ಕುಚ್ಚೂರು ಕಂಚರಕಾಳು ಸೇತುವೆ ಕಾಮಗಾರಿ ವಿಳಂಬ

kota (8)
Published on

ವಿಜಯವಾಣಿ ಸುದ್ದಿಜಾಲ ಹೆಬ್ರಿ ಹೆಬ್ರಿ ಮಡಾಮಕ್ಕಿ ಮೂಲಕ ಕೊಲ್ಲೂರು ಸಂರ್ಪಕಿಸುವ ಹೆಬ್ರಿ ಕುಚ್ಚೂರು ಮಡಾಮಕ್ಕಿ ರಸ್ತೆಯ ಸಂಪರ್ಕ ಕಡಿತಗೊಂಡು ಹೆಬ್ರಿಗೆ ಬರುವ ಹಲವು ಗ್ರಾಮಗಳ ಜನತೆ ಸುತ್ತು ಬಳಸಿ ಬಂದು ಸಂಕಷ್ಟ ಎದುರಿಸುವಂತಾಗಿದೆ. ಇದರಿಂದಾಗಿ ಜನತೆ ಭಾರಿ ಸಮಸ್ಯೆಯಾಗಿದೆ ಎಂದು ಸಾಮಾಜಿಕ ಹೋರಾಟಗಾರ ಕುಚ್ಚೂರು ಶ್ರೀಕಾಂತ್ ಪೂಜಾರಿ ಸೋಮವಾರ ಉಡುಪಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಿರುವ ರಸ್ತೆ ಕೂಡ ಮಳೆಗೆ ಕೊಚ್ಚಿ ಹೋಗಿದೆ. ವಿದ್ಯಾರ್ಥಿಗಳು ಸೇರಿ ಗ್ರಾಮಸ್ಥರು ಬಹುದೂರ ಸುತ್ತಾಡಿ ಹೆಬ್ರಿಗೆ ಬರಬೇಕಿದೆ, ಅಧಿಕಾರಿಗಳ ನಿರ್ಲಕ್ಷೃದ ಬಗ್ಗೆ ಕುಚ್ಚೂರು ಶ್ರೀಕಾಂತ್ ಪೂಜಾರಿ ಜಿಲ್ಲಾಧಿಕಾರಿಗೆ ತಿಳಿಸಿದರು. ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ಪರಿಶೀಲನೆ ನಡೆಸುವ ಭರವಸೆ ನೀಡಿದ್ದಾರೆ ಎಂದು ಶ್ರೀಕಾಂತ್ ಪೂಜಾರಿ ತಿಳಿಸಿದರು. ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಇದರ ಬಗ್ಗೆ ಈಗಾಗಲೇ ವರದಿಯನ್ನು ಕೇಳಿದ್ದೇವೆ. ಜನರಿಗೆ ಆಗುವ ಅನನುಕೂಲತೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗುವುದು. ಶೀಘ್ರದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಹೇಳಿದರು. *ಹೆಬ್ರಿ ಪಿಎಸ್‌ಐ ಭೇಟಿ: ಅಪರ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಸಾಧಕ ಬಾಧಕಗಳ ಬಗ್ಗೆ ವರದಿ ನೀಡಲು ಹೆಬ್ರಿ ಪಿಎಸ್‌ಐ ರವಿ ಬಿ.ಕೆ. ಸ್ಥಳಕ್ಕೆ ಭೇಟಿ ನೀಡಿ ಇಂಜಿನಿಯರ್‌ಗಳಿಂದ ಮಾಹಿತಿ ಕಲೆ ಹಾಕಿದರು. ಪಿಡಬ್ಲ್ಯೂಡಿ ಇಲಾಖೆಯ ಎ.ಇ.ಇ ತ್ರಿನೇಶ್ವರ್ ಮಾತನಾಡಿ, ಸೇತುವೆಯ ಪಕ್ಕದಲ್ಲಿದ್ದ ತಾತ್ಕಾಲಿಕ ರಸ್ತೆಯನ್ನು ಬಂದ್ ಮಾಡುತ್ತೇವೆ. ಭಾರಿ ಮಳೆ ಆದಾಗ ತಾತ್ಕಾಲಿಕ ರಸ್ತೆ ಕೊಚ್ಚಿಕೊಂಡು ಹೋಗುವ ಭೀತಿ ಇದೆ. ರಾತ್ರಿ ಹೊತ್ತಿನಲ್ಲಿ ಜೀವ ಹಾನಿ ಉಂಟಾಗಬಹುದು. ಹೆಬ್ರಿಗೆ ಹೋಗಲು ಆರ್ಡಿ ಬೆಳಂಜೆ ಮಾರ್ಗ ಬಳಸುವಂತೆ ತಿಳಿಸಿದರು.

ಸಾರ್ವಜನಿಕರ ಆಕ್ರೋಶ

ಕಳೆದ ಒಂದು ವಾರದಿಂದ ಪಿಡಬ್ಲ್ಯೂಡಿ ಇಲಾಖೆ ಇಂಜಿನಿಯರ್ ಕೇವಲ ಎರಡು ದಿನ ಸಮಯ ಕೊಡಿ ಅದೇ ಸ್ಥಳದಲ್ಲಿ ಉತ್ತಮವಾದ ಪರ್ಯಾಯ ರಸ್ತೆಯನ್ನು ನಿರ್ಮಾಣ ಮಾಡಿಕೊಡುತ್ತೇವೆ ಎಂದು ಮಾಧ್ಯಮಕ್ಕೆ ಹೇಳಿಕೆ ಕೊಟ್ಟಿದ್ದರು. ಇದನ್ನು ನಂಬಿದ ಪ್ರತಿಭಟನಾಕಾರರು ಪ್ರತಿಭಟನೆ ಕೈಬಿಟ್ಟರು. ಅಧಿಕಾರಿಗಳು ಈಗ ಸೇತುವೆ ಸಮೀಪದ ತಾತ್ಕಾಲಿಕ ರಸ್ತೆಯನ್ನು ಮುಚ್ಚುತ್ತೇವೆ ಎಂದಾಗ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net