ಕಳಚಿಬಿದ್ದ ಡೀಸೆಲ್ ಟ್ಯಾಂಕ್ - ಹೆದ್ದಾರಿ ಕಾಮಗಾರಿಯ ಅವಾಂತರ

PTR_2 JAN_1
Published on

ವಿಟ್ಲ: ಮಂಗಳೂರು-ಬೆಂಗಳೂರು ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ವಾಹನ ಸಾಗುವುದಕ್ಕೆ ಸಮರ್ಪಕ ರಸ್ತೆಯನ್ನು ಮಾಡಿಕೊಡದೆ ಹಲವು ವಾಹನಗಳು ನಿತ್ಯ ಸಮಸ್ಯೆಗೊಳಗುತಿವೆ. ಮಾಣಿ ಸಮೀಪದ ಮಹಾವೀರ ಎಂಬಲ್ಲಿ ಗುರುವಾರ ಸರ್ಕಾರಿ ಬಸ್‌ನ ಡೀಸಲ್ ಟ್ಯಾಂಕ್ ಕಳಚಿ ಬಿದ್ದಿದೆ.

ಮಂಗಳೂರು-ಹಾಸನ-ಅರಸೀಕರೆ ಸಂಪರ್ಕ ಕಲ್ಪಿಸುವ ಸರ್ಕಾರಿ ಬಸ್ ಸಮಸ್ಯೆಗೊಳಗಾಗಿದೆ. ಹೆದ್ದಾರಿ ಕಾಮಗಾರಿಯ ಸಂದರ್ಭದಲ್ಲಿ ಸಂಚಾರಕ್ಕಾಗಿ ಪ್ರತ್ಯೇಕ ರಸ್ತೆಗಳನ್ನು ನಿರ್ಮಾಣ ಮಾಡಿಕೊಡಬೇಕೆಂಬ ನಿಯಮವಿದೆ. ಆದರೆ ಹಣ ಉಳಿಸುವ ನಿಟ್ಟಿನಲ್ಲಿ ಬದಲಿ ರಸ್ತೆಯನ್ನು ತಾತ್ಕಾಲಿಕ ನೆಲೆಯಲ್ಲಿ ಮಾಡಲಾಗುತ್ತಿದೆ. ಎಲ್ಲೆಂದರಲ್ಲಿ ಏರು-ತಗ್ಗುಗಳಿವೆ.

ಸರ್ಕಾರಿ ಬಸ್ ಹಳ್ಳವೊಂದರಲ್ಲಿ ಸಂಚರಿಸುವ ಸಂದರ್ಭ ಡೀಸಲ್ ಟ್ಯಾಂಕ್ ಕಳಚಿ ರಸ್ತೆಗೆ ಬಿದ್ದಿದೆ. ಡೀಸಲ್ ಟ್ಯಾಂಕ್ ಬೀಳುವ ವೇಗಕ್ಕೆ ನಜ್ಜುಗುಜ್ಜಾಗಿದ್ದು, ಸ್ವಲ್ಪ ಪ್ರಮಾಣದ ಡೀಸಲ್ ರಸ್ತೆಗೆ ಚೆಲ್ಲಿದೆ. ರಸ್ತೆ ಸಮಸ್ಯೆಯ ಜತೆಗೆ ತುಕ್ಕು ಹಿಡಿದ ಸಾಮಾಗ್ರಿಗಳನ್ನು ಸರಿಯಾಗಿ ಗಮನಿಸದೆ, ಬಸ್ ನಿರ್ವಹಣೆಯನ್ನು ವ್ಯವಸ್ಥಿತವಾಗಿ ನಡೆಸದಿರುವುದೂ ಇನ್ನೊಂದು ಕಾರಣ ಎನ್ನಲಾಗುತ್ತಿದೆ. ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಬದಲಿ ಬಸ್ ಮೂಲಕ ಸಂಚರಿಸಲು ಕೆಲವು ಸಮಯದ ಬಳಿಕ ವ್ಯವಸ್ಥೆ ಕಲ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net