

ಮಧುಗಿರಿ: ಅಧಿಕಾರ ಇದ್ದರೂ, ಇಲ್ಲದಿದ್ದರೂ ಬಡವರ ಪರ ಕೆಲಸ ಮಾಡುತ್ತೇವೆ ಎಂದು ಕೃಷಿಕ್ ಭಾರತಿ ಕೋ-ಆಪರೇಟೀವ್ ಲಿಮಿಟೆಡ್ (ಕ್ರಿಬ್ಕೋ) ನಿರ್ದೇಶಕ ಆರ್.ರಾಜೇಂದ್ರ ತಿಳಿಸಿದರು. ಪಟ್ಟಣದ ಎಂ.ಎನ್.ಕೆ ಸಮುದಾಯ ಭವನದಲ್ಲಿ ಶನಿವಾರ ಬಡವರ ಬಂಧು ಯೋಜನೆಯಡಿಯಲ್ಲಿ 62 ಜನ ಬೀದಿಬದಿ ವ್ಯಾಪಾರಿಗಳಿಗೆ 6.20 ಲಕ್ಷ ರೂಪಾಯಿ ಸಾಲದ ಚೆಕ್ ವಿತರಿಸಿ ಮಾತನಾಡಿದರು.
ಲಾಕ್ಡೌನ್ನಿಂದಾಗಿ ಬೀದಿಬದಿ ವ್ಯಾಪಾರಿಗಳು ಮತ್ತು ಬಡವರಿಗೆ ವ್ಯಾಪಾರ ನಡೆಸಲು ತೊಂದರೆ ಆಗಿದೆ. ಸಣ್ಣ ಮತ್ತು ಅತಿಸಣ್ಣ ವ್ಯಾಪಾರಿಗಳು ಜೀವನ ನಿರ್ವಹಣೆಗೆ ಸಾಲ ಮಾಡಿ ದಲ್ಲಾಳಿಗಳ ಕೈಗೆ ಸಿಲುಕಿ ತೊಂದರೆ ಅನುಭವಿಸಬಾರದು ಎಂಬ ಉದ್ದೇಶದಿಂದ ಡಿಸಿಸಿ ಬ್ಯಾಂಕಿನ ವತಿಯಿಂದ ಸಾಲ ಸೌಲಭ್ಯ ಕಲಿಸಲಾಗಿದ್ದು, ಈ ಯೋಜನೆಯಡಿಯಲ್ಲಿ 1 ಸಾವಿರದಿಂದ 10 ಸಾವಿರ ರೂಪಾಯಿ ವರೆಗೆ ಸಾಲ ಸೌಲಭ್ಯ ದೊರೆಯಲಿದೆ. ಇದರ ಸದುಪಯೋಗಪಡಿಸಿಕೊಂಡು ಜೀವನ ರೂಪಿಸಿಕೊಳ್ಳಿ ಎಂದರು.
ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಎನ್.ಗಂಗಣ್ಣ ಮಾತನಾಡಿ, ಕೆ.ಎನ್.ರಾಜಣ್ಣ ಶಾಸಕರಾಗಿದ್ದ ಅವಧಿಯಲ್ಲಿ ಬಹಳಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು. ಲಾಕ್ಡೌನ್ನಲ್ಲಿ ತೊಂದರೆಗೀಡಾಗಿರುವ ಸಣ್ಣ ಮತ್ತು ಅತೀ ಸಣ್ಣ ವ್ಯಾಪಾರಿಗಳು ಮತ್ತೆ ಸಮಾಜದ ವಾಹಿನಿಗೆ ಬರಬೇಕೆಂಬ ಉದ್ದೇಶದಿಂದ ನೆರವಿಗೆ ದಾವಿಸಿದ್ದು, ಡಿಸಿಸಿ ಬ್ಯಾಂಕ್ ವತಿಯಿಂದ ಜಿಲ್ಲೆಯ ಪ್ರತೀ ತಾಲೂಕಿನಲ್ಲೂ 1 ಕೋಟಿ ರೂಪಾಯಿ ಸಾಲ ಸೌಲಭ್ಯ ವಿತರಿಸುವ ಗುರಿ ಇದೆ ಎಂದರು.
ತುಮುಲ್ ಮಾಜಿ ಅಧ್ಯಕ್ಷ ಬಿ.ನಾಗೇಶ್ಬಾಬು, ಮುಖಂಡರಾದ ಎಂ.ಎಸ್.ಶಂಕರನಾರಾಯಣ್, ಎಂ.ಎಸ್.ಮಲ್ಲಿಕಾರ್ಜುನಯ್ಯ, ಎಸ್.ಬಿ.ಟಿ.ರಾಮು, ಪಾವಗಡ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಸೀತಾರಾಂ, ವಕೀಲರ ಸಂಘದ ಅಧ್ಯಕ್ಷ ಪಿ.ಸಿ. ಕೃಷ್ಣಾರೆಡ್ಡಿ ಇತರರಿದ್ದರು.
ಕೆ.ಎನ್.ರಾಜಣ್ಣ ಅವರು ಯೋಜನೆ ರೂಪಿಸಿದರೂ ಅದು ರಾಜ್ಯ ಮಟ್ಟದಲ್ಲಿ ಮಾದರಿ ಯೋಜನೆಯಾಗಿ ರೂಪುಗೊಳ್ಳುತ್ತದೆ. ಇದಕ್ಕೆ ಶೂ ಭಾಗ್ಯ ಉದಾಹರಣೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಅವರ ಮನವೊಲಿಸಿ ಸರ್ಕಾರಿ ಶಾಲೆ ಮಕ್ಕಳಿಗೆ ರಾಜ್ಯಾದ್ಯಂತ ಶೂ ಭಾಗ್ಯ ಯೋಜನೆ ಜಾರಿಗೆ ತಂದಿದ್ದರು. ಬಡವರು, ಶೋಷಿತರ ಧ್ವನಿಯಾಗಿ ರಾಜಣ್ಣ ಕೆಲಸ ನಿರ್ವಹಿಸುತ್ತಿದ್ದಾರೆ. ಆರ್.ರಾಜೇಂದ್ರ ಕ್ರಿಬ್ಕೋ ನಿರ್ದೇಶಕ