

ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆಯಾಗಿ ಸರ್ಕಾರ ಪರಿಹಾರ ಮೊತ್ತ ಘೋಷಿಸಿದ್ದೇನೋ ಸರಿ; ಆದರೆ, ಪರಿಹಾರ ಮೊತ್ತ ನೀಡುವುದು ಯಾವಾಗ? ಎಂದು ಸಂಸದ ರಮೇಶ ಜಿಗಜಿಣಗಿ ಪ್ರಶ್ನಿಸಿದರು.
ಪರಿಹಾರ ಮೊತ್ತ ಘೋಷಿಸಿರುವುದಕ್ಕೆ ಸ್ವಾಗತ. ಆದರೆ, ವಿತರಣೆ ಪ್ರಕ್ರಿಯೆ ಯಾವಾಗ? ಒಂದೇ ಹಂತದಲ್ಲಿ ಪರಿಹಾರ ವಿತರಿಸಬೇಕೆಂಬುದು ರೈತರ ಒತ್ತಾಯ ಮತ್ತು ಒತ್ತಾಸೆಯಾಗಿದೆ. ಹೀಗಾಗಿ ಎಲ್ಲ ಪರಿಹಾರ ಒಂದೇ ಹಂತದಲ್ಲಿ ಕೊಡಲು ಸಾಧ್ಯವೇ? ಅಷ್ಟೊಂದು ಹಣ ಸರ್ಕಾರದ ಬಳಿ ಇದೆಯೇ? ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಪ್ರಶ್ನೆಗಳ ಸುರಿಮಳೆಗರಿದರು.
ಈ ಹಿಂದೆ ಕಾಲುವೆ ನಿರ್ಮಿಸಲು ಸ್ವಾಧೀನ ಪಡಿಸಿಕೊಂಡ ಜಮೀನಿಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಇದೀಗ ಇಷ್ಟೆಲ್ಲ ರೊಕ್ಕ ಎಲ್ಲಿಂದ ತರುತ್ತಾರೋ ದೇವರೇ ಬಲ್ಲ. ಒಟ್ಟಿನಲ್ಲಿ ಒಂದೇ ಹಂತದಲ್ಲಿ ತ್ವರಿತವಾಗಿ ಪರಿಹಾರ ಕೊಡಲಿ ಎಂಬುದಷ್ಟೇ ನನ್ನ ಒತ್ತಾಯ ಎಂದ ಜಿಗಜಿಣಗಿ, ಕನ್ಸೆಂಟ್ (ಒಪ್ಪಿದ) ಮಾದರಿ ತಂದಿದ್ದೇ ನಾನು. ಈ ಹಿಂದೆ ಕಂದಾಯ ಸಚಿವನಾಗಿದ್ದಾಗ ರೈತರಿಗೆ ನೇರವಾಗಿ ಹಣ ಸಿಗಲಿ ಎಂಬ ಕಾರಣಕ್ಕೆ ಒಪ್ಪಿದ ದರದ ಮಾದರಿ ತಂದಿದ್ದೆ. ಇದೀಗ ಅದೇ ಮಾದರಿ ಅನುಸರಿಸಲಾಗುತ್ತಿದೆ ಎಂದು ಸ್ಮರಿಸಿಕೊಂಡರು.