ಕುಡುಪು ಜಾತ್ರೆಯಲ್ಲಿ ಮುಸ್ಲಿಮರಿಗಿಲ್ಲ ವ್ಯಾಪಾರ ಅವಕಾಶ ಎಡಪಂಥೀಯ ಸಂಘಟನೆಗಳಿಂದ ಆಕ್ರೋಶ, ಹಿಂದು ಸಂಘಟನೆಗಳಿಂದ ಸ್ವಾಗತ

kudupu
Published on

ಮಂಗಳೂರು: ಮುಜರಾಯಿ ಇಲಾಖೆಯ ಸುಪರ್ದಿಗೆ ಒಳಪಟ್ಟ ಮಂಗಳೂರಿನ ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಷಷ್ಠಿ ಜಾತ್ರೆಯಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶ ನಿರಾಕರಿಸಲಾಗಿದ್ದು, ಮತ್ತೆ ವಿವಾದಕ್ಕೆ ಕಾರಣವಾಗಿದೆ.


ಕರಾವಳಿಯಲ್ಲಿ ಹಿಂದು ದೇವಸ್ಥಾನಗಳ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಅನುಮತಿ ನಿರಾಕರಣೆ ಕಳೆದ ಎರಡು ವರ್ಷಗಳಿಂದ ನಡೆಯುತ್ತಿದ್ದು, ಪ್ರತಿಬಾರಿಯೂ ವಿವಾದಕ್ಕೆ ಕಾರಣವಾಗುತ್ತಿದೆ. ಹಿಂದುಗಳ ಜಾತ್ರೋತ್ಸವದಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ನಿರಾಕರಣೆಯನ್ನು ಹಿಂದು ಸಂಘಟನೆಗಳು ಸ್ವಾಗತಿಸಿವೆ. ಈ ನಡುವೆ ಹಿಂದುಯೇತರರಿಗೆ ಜಾತ್ರೆಗಳಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಿದರೆ ಹಿಂದು ಸಂಘಟಕರ ಒತ್ತಡ ಎದುರಿಸಬೇಕಾಗುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಸಮಜಾಯಿಷಿ ನೀಡುತ್ತಿದೆ.


ಕುಡುಪು ದೇವಸ್ಥಾನದಲ್ಲಿ ಷಷ್ಠಿ ಜಾತ್ರೋತ್ಸವ ಡಿ.14ರಿಂದ 19ರವರೆಗೆ ನಡೆಯಲಿದ್ದು, ಜಾತ್ರೆಯ ವ್ಯಾಪಾರ ಮಳಿಗೆಯನ್ನು ಓರ್ವ ಹಿಂದು ವ್ಯಾಪಾರಸ್ಥರಿಗೆ ಏಲಂನಲ್ಲಿ ನೀಡಲಾಗಿದೆ. ಅವರು ಮುಸ್ಲಿಮರಿಗೆ ವ್ಯಾಪಾರಕ್ಕೆ ಅಂಗಡಿ ನೀಡುವುದಕ್ಕೆ ನಿರಾಕರಿಸಿದ್ದು, ಇದು ವಿವಾದವಾಗಿ ಮಾರ್ಪಟ್ಟಿದೆ. ಇತ್ತೀಚೆಗೆ ಮಂಗಳಾದೇವಿ ದೇವಸ್ಥಾನದ ದಸರಾ ಜಾತ್ರೋತ್ಸವದಲ್ಲೂ ಇದೇ ರೀತಿ ವಿವಾದ ತಲೆದೋರಿದಾಗ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಬಾಕಿ ಏಲಂಗೆ ಅವಕಾಶ ನೀಡಿ ಮುಸ್ಲಿಂ ವ್ಯಾಪಾರಸ್ಥರಿಗೆ ವ್ಯಾಪಾರಕ್ಕೆ ಅವಕಾಶ ಸಿಗುವಂತೆ ಮಾಡಿತ್ತು. ಇದರ ನಡುವೆಯೇ ಕುಡುಪು ದೇವಸ್ಥಾನದಲ್ಲೂ ಮರು ಏಲಂ ನಡೆಸುವ ಮೂಲಕ ಮುಸ್ಲಿಮರ ಸಹಿತ ಎಲ್ಲರಿಗೆ ವ್ಯಾಪಾರಕ್ಕೆ ಅವಕಾಶ ನೀಡುವಂತೆ ಎಡಪಂಥೀಯ ಸಂಘಟನೆಗಳು ಜಿಲ್ಲಾಡಳಿತವನ್ನು ಆಗ್ರಹಿಸಿವೆ.

ಬೇಕಿದ್ದರೆ ಹಿಂದುಗಳ ಹೆಸರಿನಲ್ಲಿ ಅಂಗಡಿ ಪಡೆಯಿರಿ
ಕುಡುಪಿನಲ್ಲಿ ಗುರುವಾರ ದೇವಸ್ಥಾನದ ಆಡಳಿತ ಮಂಡಳಿ ಸಂತೆ ವ್ಯಾಪಾರದ ಅಂಗಡಿಗಳ ಹಂಚಿಕೆ ನಡೆಸಿದೆ. ಈ ವೇಳೆ ಸಂತೆ ವ್ಯಾಪಾರಕ್ಕೆ ಜಾಗ ಕೇಳಲು ಮುಸ್ಲಿಂ ವ್ಯಾಪಾರಿಗಳು ತೆರಳಿದ್ದಾರೆ. ಆದರೆ ಮುಸ್ಲಿಂ ವ್ಯಾಪಾರಿಗಳಿಗೆ ಜಾಗ ನಿರಾಕರಣೆ ಮಾಡಲಾಗಿತ್ತು. ಬೇಕಾದರೆ ಹಿಂದುಗಳ ಹೆಸರಿನಲ್ಲಿ ಅಂಗಡಿ ಪಡೆಯುವಂತೆ ಆಡಳಿತ ಮಂಡಳಿ ಸೂಚಿಸಿದೆ ಎಂದು ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದರು. ದೇವಸ್ಥಾನದ ಈ ನಡೆಯನ್ನು ಹಿಂದು ಸಂಘಟನೆಗಳು ಸ್ವಾಗತಿಸಿವೆ.

ದೇವಸ್ಥಾನದ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಸಂತೆ ವ್ಯಾಪಾರ ನಡೆಯುತ್ತದೆ. ಕಳೆದ ಬಾರಿಯೂ ಹಿಂದು ಸಂಘಟನೆಗಳ ವಿರೋಧದ ಹಿನ್ನೆಲೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಕುಡುಪು ದೇವಸ್ಥಾನದಲ್ಲಿ ವ್ಯಾಪಾರಕ್ಕೆ ಅವಕಾಶ ನಿರಾಕರಿಸಲಾಗಿತ್ತು. ಕುಡುಪು ದೇವಸ್ಥಾನದ ಪ್ರಾಂಗಣದ ಹೊರಗಡೆ ನಡೆಯುವ ಸಂತೆ ವ್ಯಾಪಾರದಲ್ಲಿ ಧಾರ್ಮಿಕ ತಾರತಮ್ಯ ಎಸಗಲಾಗುತ್ತಿದೆ. ಜಾತ್ರೆಗಳನ್ನೇ ನಂಬಿ ಬದುಕುವ ಬಡ ವ್ಯಾಪಾರಿಗಳ ಬದುಕುವ ಹಕ್ಕನ್ನು ರಕ್ಷಿಸಲು ಜಿಲ್ಲಾಡಳಿತ ವಿಫಲವಾಗಿದೆ.
ಬಿ.ಕೆ ಇಮ್ತಿಯಾಜ್
ಡಿವೈಎಫ್‌ಐ, ದ.ಕ ಜಿಲ್ಲಾಧ್ಯಕ್ಷ

ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಹಿಂದುಯೇತರರಿಗೆ ವ್ಯಾಪಾರಕ್ಕೆ ಅವಕಾಶ ನೀಡದ ದೇವಸ್ಥಾನದ ಮಂಡಳಿಯ ನಿರ್ಧಾರಕ್ಕೆ ಸ್ವಾಗತ. ಸದಾ ಹಿಂದುಗಳ ಧಾರ್ಮಿಕ ಭಾವನೆಗಳನ್ನು ಕೆರಳಿಸುವ, ಧರ್ಮ ಅವಹೇಳನ ಮಾಡುವ ಮತಾಂಧರಿಗೆ ಹಿಂದು ದೇವಸ್ಥಾನ, ಹಿಂದು ಪುಣ್ಯಕ್ಷೇತ್ರದಲ್ಲಿ ವ್ಯಾಪಾರ ನಡೆಸಿ ಜೀವನ ನಡಸಬೇಕೆ?
ಶರಣ್ ಪಂಪ್‌ವೆಲ್
ಪ್ರಾಂತ ಸಹ ಕಾರ್ಯದರ್ಶಿ, ವಿಶ್ವ ಹಿಂದು ಪರಿಷತ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net