

ಬಾಗಲಕೋಟೆ: ನಿಗದಿತ ಸಮಯಕ್ಕೆ ಬಾರದ ವೇತನ ಹಾಗೂ ಸಾಲಬಾಧೆಯಿಂದ ಕಂಗಾಲಾಗಿ ವಿಷ ಸೇವಿಸಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ ಇಂದು ಚಿಕಿತ್ಸೆ ಫಲಿಸದೆ ಸಾವಪ್ಪಿದ್ದಾನೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರೂರು ಪಟ್ಟಣದ ನಿವಾಸಿ ಭರಮಪ್ಪ ಗೊಂದಿ(45) ಮೃತ ದುರ್ದೈವಿ.
ಬಾದಾಮಿ ಡಿಪೋದಲ್ಲಿ ಚಾಲಕ ಕಂ ನಿರ್ವಾಹಕನಾಗಿ ಸೇವೆ ಸಲ್ಲಿಸುತ್ತಿದ್ದ ಭರಮಪ್ಪ, ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದರು. ಕರೊನಾ ವೇಳೆಯಲ್ಲಿ ಸರಿಯಾಗಿ ವೇತನ ಆಗಿರಲಿಲ್ಲ. ಸದ್ಯ ಕೆ.ಎಸ್.ಆರ್.ಟಿ.ಸಿ. ವೇತನ ಪ್ರತಿ ತಿಂಗಳೂ ಎರಡು ಕಂತುಗಳಲ್ಲಿ ಅರ್ಧದಂತೆ ಬರುತ್ತಿದ್ದರೂ ವೇತನ ಕುಟುಂಬ ನಿರ್ವಹಣೆಗೂ ಸಾಲುತ್ತಿರಲಿಲ್ಲ. ಅದರ ಮೇಲೆ ಸಾಲ ತೀರಿಸುವ ಚಿಂತೆಯಿಂದ ಮನನೊಂದು ಅಕ್ಟೋಬರ್ 30ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಭರಮಪ್ಪನನ್ನು ಕೂಡಲೇ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಇಂದು ಆಸ್ಪತ್ರೆಯಲ್ಲೇ ಸಾವಪ್ಪಿದ್ದಾರೆ. ಮೃತ ಸಾರಿಗೆ ಸಂಸ್ಥೆ ನೌಕರ, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.