ಸಮಾಜಕ್ಕೆ ವೀರಶೈವ ಮಠಗಳ ಕೊಡುಗೆ ಅಪಾರ; ಉಜ್ಜಿನಿ ಸದ್ಥರ್ಮ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದನೆ

02022023 ujjini sri news
Published on

ಕೂಡ್ಲಿಗಿ: ಪುರಾತನ ಕಾಲದಿಂದಲೂ ವೀರಶೈವ ಮಠಗಳು ಜಾತಿ, ಭೇದ ಎಣಿಸದೆ ಸರ್ವ ಜನಾಂಗದವರಿಗೂ ಅಕ್ಷರ, ಅನ್ನ ಮತ್ತು ವಸತಿ ನೀಡುತ್ತ ಬಂದಿವೆ ಎಂದು ಉಜ್ಜಿನಿ ಸದ್ಥರ್ಮ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಬಣವಿಕಲ್ಲು ಗ್ರಾಮದಲ್ಲಿ ಬಸವೇಶ್ವರ ಪ್ರೌಢಶಾಲೆಯಲ್ಲಿ ಕೂಡ್ಲಿಗಿ ಹಿರೇಮಠದ ಲಿಂಗೈಕ್ಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಯ 99ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಶ್ರೀ ಬಸವೇಶ್ವರ ಪ್ರೌಢಶಾಲೆ ನವೀಕೃತ ಕಟ್ಟಡ ಲೋಕಾರ್ಪಣೆ ಮಾಡಿ ಮಾತಾನಾಡಿದರು.

ಕಡು ಬಡವರಿಗೆ ಅಕ್ಷರ ಜ್ಞಾನವನ್ನು ಕಲ್ಪಿಸಲು ಭಿಕ್ಷಾಟನೆ ಮಾಡಿ ಮಠಗಳಲ್ಲಿ ವಸತಿ, ಅನ್ನ ನೀಡಿದ ಕೀರ್ತಿ ವೀರಶೈವ ಮಠಗಳಿಗೆ ಸಲ್ಲುತ್ತದೆ. ತ್ರಿವಿಧ ದಾಸೋಹ ತತ್ವದಲ್ಲಿ ಲಿಂಗೈಕ್ಯ ಮಲ್ಲಿಕಾರ್ಜುನ ಶಿವಾಚಾರ್ಯರು ಬಡ ವಿದ್ಯಾರ್ಥಿ ಪ್ರಸಾದ ನಿಲಯ ತೆರೆದು, ಅನ್ನ, ವಸತಿ, ಜ್ಞಾನವನ್ನು ಧಾರೆ ಎರೆದರು. 50ರ ದಶಕದಲ್ಲಿ ಹೆಣ್ಣುಮಕ್ಕಳು ಕೂಡ ಶಿಕ್ಷಣದಿಂದ ವಂಚಿರಾಗಬಾರದು ಎಂದು ಹೆಣ್ಣುಮಕ್ಕಳ ಪ್ರೌಢ ಶಾಲೆ ತೆರೆದು ಶಿಕ್ಷಣಕ್ಕೆ ಒತ್ತು ನೀಡಿದರು. ಗ್ರಾಮೀಣ ಮಕ್ಕಳಿಗಾಗಿ ಬಣವಿಕಲ್ಲು ಗ್ರಾಮದಲ್ಲಿ 45 ವಷರ್ಗಳ ಹಿಂದೆ ಶಾಲೆ ಆರಂಭಿಸಿ ಈ ಭಾಗದ ದೇವ ಮಾನವರಾದರು ಎಂದು ಬಣ್ಣಿಸಿದರು.

ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ ಪ್ರಾಸ್ತಾವಿಕ ಮಾತಾನಾಡಿದರು. ನಿವೃತ್ತ ಶಿಕ್ಷಕರ ಸನ್ಮಾನ ನಡೆಯಿತು. ಕಾನಮಡುಗು ದಾಸೋಹ ಮಠದ ಶರಣಾರ್ಯರು ಉಪಸ್ಥಿತರಿದ್ದರು. ಡಾ.ಮರುಳಸಿದ್ದ ಪಂಡಿತಾರಾಧ್ಯ ಶಿವಾಚಾರ್ಯರು, ವೇದಾಗಮ ಜ್ಯೋತಿಷ್ಯ ಪಾಠಶಾಲೆಯ ಅಧ್ಯಾಪಕ ಕೆ.ಎಂ.ಸಮರ್ಥಸ್ವಾಮಿ, ಎಸ್.ಎಂ.ವಿಜಯಾನಂದ ಸ್ವಾಮೀಜಿ ನೇತೃತ್ವದಲ್ಲಿ ಪೂಜಾ ಕೈಂಕರ್ಯ ಜರುಗಿದವು. ಗ್ರಾಪಂ ಪಿಡಿಒ ಶಾಂತಕುಮಾರಿ, ಗ್ರಾಮದ ಪ್ರಮುಖರಾದ ಕಾಮಶೆಟ್ಟಿ, ವಿರೂಪಾಕ್ಷಿ, ಪ್ರಶಾಂತ ಗೌಡ, ಆರ್.ವೀರಣ್ಣ, ಪ್ರಭುದೇವ, ಎಸ್.ವಿ.ಸಿದ್ಧಾರಾಧ್ಯ, ಕೆ.ಎಚ್.ಎಂ.ಶಿವಾನಂದಯ್ಯ, ಕೆ.ಎಚ್.ಎಂ.ವೀರಭದ್ರಯ್ಯ, ವೀರಮ್ಮ, ಎಸ್.ಎಂ.ಮರುಳಸಿದ್ದಯ್ಯ, ಕೆ.ಎಸ್.ವೀರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net