

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಚಂಪಾಷಷ್ಠಿ ಜಾತ್ರೆಯ ಬ್ರಹ್ಮರಥೋತ್ಸವ ಶನಿವಾರ ಶಿಸ್ತುಬದ್ಧವಾಗಿ ನೆರವೇರಿತು. ಲಕ್ಷಾಂತರ ಭಕ್ತರು ಸೇರಿದ್ದರೂ ಯಾವುದೇ ಗೊಂದಲ, ಅಡಚಣೆಯಿಲ್ಲದೆ ಜಾತ್ರೆ ಸಾಂಗವಾಗಿ ನಡೆದಿದ್ದು, ಅಧಿಕಾರಿಗಳ ಪೂರ್ವಸಿದ್ಧತೆ ಸರ್ವತ್ರ ಶ್ಲಾಘನೆಗೆ ಪಾತ್ರವಾಯಿತು.
ಬ್ರಹ್ಮರಥೋತ್ಸವದ ಧಾರ್ಮಿಕ ವಿಧಿವಿಧಾನಗಳು ದೇವಳದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯರ ನೇತೃತ್ವದಲ್ಲಿ ನೆರವೇರಿದವು. ಅನ್ನದಾನ, ಪಾರ್ಕಿಂಗ್ ಸೇರಿದಂತೆ ಎಲ್ಲ ವ್ಯವಸ್ಥೆಗಳು ಅಚ್ಚುಕಟ್ಟಾಗಿದ್ದವು.
ಯಶಸ್ವಿಗೆ ಹಾರ ಸಮರ್ಪಣೆ
ಶ್ರೀ ದೇವರ ಬ್ರಹ್ಮರಥ ಸ್ವಸ್ಥಾನವನ್ನು ತಲುಪಿದ ಬಳಿಕ ಬ್ರಹ್ಮರಥೋತ್ಸವ ಯಶಸ್ವಿಯಾದ ಸಂಕೇತವಾಗಿ ದೇವಳದ ಗಜರಾಣಿ ಯಶಸ್ವಿಗೆ ಪ್ರಧಾನ ಅರ್ಚಕರು ಮಲ್ಲಿಗೆ ಮಾಲೆ ಹಾಕಿದರು. ರಥದ ಮೇಲಿಂದ ಹಾಕಿದ ಮಾಲೆ ಸರಿಯಾಗಿ ಯಶಸ್ವಿಯ ಕೊರಳನ್ನು ಅಲಂಕರಿಸಿತು.
ನಿವಾಳಿ ಸಮರ್ಪಣೆ
ರಥೋತ್ಸವದ ಬಳಿಕ ಉಮಾಮಹೇಶ್ವರ ಹಾಗೂ ಸುಬ್ರಹ್ಮಣ್ಯ ದೇವರಿಗೆ ರಥಬೀದಿಯಲ್ಲಿರುವ ಷಷ್ಠಿ ಕಟ್ಟೆಯಲ್ಲಿ ವಿಶೇಷ ಪೂಜೆ ನೆರವೇರಿತು. ಆ ನಂತರ ಬ್ರಹ್ಮರಥೋತ್ಸವ ನೆರವೇರಿಸಿ ಬಂದ ಸ್ವಾಮಿಯ ಪಲ್ಲಕಿಗೆ ಗೋಪುರದ ದ್ವಾರದ ಬಳಿ ಶಾಲು ಕಟ್ಟುವ ಮೂಲಕ ನಿವಾಳಿ ಸಮರ್ಪಿಸಲಾಯಿತು.
ದ್ವಾದಶಿ ಮಂಟಪದಲ್ಲಿ ಪೂಜೆ
ದೇವಳದ ಹೊರಾಂಗಣದಲ್ಲಿರುವ ದ್ವಾದಶಿ ಮಂಟಪದಲ್ಲಿ ಮಯೂರ ವಾಹನದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಮತ್ತು ಉಮಾಮಹೇಶ್ವರ ದೇವರಿಗೆ ಪೂಜೆ ನಡೆಯಿತು. ಶ್ರೀ ದೇವರು ಗರ್ಭಗುಡಿಗೆ ಪ್ರವೇಶಿಸಿದ ನಂತರ ಸೀತಾರಾಮ ಎಡಪಡಿತ್ತಾಯರು ಮೂಲಪ್ರಸಾದ ವಿತರಿಸಿದರು. ಬ್ರಹ್ಮರಥ ಹರಕೆ ಸೇವೆ ಸಲ್ಲಿಸಿದವರಿಗೆ ಶಾಲು ಹೊದಿಸಿ ಮಹಾಪ್ರಸಾದ ನೀಡಿದರು.
ಶಾಸಕಿ ಭಾಗೀರಥಿ ಮುರುಳ್ಯ, ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್., ದೇವಳದ ಆಡಳಿತಾಧಿಕಾರಿ ಹಾಗೂ ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ, ಮಾಜಿ ಸಚಿವ ಬಿ.ರಮಾನಾಥ ರೈ, ಬ್ರಹ್ಮರಥ ದಾನಿ ಅಜಿತ್ ಶೆಟ್ಟಿ ಕಡಬ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್ ಮತ್ತಿತರರು ಉಪಸ್ಥಿತರಿದ್ದರು.
ಬ್ರಹ್ಮರಥ ಎಳೆದ ಎಸಿ, ಎಸ್‌ಪಿ
ಬ್ರಹ್ಮರಥವನ್ನು ಪೊಲೀಸ್ ವರಿಷ್ಠಾಧಿಕಾರಿ ಋಷ್ಯಂತ್, ಪುತ್ತೂರು ಉಪವಿಭಾಗ ಸಹಾಯಕ ಆಯುಕ್ತ ಮತ್ತು ಶ್ರೀ ದೇವಳದ ಆಡಳಿತಾಧಿಕಾರಿ ಜುಬಿನ್ ಮೊಹಾಪಾತ್ರಾ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಬ್ರಹ್ಮರಥ ದಾನಿಗಳಲ್ಲಿ ಓರ್ವರಾದ ಉದ್ಯಮಿ ಅಜಿತ್ ಶೆಟ್ಟಿ ಕಡಬ ಎಳೆದು ಕೃತಾರ್ಥರಾದರು. ಪಂಚಮಿ ರಥವನ್ನು ಎಳೆಯುವ ಸೇವೆಯನ್ನು ಕೂಡಾ ಮಾಡಿದರು.
ಬೆತ್ತ ದೇವಳಕ್ಕೆ
ಹಿಂದೆ ಬ್ರಹ್ಮರಥ ಎಳೆದ ಬೆತ್ತವನ್ನು ರಥ ಎಳೆದ ಭಕ್ತರಿಗೆ ನೀಡಲಾಗುತ್ತಿತ್ತು.ಇದರಿಂದಾಗಿ ರಥ ಎಳೆದ ತಕ್ಷಣ ಬೆತ್ತಕ್ಕಾಗಿ ಭಕ್ತರು ನೂಕುನುಗ್ಗಲು ಮಾಡುತ್ತಿದ್ದರು. ಇದನ್ನು ತಪ್ಪಿಸಲು ರಥ ಎಳೆಯಲು ಉಪಯೋಗಿಸಿದ ಬೆತ್ತವನ್ನು ಶ್ರೀ ದೇವಳಕ್ಕೆ ಕೊಂಡೊಯ್ಯಲಾಯಿತು.
ಬೀದಿ ಉರುಳು ಸೇವೆ ಸಂಪನ್ನ
ಕುಮಾರಧಾರಾ ತೀರ್ಥಸ್ನಾನದಿಂದ ದೇವಳದ ತನಕ ಸುಮಾರು 2ಕಿ.ಮೀ ದೂರದವರೆಗೆ ಉರುಳುತ್ತಾ ಸಾಗುವ ಹರಕೆ ಸೇವೆಯಾದ ಬೀದಿ ಉರುಳು ಸೇವೆಯು ಮಹಾರಥೋತ್ಸವದೊಂದಿಗೆ ಸಂಪನ್ನಗೊಂಡಿತು.ಈ ಸೇವೆಯನ್ನು ಜಾತ್ರಾ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ನೆರವೇರಿಸಿದ್ದರು.
ಭಕ್ತ ಸಾಗರ-ನಿರಂತರ ಅನ್ನದಾನ
ಚಂಪಾಷಷ್ಠಿಯ ದಿನ ನಾಗಾರಾಧನೆಯ ಪ್ರಧಾನ ಕ್ಷೇತ್ರ ಕುಕ್ಕೆಗೆ ಭಕ್ತ ಸಾಗರವೇ ಹರಿದು ಬಂದಿತ್ತು.ಬ್ರಹ್ಮರಥೋತ್ಸವದ ಸಂದರ್ಭ ರಥಬೀದಿಯ ಇಕ್ಕೆಲದಲ್ಲಿ ಮತ್ತು ರಥೋತ್ಸವದ ಬಳಿಕ ರಥಬೀದಿ ತುಂಬೆಲ್ಲ ಭಕ್ತ ಸಂದೋಹವೇ ಕಂಡು ಬಂತು. ಆದಿಸುಬ್ರಹ್ಮಣ್ಯ, ದೇವಳದ ಹೊರಾಂಗಣ, ಒಳಾಂಗಣದಲ್ಲಿ ಭಕ್ತ ಸಾಗರವೇ ಕಂಡು ಬಂದಿತ್ತು.ಷಷ್ಠಿಯ ಸುದಿನ ಷಣ್ಮುಖ ಪ್ರಸಾದ ಭೋಜನ ಶಾಲೆ ಮತ್ತು ಅಂಗಡಿಗುಡ್ಡೆ ವಿಶೇಷ ಭೋಜನ ಸತ್ರ ಅನ್ನಪೂರ್ಣ, ಆದಿಸುಬ್ರಹ್ಮಣ್ಯ ಭೋಜನ ಶಾಲೆಯಲ್ಲಿ ಬೆಳಗ್ಗೆ 10.30ರಿಂದ ಸಂಜೆ 5 ಗಂಟೆಯ ತನಕ ನಿರಂತರವಾಗಿ ಅನ್ನಪ್ರಸಾದವನ್ನು ಸಹಸ್ರಾರು ಭಕ್ತರು ಸ್ವೀಕರಿಸಿದರು.