ಕೂಡ್ಲಿಗಿ: ಗ್ರಾಮೀಣ ಸೊಗಡನ್ನು ಉಳಿಸುವ ನಿಟ್ಟಿನಲ್ಲಿ ಕುಸ್ತಿ ಪಂದ್ಯಾವಳಿ ಆಯೋಜನೆ ಉತ್ತಮ ಪ್ರಯೋಗವಾಗಿದ್ದು, ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ಶಾಸಕ ಡಾ. ಎನ್.ಟಿ.ಶ್ರೀನಿವಾಸ್ ಹೇಳಿದರು.
ಗ್ರಾಮ ದೇವತೆ ಶ್ರೀ ಊರಮ್ಮ ದೇವಿ ಮರು ದೀಪೋತ್ಸವ ಅಂಗವಾಗಿ ಪಟ್ಟಣದ ಶ್ರೀ ಬೋರಮ್ಮ ತಮ್ಮಪ್ಪ ಪ್ರೌಢ ಶಾಲಾ ಆವರಣದಲ್ಲಿ ದೈವಸ್ಥರಿಂದ ಮಂಗಳವಾರ ಸಂಜೆ ಆಯೋಜಿಸಿದ್ದ ಕುಸ್ತಿ ಪಂದ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಅನಾದಿ ಕಾಲದಿಂದಲೂ ನಮ್ಮ ಜನರು ಕುಸ್ತಿ ಪಂದ್ಯಾವಳಿ ಆಡುತ್ತಾ ಬಂದಿದ್ದಾರೆ. ನಮ್ಮ ತಾಲೂಕಿನ ಅನೇಕ ಕುಸ್ತಿ ಪಟುಗಳು ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಯುವಕರು ದೇಸಿ ಕ್ರೀಡೆಗಳಲ್ಲಿ ಭಾಗಿಯಾಗುವುದರ ಮೂಲಕ ಅವುಗಳನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಕುಸ್ತಿ ಪಂದ್ಯದಲ್ಲಿ ಹೊಸಪೇಟೆಯ ಪ್ರಭು ಪ್ರಥಮ, ಮರಿಯಮ್ಮನಹಳ್ಳಿ ಹನುಮಂತು ದ್ವೀತೀಯ, ಹರಪನಹಳ್ಳಿಯ ತಿಪ್ಪೇಸ್ವಾಮಿ ತೃತೀಯ ಸ್ಥಾನ ಪಡೆದರು.
ಪಪಂ ಅಧ್ಯಕ್ಷ ಕಾವಲ್ಲಿ ಶಿವಪ್ಪ ನಾಯಕ, ಪ್ರಮುಖರಾದ ನೂರ್ ಆಹಮದ್, ಮಲ್ಲಾಪುರ ಭರ್ಮಣ್ಣ, ಬಾಣದ ನರಸಿಂಹಪ್ಪ, ಮೇಕೆ ಮಾಬುಸಾಬ್, ಡಿ.ಭರ್ಮಣ್ಣ, ಮಲ್ಲಾಪುರ ನಾಗರಾಜ, ಸೋಮಯ್ಯರ ನಾಗರಾಜ, ಡಿ.ಅಜ್ಜಯ್ಯ, ಕುಸ್ತಿ ದುರುಗಪ್ಪ, ಸಣ್ಣ ತಿಮ್ಮಣ್ಣ, ಡಾಣಿ ರಾಘವೇಂದ್ರ, ಮಾಳ್ಗಿ ನಾಗರಾಜ, ಖಾಸೀಂಸಾಬ್, ಕಡ್ಡಿ ಮಂಜುನಾಥ, ಇಮಾಮ್‌ಸಾಬ್, ಜೂಗಲ್ ಭೀಮಪ್ಪ, ಸೊಲ್ಲೇಶ, ವಿವೇಕಾನಂದ, ಗುರಿಕಾರ ರಾಘವೇಂದ್ರ ಇದ್ದರು.