

ಮೈಸೂರು: ನಾವು ನಿತ್ಯವು ಮೂರು ಹೊತ್ತು ಊಟ ಮಾಡಿ, ಮೈತುಂಬಾ ಬಟ್ಟೆ ಹಾಕಿಕೊಳ್ಳುತ್ತೇವೆ ಅಂದರೆ ಅದಕ್ಕೆ ರೈತರು ಕಾರಣ. ರೈತರು ಇಲ್ಲ ಅಂದರೆ ನಾವಿಲ್ಲ ಎಂದು ವಿಆರ್ಎಲ್ ಟ್ರಾವೆಲ್ಸ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಶಿವ ಸಂಕೇಶ್ವರ ಅವರು ಅಭಿಪ್ರಾಯಪಟ್ಟರು.
‘ಸುಸ್ಥಿರ ಅಭಿವೃದ್ಧಿ ನಮ್ಮ ಗುರಿ’ ಪರಿಕಲ್ಪನೆಯಡಿ ವಿಜಯವಾಣಿ ಮತ್ತು ದಿಗ್ವಿಜಯ ಸುದ್ದಿವಾಹಿನಿ ವತಿಯಿಂದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಮೂರು ದಿನಗಳ ಕೃಷಿ ಮೇಳವನ್ನು ಉದ್ದೇಶಿಸಿ ಮಾತನಾಡಿದರು.
ಕೃಷಿಮೇಳಕ್ಕೆ ಸಹಕರಿಸಿದ ರಾಜ್ಯದ ಹೆಮ್ಮೆಯ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕರ್ನಾಟಕ ಸರ್ಕಾರಕ್ಕೆ ಧನ್ಯವಾದ ತಿಳಿಸಿದರು. ನಾವು ಬಹಳಷ್ಟು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದೇವೆ. ಪ್ರಾಪರ್ಟಿ ಎಕ್ಸ್ಪೋ, ಸ್ಟೂಡೆಂಟ್ ಎಕ್ಸ್ಪೋ ಮತ್ತು ಆಟೋಮೊಬೈಲ್ ಎಕ್ಸ್ಪೋನಂತಹ ಹಲವು ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಆದರೆ, ಈ ಕೃಷಿ ಮೇಳ ಅದೆಲ್ಲದಕ್ಕಿಂತ ವಿಭಿನ್ನ. ಏಕೆಂದರೆ, ಇಲ್ಲಿ ಸಂಬಂಧಿಸಿದ ವ್ಯಕ್ತಿ ಬಂದು ರೈತರು.
ರೈತರು ದೇಶದ ಜಿಡಿಪಿಗೆ ಸುಮಾರು 23 ರಿಂದ 25 ರಷ್ಟು ಸಹಾಯ ಮಾಡುತ್ತಾರೆ. ಮೂರು ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಕೃಷಿ ಮೇಳ ಮಾಡಿದ್ದೆವು. ಆವಾಗ ಮೂರು ದಿವಸದಲ್ಲಿ ಎರಡು ಲಕ್ಷದಷ್ಟು ಜನ ಬಂದಿದ್ದರು. ಹಲವು ಉಪಯುಕ್ತ ಮಾಹಿತಿಗಳನ್ನು ಪಡೆದುಕೊಂಡಿದ್ದರು. ಕಳೆದ ಬಾರಿಗಿಂತ ಹೆಚ್ಚಿನ ಜನರು ಈ ಬಾರಿ ಬಂದು ಇದರ ಉಪಯೋಗ ಪಡೆದುಕೊಳ್ಳಬೇಕು ಎಂಬುದು ನಮ್ಮ ಉದ್ದೇಶವಾಗಿದೆ.
ಪ್ರತಿದಿನ ನಾವು ಮೂರು ಹೊತ್ತು ಊಟ ಹಾಗೂ ಮೈತುಂಬಾ ಬಟ್ಟೆ ಹಾಕಿಕೊಳ್ಳುತ್ತೇವೆ ಅಂದರೆ ಅದಕ್ಕೆ ರೈತರೇ ಕಾರಣ. ರೈತರು ಇಲ್ಲಾ ಅಂದ್ರೆ ನಾವು ಬದುಕಲು ಸಹ ಆಗುವುದಿಲ್ಲ. ಹೀಗಾಗಿ ಅವರಿಗೆ ನಮ್ಮ ಕುಟುಂಬದ ಕಡೆಯಿಂದ ಒಂದು ಸಣ್ಣ ಸಹಾಯ. ಎಲ್ಲರು ಒಮ್ಮೆ ಭೇಟಿ ಮಾಡಿ ಹೋಗಿ ಎಂದು ಶಿವ ಸಂಕೇಶ್ವರ ಅವರು ಹೇಳಿದರು.
ಅಂದಹಾಗೆ ಕೃಷಿ ಮೇಳದಲ್ಲಿ ಮಣ್ಣುರಹಿತ ಕೃಷಿ, ಕೃಷಿಯಲ್ಲಿ ಡ್ರೋನ್ ಬಳಕೆ, ಆಟೋಮೇಟೆಡ್ ಕೃಷಿ ಯಂತ್ರೋಪಕರಣ, ಕೃಷಿ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ ಇರಲಿದೆ. ಸಿರಿಧಾನ್ಯ ಹಾಗೂ ಅವುಗಳ ಮಹತ್ವ, ಔಷಧೀಯ ಮತ್ತು ಸುಗಂಧ ದ್ರವ್ಯ ಸಸ್ಯ, ಜಲಾನಯನ ನಿರ್ವಹಣೆ, ಸಾವಯವ ಕೃಷಿ ಪದ್ಧತಿ, ಸಮಗ್ರ ಪೋಷಕಾಂಶಗಳು, ರೋಗ ನಿರ್ವಹಣೆ, ಹನಿ ಹಾಗೂ ತುಂತುರು ನೀರಾವರಿ ಪದ್ಧತಿ, ಮಳೆ ಮತ್ತು ಚಾವಣಿ ನೀರು ಸಂಗ್ರಹ ಯೋಜನೆಯ ಬಗ್ಗೆ ಮೇಳದಲ್ಲಿ ತಜ್ಞರಿಂದ ರೈತರಿಗೆ ಅಮೂಲ್ಯ ಸಲಹೆ ಸಿಗಲಿವೆ.
ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಕೊಯ್ಲೋತ್ತರ ತಾಂತ್ರಿಕತೆ, ಕೃಷಿ ಉತ್ಪನ್ನ ಸಂಸ್ಕರಣೆ, ಮೌಲ್ಯವರ್ಧನೆ, ಬಿತ್ತನೆ ಬೀಜ ಪರೀಕ್ಷೆ ಹಾಗೂ ಶೇಖರಣೆ, ಮೀನು ಸಾಕಾಣಿಕೆ, ಹವಾಮಾನ ಚತುರ ಕೃಷಿ ಸೇರಿ ಇತರ ಮಾಹಿತಿಗಳು ಕೃಷಿ ಮೇಳದಲ್ಲಿ ದೊರೆಯಲಿವೆ.