ಕ್ರಿಕೆಟ್​ ಬ್ಯಾಟ್​ ಮೇಲೆ ಕಣ್ಣು​, ಕ್ರೈಂ ಚಿತ್ರಗಳ ವೀಕ್ಷಣೆ! ಸಹಸ್ರ ಕೊಲೆಯ ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಖಾಕಿ | Sahasra Case

ವಿಜಯವಾಣಿ - 2025-08-23T155106.816
Published on

Kukatpally Sahasra Case: ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ಸಂಚಲನ ಮೂಡಿಸಿದ ಕುಕಟ್ಪಲ್ಲಿ ಮೂಲದ ಶಾಲಾ ಬಾಲಕಿಯ ಕೊಲೆ ಪ್ರಕರಣದ ಆರೋಪಿ ಕಡೆಗೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಹತ್ಯೆ ನಡೆದ ಮೊದಲ ಮೂರು ದಿನ, ವಿದ್ಯಾರ್ಥಿಯನ್ನು ಬರ್ಬರವಾಗಿ ಕೊಲೆಗೈದವರು ಯಾರು? ಇದರ ಹಿಂದಿರುವ ಉದ್ದೇಶವಾದರೂ ಏನು? ಎಂಬ ಹತ್ತಾರು ಪ್ರಶ್ನೆಗಳು ಖಾಕಿಯನ್ನು ಬೆಂಬಿಡದೆ ಸುತ್ತುವರೆದಿತ್ತು. ಇದೀಗ ಆ ಪ್ರಶ್ನೆಗಳಿಗೆ ಸ್ಪಷ್ಟ ಚಿತ್ರಣ ಸಿಕ್ಕಿದ್ದು, ಕೊಲೆಯ ಇಂಚಿಂಚೂ ಮಾಹಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಡಲಾಗಿದೆ.

ಬ್ಯಾಟ್​ ಕದಿಯಲು ಸಂಚು

ಆಂಧ್ರದಲ್ಲಿ ಸಂಚಲನ ಮೂಡಿಸಿದ್ದ ಕುಕಟ್ಪಲ್ಲಿ ಸಹಸ್ರ ಕೊಲೆ ಪ್ರಕರಣದ ಸಂಪೂರ್ಣ ವಿವರವನ್ನು ಬಹಿರಂಗಪಡಿಸಿರುವ ಸಿಪಿ ಅವಿನಾಶ್ ಮಹಾಂತಿ, "ಇದೆಲ್ಲವೂ ಒಂದು ಕ್ರಿಕೆಟ್ ಬ್ಯಾಟ್‌ಗಾಗಿ ನಡೆದಿರುವುದು ಎಂಬ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬಾಲಕಿಯನ್ನು ಕೊಲೆಗೈದ ಎಸ್ಸೆಸ್ಸೆಲ್ಸಿ ಹುಡುಗ, ಒಂದು ತಿಂಗಳ ಮೊದಲೇ ಬ್ಯಾಟ್ ಕದಿಯಲು ಸಂಚು ಹಾಕಿದ್ದ. ಆದಾಗ್ಯೂ, ಸಹಸ್ರಳ ಕೊಲೆಯ ಬಳಿಕ ಪತ್ತೆಯಾಗದಿರಲು ಹಲವಾರು ಪ್ರಯತ್ನಗಳನ್ನೂ ಮಾಡಿದ್ದ. ಆದರೆ, ಆತನನ್ನ ಸಾಕ್ಷಿ ಸಮೇತ ಬಂಧಿಸುವಲ್ಲಿ ನಮ್ಮ ಪಡೆ (ಪೊಲೀಸರು) ಯಶಸ್ವಿಯಾಗಿದೆ" ಎಂದರು.

"ಕ್ರಿಕೆಟ್​ ಬ್ಯಾಟ್​ ಕದಿಯಲು ಮನೆಗೆ ನುಗ್ಗಲು ಯತ್ನಿಸಿದ ಆತ, ಯಾರೂ ಇಲ್ಲ ಎಂದು ಭಾವಿಸಿ, ಬಾಲಕಿಯಿದ್ದ ಮನೆಯೊಳಗೆ ಹೋಗಿದ್ದ. ಈ ಕಳ್ಳತನ ಮಾಡಲು ಆತ ಒಂದು ತಿಂಗಳಿನಿಂದ ಪೂರ್ವತಯಾರಿ ಮಾಡಿಕೊಂಡಿದ್ದ. ತನ್ನ ಸಂಚನ್ನು ಒಂದು ಕಾಗದದ ಮೇಲೂ ಬರೆದಿಟ್ಟಿದ್ದ. ಬಾಲಕಿ ಸಹಸ್ರ, ಆರೋಪಿ ಬ್ಯಾಟ್ ಕದಿಯುತ್ತಿರುವುದನ್ನು ನೋಡಿದ್ದಾಳೆ. ತಕ್ಷಣ ಕಳ್ಳ, ಕಳ್ಳ ಎಂದು ಚೀರಾಡಿದ್ದಾಳೆ. ಇದರಿಂದ ಗಾಬರಿಯಾದ ಆತ, ಚಾಕುವಿನಿಂದ ಸಹ್ರಸಾಳ ಕತ್ತು ಸೀಳಿ, ಹೊಟ್ಟೆಗೆ ಇರಿದು ಕೊಂದಿದ್ದಾನೆ" ಎಂದಿದ್ದಾರೆ.

"ಸಹಸ್ರಳ ಕೊಲೆ ಬಳಿಕ ಹುಡುಗ ಗೋಡೆ ಹಾರಿ ಪರಾರಿಯಾಗಿದ್ದಾನೆ. ಮನೆಯಲ್ಲಿ ರಕ್ತದ ಕಲೆಗಳು ಉಳಿಯದಂತೆ ಆತ ಜಾಗರೂಕತೆ ವಹಿಸಿದ್ದಾನೆ. ಹತ್ಯೆ ಬೆನ್ನಲ್ಲೇ ಯಾವ ರೀತಿಯಲ್ಲೂ ಸಾಕ್ಷ್ಯ ಸಿಗದಂತೆ ನಾಶಮಾಡಲು ಪ್ರಯತ್ನಿಸಿದ್ದಾನೆ. ಮನೆಯ ಮುಂದಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಹುಡುಗನ ಎಂಟ್ರಿ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಈ ತಿಂಗಳ 18ರಂದು ಬಾಲಕಿಯನ್ನು ಕೊಲೆ ಮಾಡಲಾಗಿದೆ. ಮೂರು ದಿನಗಳವರೆಗೆ ಸರಿಯಾದ ಸುಳಿವು ಸಿಕ್ಕಿರಲಿಲ್ಲ. ಆರೋಪಿ ಪೊಲೀಸರನ್ನು ದಾರಿ ತಪ್ಪಿಸಿದ್ದ. ತಾನು ಹೇಗೆ ದರೋಡೆ ಮಾಡಬೇಕು ಎಂಬುದನ್ನು ಕ್ರೈಂ ಆಧರಿತ ವಿಡಿಯೋ, ಚಿತ್ರಗಳನ್ನು ವೀಕ್ಷಿಸಿದ್ದ" ಎಂದು ಹೇಳಿದ್ದಾರೆ.

ಪತ್ರದಲ್ಲಿ ಏನಿತ್ತು?

ಆದಾಗ್ಯೂ, ಕಳ್ಳತನ ಮಾಡುವ ಮೊದಲು ಆತ ಪೂರ್ವತಯಾರಿ ಮಾಡಿಕೊಂಡು ಬಂದಿದ್ದ ಆರೋಪಿ, ಒಂದು ಕಾಗದದ ಮೇಲೆ ತಾನು ಏನೆಲ್ಲ ಮಾಡಬೇಕು ಎಂಬುದನ್ನು ಬರೆದುಕೊಂಡಿದ್ದ. ಪತ್ರದಲ್ಲಿ, ತಾನು ಹೇಗೆ ಕದಿಯಬೇಕು? ತಪ್ಪಿಸಿಕೊಳ್ಳುವುದು ಹೇಗೆ? ಸಿಕ್ಕಿಬಿದ್ದರೆ ಏನು ಮಾಡಬೇಕು? ಎಂಬುದರ ಸಂಪೂರ್ಣ ವಿವರವನ್ನು ವೈರಲ್​ ಪತ್ರದ ಮೇಲೆ ಬರೆದಿರುವುದು ತನಿಖೆಯಲ್ಲಿ ಬಯಲಾಗಿದೆ.

ಬಾಗಿಲು ಒಡೆಯುವುದು ಹೇಗೆ, ಬೀಗ ಮುರಿಯುವುದು ಹೇಗೆ ಮತ್ತು ಮನೆಯಿಂದ ತಪ್ಪಿಸಿಕೊಳ್ಳುವುದು ಯಾವ ರೀತಿ? ಎಂಬುದನ್ನು ಬಹಳ ಯೋಚಿಸಿ ಬರೆದಿರುವುದು ಸ್ಪಷ್ಟವಾಗಿದೆ. ಈ ಘಟನೆಯ ಬಗ್ಗೆ ಸ್ಥಳೀಯ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು ನೀಡಿದ ಮಾಹಿತಿಯ ಆಧಾರದ ಮೇಲೆ ಬಾಲಕ ಓದುತ್ತಿದ್ದ ಶಾಲೆಗೆ ಹೋಗಿ ಪೊಲೀಸರು ತನಿಖೆ ನಡೆಸಿ, ಆತನನ್ನು ಬಂಧಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net