

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡ ಡಿ.ಕೆ.ಶಿವಕುಮಾರ್ ಮೂವರು ಕಾರ್ಯಾಧ್ಯಕ್ಷರೊಂದಿಗೆ ಮೊದಲ ಸಭೆ ನಡೆಸಿ, ಪಕ್ಷವನ್ನು ಯಾವ ದಿಕ್ಕಿನತ್ತ ತೆಗೆದುಕೊಂಡು ಹೋಗಬೇಕೆಂಬ ಬಗ್ಗೆ ಸ್ಪಷ್ಟತೆ ಮಾಡಿಕೊಂಡರು.
ಕಳೆಗುಂದಿದ ಕೇಡರ್ ಗಟ್ಟಿ ಮಾಡುವುದು, ಘಟಕಗಳನ್ನು ಕ್ರಿಯಾಶೀಲವಾಗಿಡುವುದು, ಎಲ್ಲ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದರ ಬಗ್ಗೆ ಹೊಸ ತಂಡ ಚರ್ಚೆ ನಡೆಸಿತು. ಸಭೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಿ.ಕೆ.ಶಿವಕುಮಾರ್, ಮಾಸ್ ಬೇಸ್ ಪಾರ್ಟಿ ಬಿಟ್ಟು ಕೇಡರ್ ಬೇಸ್ ಪಕ್ಷ ಕಟ್ಟಲು ನಾಲ್ವರು ಚರ್ಚೆ ಮಾಡಿದ್ದೇವೆ. ಯೋಜನೆ ಸಿದ್ಧ ಮಾಡುತ್ತೇವೆ ಎಂದು ಹೇಳಿದರು.
ಪಕ್ಷಕ್ಕೆ ಕ್ವಾಂಟಿಟಿ ಮುಖ್ಯವಲ್ಲ, ಕ್ವಾಲಿಟಿ ಮುಖ್ಯ. ಕ್ವಾಲಿಟಿ ಇದ್ದಾಗ ಕ್ವಾಂಟಿಟಿ ಬರುತ್ತದೆ. ಪಕ್ಷದಲ್ಲಿ ಶಿಸ್ತು, ಗುಣಮಟ್ಟ ತರುವುದು ನಮ್ಮ ಗುರಿ ಎಂದ ಡಿಕೆಶಿ, ಹೊಸ ನೇಮಕದ ಬಳಿಕ ನಾನಾಗಲಿ ಕಾರ್ಯಾಧ್ಯಕ್ಷರಾಗಲಿ ದೆಹಲಿಗೆ ಹೋಗಿಲ್ಲ. ಅಧಿವೇಶನ ಮುಗಿದ ಬಳಿಕ ಹಿರಿಯ ಮುಖಂಡರನ್ನೊಳಗೊಂಡಂತೆ 15 ಮಂದಿ ಒಟ್ಟಾಗಿ ಭೇಟಿ ಮಾಡಿ ಮಾರ್ಗದರ್ಶನ ಪಡೆದುಕೊಳ್ಳುತ್ತೇವೆ ಎಂದರು. ಪದಗ್ರಹಣ ಯಾವಾಗ ಮಾಡಬೇಕು, ಎಲ್ಲಿ ಮಾಡಬೇಕು, ಯಾರನ್ನು ಕರೆಯಬೇಕೆಂಬ ಬಗ್ಗೆ ಇನ್ನೂ ಯಾವುದೇ ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಅವರಿಗೆ ಸಾಕಾಗುತ್ತಿಲ್ಲ. ಒಂದೊಂದೇ ರಾಜ್ಯವನ್ನು ಭೂಪಟದಿಂದ ತೆಗೆಯುವ ಕೆಲಸ ಮಾಡುತ್ತಿದ್ದಾರೆ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಕಾಂಗ್ರೆಸ್ನಿಂದ ಮಾತ್ರ ಸಾಧ್ಯ. ಗಾಂಧಿ ಕುಟುಂಬದಿಂದ ಮಾತ್ರ ಕಾಂಗ್ರೆಸ್ ಉಳಿಯಲು ಸಾಧ್ಯ. ಗಾಂಧಿ ಕುಟುಂಬ ಎಂದೂ ಅಧಿಕಾರಕ್ಕೆ ಅಂಟಿ ಕುಳಿತಿಲ್ಲ, ರಾಹುಲ್, ಸೋನಿಯಾ ಗಾಂಧಿ 10 ವರ್ಷ ಪ್ರಧಾನಿ ಆಗಬಹುದಿತ್ತು. ಆದರೆ, ಒಬ್ಬ ಆರ್ಥಿಕ ತಜ್ಙ ದೇಶಕ್ಕೆ ಬೇಕು ಎಂದು ಮನಮೋಹನ್ಸಿಂಗ್ ಅವರನ್ನು ಪ್ರಧಾನಿ ಮಾಡಿದರು ಎಂದರು. ಕರೋನಾ ವಿಚಾರದಲ್ಲಿ ಸರ್ಕಾರ ತೆಗೆದುಕೊಳ್ಳುವ ಎಲ್ಲ ನಿಯಂತ್ರಣ ಕ್ರಮಗಳಿಗೆ ಬೆಂಬಲ ನೀಡುತ್ತೇವೆ. ಆದರೆ, ದೇಶದ ಆರ್ಥಿಕ ಪರಿಸ್ಥಿತಿ ಮುಚ್ಚಲು ಕಾಯಿಲೆ ನೆಪ ಆಗಬಾರದು ಎಂದರು. ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ ಹಾಜರಿದ್ದರು.
ಕೈ ಮುಗಿದು ಒಳಗೆ, ಕೈಮುಗಿದು ಹೊರಗೆ...
ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಡಿ.ಕೆ.ಶಿವಕುಮಾರ್ ದ್ವಾರಕ್ಕೆ ನಮಸ್ಕರಿಸಿ ಒಳಗೆ ಕಾಲಿಟ್ಟರು. ಬಳಿಕ ಸುದ್ದಿಗೋಷ್ಠಿಯಲ್ಲಿ ತಮ್ಮನ್ನು ಮುತ್ತಿಕೊಂಡ ಪಕ್ಷದ ಕಾರ್ಯಕರ್ತರನ್ನು ಕೈ ಮುಗಿದು ಹಾಲ್ನಿಂದ ಹೊರಗೆ ಕಳಿಸಿದರು. ಕೈ ಮುಗಿದು ಹಾಲ್ ಸುತ್ತಿದ ಅವರು, ನೀವು ಹೊರಗೆ ಹೋಗುವವರೆಗೂ ನಾನು ಸುದ್ದಿಗೋಷ್ಠಿ ಆರಂಭಿಸಲ್ಲ ಎಂದರು. ಕೊನೆಗೆ ಅಧ್ಯಕ್ಷರ ಮನವಿಗೆ ಕಾರ್ಯಕರ್ತರು ಜಾಗ ಖಾಲಿ ಮಾಡಿದರು.