ಉಸಿರುಗಟ್ಟಿಸುವ ಬಸ್ ಹೊಗೆ : ಕೆಎಸ್‌ಆರ್‌ಟಿಸಿ ಹಳೇ ಗುಜರಿ ಬಸ್‌ಗಳಿಂದ ಸಮಸ್ಯೆ

hoge
Published on

ಮನೋಹರ್ ಬಳಂಜ, ಬೆಳ್ತಂಗಡಿ

ಸಂಚಾರದ ವೇಳೆ ವಿಪರೀತ ಹೊಗೆಯುಗುಳುವ ಹಲವಾರು ಕೆಎಸ್ಸಾರ್ಟಿಸಿ ಬಸ್‌ಗಳು ಮಾರ್ಗದಲ್ಲಿ ಸಂಚರಿಸುತ್ತಾ ಪರಿಸರಕ್ಕೆ ಮಾರಕವಾಗುವ ಜತೆಗೆ ಇತರ ವಾಹನ ಸವಾರರಿಗೆ ರಸ್ತೆ ಕಾಣದಂತಾಗಿಸುತ್ತಿವೆ.

ಎಲೆಕ್ಟ್ರಿಕ್ ಬಸ್‌ಗಳ ಮೂಲಕ ಒಂದೆಡೆ ಪರಿಸರ ರಕ್ಷಿಸುವ ಯತ್ನ ನಡೆಯುತ್ತಿದೆ. ಇನ್ನೊಂದೆಡೆ ಹಳೇ ಗುಜರಿ ಕೆಂಪು ಬಸ್‌ಗಳು ಸಂಚಾರದ ವೇಳೆ ಧಾರಾಕಾರ ಹೊಗೆಯುಗುಳುತ್ತಾ ಸಾಗುತ್ತಿವೆ. ಈ ಬಸ್‌ಗಳು ಉಗುಳುವ ಹೊಗೆಯ ಪ್ರಮಾಣ ಎಷ್ಟು ಅಗಾಧವಾಗಿದೆ ಎಂದರೆ ಇವುಗಳ ಹಿಂದೆ ಇತರ ವಾಹನಗಳು ಸಂಚರಿಸಲು ಸಾಧ್ಯವಿಲ್ಲ. ಕೆಲವು ಬಸ್‌ಗಳು ಉಗುಳುವ ಹೊಗೆಯಿಂದ ರಸ್ತೆಯೇ ಕಾಣದಂತಾಗುತ್ತಿದೆ. ಇಂತಹ ಬಸ್‌ಗಳು ಅತ್ಯಂತ ಅಪಾಯಕಾರಿಯಾಗಿದ್ದು, ಪರಿಸರದ ಮೇಲೆ ಮಾರಕ ಪರಿಣಾಮ ಬೀರುತ್ತಿವೆ.

ನಗರ ಪ್ರದೇಶದಲ್ಲಿ ಪೇಟೆಗಳಲ್ಲಿ ಸಾಕಷ್ಟು ಪರಿಸರ ಮಾಲಿನ್ಯವಿದ್ದು, ಈ ಬಸ್‌ಗಳು ಇನ್ನಷ್ಟು ಕೊಡುಗೆ ನೀಡುತ್ತಿವೆ. ಹಳ್ಳಿ ಪ್ರದೇಶದಲ್ಲಿ ಇಂತಹ ಬಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿದ್ದು ಅಲ್ಲಿನ ಉತ್ತಮ ಪರಿಸರ ಹಾಳು ಮಾಡುತ್ತಿವೆ. ಧರ್ಮಸ್ಥಳ ಡಿಪೋದಿಂದ ನೆರಿಯ, ದಿಡುಪೆ, ಶಿಶಿಲ, ಪುತ್ತೂರು, ಗಂಡಿಬಾಗಿಲು, ಬೆಳಾಲು ಕೊಯ್ಯೂರು, ಚಾರ್ಮಾಡಿ, ಇಂದಬೆಟ್ಟು ಕಾಯರ್ತಡ್ಕ ಮೊದಲಾದ ಕಡೆ ಸಂಚಾರ ನಡೆಸುವ ಬಸ್‌ಗಳು ಹೆಚ್ಚಿನ ಹೊಗೆ ಹೊರಸೂಸುತ್ತಿವೆ.

ಮಂಗಳೂರು-ಧರ್ಮಸ್ಥಳ ಅಧಿಕ

ಮಂಗಳೂರು-ಧರ್ಮಸ್ಥಳ ರೂಟ್‌ನಲ್ಲಿ ಪ್ರತಿದಿನ ನೂರಾರು ಬಸ್‌ಗಳು ಓಡಾಟ ನಡೆಸುತ್ತಿದ್ದು,ಇದರಲ್ಲಿ ಹೆಚ್ಚಿನ ಬಸ್‌ಗಳು ವಿಪರೀತ ಹೊಗೆಯುಗುಳುತ್ತಿವೆ. ಮಂಗಳೂರಿನಿಂದ ಧರ್ಮಸ್ಥಳವರೆಗಿನ 75 ಕಿ.ಮೀ. ವ್ಯಾಪ್ತಿಯಲ್ಲಿ ಹಲವು ಬಾರಿ ಸಂಚರಿಸುವ ಈ ಬಸ್‌ಗಳು ಅಲ್ಲಿನ ಪರಿಸರ ಹಾಳು ಮಾಡುತ್ತಿವೆ. ಹೆಚ್ಚಿನ ಆದಾಯವಿರುವ ಈ ರೂಟ್‌ನಲ್ಲಿ ಇಂತಹ ಬಸ್‌ಗಳನ್ನು ಬಳಸುತ್ತಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ.

ಹೊಗೆ ತಪಾಸಣೆ ಹೇಗೆ ಸಿಗುತ್ತದೆ?

ಇಂದಿನ ದಿನಗಳಲ್ಲಿ ಪ್ರತಿ ವಾಹನಕ್ಕೂ ಹೊಗೆ ತಪಾಸಣೆ ಕಡ್ಡಾಯವಾಗಿದೆ. ನಿಗದಿಪಡಿಸಿದ ಪ್ರಮಾಣಕ್ಕಿಂತ ಅಧಿಕ ಹೊಗೆಯುಗುಳುವ ವಾಹನಗಳಿಗೆ ಹೊಗೆ ತಪಾಸಣೆ ವೇಳೆ ಯಾವ ಮಾನದಂಡದಲ್ಲಿ ಪ್ರಮಾಣಪತ್ರ ನೀಡಲಾಗುತ್ತಿದೆ? ಎಂಬುದು ಯಕ್ಷಪ್ರಶ್ನೆ. ಅತ್ಯಂತ ಹೆಚ್ಚಿನ ಹೊಗೆಯುಗುಳುವ ಈ ಕೆಎಸ್ಸಾರ್ಟಿಸಿ ಬಸ್‌ಗಳಿಗೆ ಯಾವ ಮಾನದಂಡದಲ್ಲಿ ಪ್ರಮಾಣಪತ್ರ ನೀಡಲಾಗುತ್ತಿದೆ ಅಥವಾ ಇವುಗಳಿಗೆ ಪ್ರಮಾಣಪತ್ರದ ಅಗತ್ಯವಿಲ್ಲವೇ? ಎಂಬ ಅನುಮಾನ ಮೂಡುತ್ತಿದೆ.

ಅವಧಿ ಮುಗಿದ ವಾಹನಗಳು

ಹೆಚ್ಚಿನ ಕೆಎಸ್ಸಾರ್ಟಿಸಿ ಬಸ್‌ಗಳು 8ರಿಂದ 10 ಲಕ್ಷ ಕಿಲೋಮೀಟರ್ ಕ್ರಮಿಸಿದ್ದು ಇವುಗಳ ಅವಧಿ ಮುಗಿದಿದೆ. ಆದರೆ ಹೊಸ ಬಸ್‌ಗಳ ಲಭ್ಯತೆ ಇಲ್ಲದ ಕಾರಣ ಅವಧಿ ಮುಗಿದಿರುವ ಹಳೇ ಬಸ್‌ಗಳನ್ನು ಬಳಸಲಾಗುತ್ತಿದೆ. ಇಂತಹ ಬಸ್‌ಗಳನ್ನು ಹೆಚ್ಚಾಗಿ ಲೋಕಲ್ ರೂಟ್‌ಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದು ಕೆಎಸ್ಸಾರ್ಟಿಸಿಯ ಓರ್ವ ಸಿಬ್ಬಂದಿ ತಿಳಿಸಿದ್ದಾರೆ.

ಪರಿಸರ ಸಂರಕ್ಷಣೆ ನಮ್ಮೆಲ್ಲರ ಧ್ಯೇಯ. ಪ್ರಾಣಿ, ಪಕ್ಷಿ, ಮನುಷ್ಯನಿಗೆ ತೊಂದರೆಯಾಗದಂತೆ ಪ್ರತಿಯೊಂದು ವಿಚಾರದಲ್ಲೂ ಜಾಗೃತರಾಗಿರಬೇಕು. ಆದರೆ ಕೆಎಸ್ಸಾರ್ಟಿಸಿಯಂತಹ ಸರ್ಕಾರಿ ಸ್ವಾಮ್ಯದ ಸಂಸ್ಥೆ ಹೊಗೆಯುಗುಳುವ ಬಸ್‌ಗಳ ಮೂಲಕ ಪರಿಸರ ಮಾರಕವಾಗುತ್ತಿರುವುದು ವಿಪರ್ಯಾಸ. -ಚಿದಾನಂದ,ವಕೀಲ, ಪರಿಸರ ಪ್ರೇಮಿ ಬೆಳ್ತಂಗಡಿ ಹೊಗೆಯುಗುಳುವ ಬಸ್‌ಗಳ ಕುರಿತು ಮಾಹಿತಿ ಸಂಗ್ರಹಿಸಲಾಗುವುದು. ಇಂತಹ ಬಸ್‌ಗಳು ಇದ್ದಲ್ಲಿ ಆ ರೂಟ್‌ಗಳಲ್ಲಿ ಬದಲಿ ವ್ಯವಸ್ಥೆ ಮಾಡುವ ಕುರಿತು ಕ್ರಮ ಕೈಗೊಳ್ಳಲಾಗುವುದು. -ಅಮಲಿಂಗಯ್ಯ ಹೊಸ ಪೂಜಾರಿ, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್ಸಾರ್ಟಿಸಿ ಪುತ್ತೂರು ವಿಭಾಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net