀ ಈರಣ್ಣ ದೇವರ ದೇವಾಲಯದವರೆಗೂ 108 ಕುಂಭ ಮತ್ತು ವಾದ್ಯ ಮೇಳದೊಂದಿಗೆ ಅದ್ದೂರಿಯಾಗಿ ನೆರವೇರಿಸಲಾಯಿತು.
ಪುರವಂತಿಕೆ ಗಮನಸೆಳೆದಿದ್ದು, ಭಕ್ತರು ಶಸ ಹಾಕಿಸಿಕೊಳ್ಳುವ ಮೂಲಕ ಹರಕೆ ಸಲ್ಲಿಸಿದರು. ಕಾರ್ಯಕ್ರಮಗಳ ಕುರಿತು ದೇವಾಲಯ ಸಮಿತಿ ಸದಸ್ಯ ಹುರಕಡ್ಲಿ ಪಂಪಾಪತಿ ಮಾಹಿತಿ ನೀಡಿದರು. ಅಧ್ಯಕ್ಷ ಓಲಿ ಶರಣಪ್ಪ, ಸದಸ್ಯರಾದ ಅಕ್ಕಿ ಕೊಟ್ರಪ್ಪ, ಶೇಖರಪ್ಪ, ಜಗದೀಶಪ್ಪ, ಸಿದ್ದಲಿಂಗೇಶ ಪೂಲಭಾವಿ, ಗಿರೀಶ್ ಬಳ್ಳಾರಿ, ಮಹಿಳಾ ಮಂಡಳಿಯ ಪ್ರತಿನಿಧಿ ಕವಿತಾ ಗುರುಮೂರ್ತಿ ಇತರರಿದ್ದರು.