

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ವಿಶ್ವ ಬಿಲ್ಲವ ಮಹಿಳಾ ಸಂಘವು ಕ್ಷೇತ್ರದ ಧಾರ್ಮಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವುದರ ಜತೆ ಮಹಿಳಾ ಶಕ್ತಿಯನ್ನು ಸಂಘಟಿತಗೊಳಿಸುತ್ತಿದೆ. ಸಮಾಜದಲ್ಲಿ ನೊಂದವರಿಗೆ ನೆರವು ನೀಡುವ ಮೂಲಕ ಶ್ಲಾಘನೀಯ ಕಾರ್ಯ ಮಾಡುತ್ತಿದೆ ಎಂದು ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಪ್ರಸೂತಿ ಮತ್ತು ಸೀರೋಗ ತಜ್ಞೆ ಡಾ.ಅನುಷಾ ಹೇಳಿದರು.
ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಭಾನುವಾರ ವಿಶ್ವ ಬಿಲ್ಲವ ಮಹಿಳಾ ಸಂಘದಿಂದ ನಾಲ್ಕನೇ ವರ್ಷದ ವಿಶೇಷ ಕಾರ್ಯಕ್ರಮ, ಅರ್ಹ ಲಾನುಭವಿ ಅಶಕ್ತರಿಗೆ ಸಹಾಯಧನ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮ ಹೊಂಗಿರಣ ಉದ್ಘಾಟಿಸಿ ಮಾತನಾಡಿದರು.
ಮಹಿಳೆ ಮನೆ, ಸಮಾಜದ ಕಣ್ಣಾಗಿ, ಶಕ್ತಿಯಾಗಿರುವವಳು. ತಮ್ಮ ಒತ್ತಡ ಬದುಕಿನ ಮಧ್ಯೆ ಆರೋಗ್ಯ ಕಾಳಜಿಯನ್ನು ವಹಿಸಬೇಕಾಗಿದೆ. ಮನೆ ಮಹಿಳೆ ಆರೋಗ್ಯವಂತಳಾಗಿದ್ದಾಗ ಆ ಮನೆ ಮತ್ತಷ್ಟು ಖುಷಿ, ಸಮೃದ್ಧಿ ಕಾಣಲು ಸಾಧ್ಯವಿದೆ. ಮಹಿಳೆಯರಿಗಾಗಿ ವಿಶ್ವ ಬಿಲ್ಲವ ಮಹಿಳಾ ಸಂಘ ಆಯೋಜಿಸಿಕೊಂಡು ಬರುತ್ತಿರುವ ಕಾರ್ಯಕ್ರಮ ಕೋಡಿ ನಿಜಕ್ಕೂ ಖುಷಿಯಾಗುತ್ತಿದೆ ಎಂದರು.
ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅಧ್ಯಕ್ಷ ಹೆಚ್.ಎಸ್. ಸಾಯಿರಾಂ ಮಾತನಾಡಿ, ಧಾರ್ಮಿಕ, ಸಾಂಸ್ಕೃತಿಕ, ಶಿಕ್ಷಣ, ಸಾಮಾಜಿಕ ಕ್ಷೇತ್ರಕ್ಕೆ ವಿಶ್ವ ಮಹಿಳಾ ಸಂಘ ನೀಡಿದ ಕೊಡುಗೆ ಅಪಾರವಾದುದು. ಈ ಮೂಲಕ ಬ್ರಹ್ಮಶ್ರೀ ನಾರಾಯಣಗುರುಗಳ ಚಿಂತನೆ, ದೂರದೃಷ್ಟಿತ್ವವನ್ನು ಸಂಘವು ಸಾಕಾರಗೊಳಿಸುತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಉರ್ಮಿಳಾ ರಮೇಶ್ ಕುಮಾರ್ ಮಾತನಾಡಿ, ಬ್ರಹ್ಮಶ್ರೀ ನಾರಾಯಣಗುರುಗಳ ಅನುಗ್ರಹದೊಂದಿಗೆ ಸಂಘಟನೆ-ಸಂಪರ್ಕ-ಸಹಕಾರ ತತ್ವದಡಿಯಲ್ಲಿ ಬಿಶ್ವ ಬಿಲ್ಲವ ಮಹಿಳಾ ಸಂಘ ಕಾರ್ಯಾಚರಿಸುತ್ತಿದೆ. ಈ ಬಾರಿಯೂ ಸಂಘದ ವತಿಯಿಂದ 21ಮಂದಿ ಅಶಕ್ತರಿಗೆ ನೆರವು ವಿತರಿಸಲಾಯಿತು ಎಂದರು.
ಮುಖ್ಯ ಅತಿಥಿಗಳಾಗಿ ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಎಜುಕೇಶನ್ ಟ್ರಸ್ಟ್ನ ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಕಾಪಿಕಾಡ್ ಕ್ಲಸ್ಟರ್ ಶಾಲಾ ಶಿಕ್ಷಣ ಇಲಾಖೆ ಉಸ್ತುವಾರಿ ಅಧಿಕಾರಿ ವಿನೋದಾ ಅಮೀನ್ ಉಪಸ್ಥಿತರಿದ್ದರು. ಮೆಡಿಕಲ್ ಸೈನ್ಸ್ನಲ್ಲಿ 7ನೇ ರ್ಯಾಂಕ್ ಪಡೆದ ಡಾ. ಕಾಜಲ್ ಅಂಚನ್ ಅವರನ್ನು ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷೆ ವಿಜಯಾ ಅರುಣ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುಜಾತ ಸುವರ್ಣ ವಂದಿಸಿದರು. ಸಲಹೆಗಾರರಾದ ಕೆ.ಎ. ರೋಹಿಣಿ ಕಾರ್ಯಕ್ರಮ ನಿರೂಪಿಸಿದರು.