ತಲಾದಾಯದಲ್ಲಿ ಕರ್ನಾಟಕ ಮೊದಲ ಸ್ಥಾನ: ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಹೇಳಿಕೆ

KPCC Election Campaign Committee Chairman Press Conference Mandya
Published on

ಮಂಡ್ಯ: ಗ್ಯಾರಂಟಿ ಯೋಜನೆಗಳ ಬಗ್ಗೆ ವಿಪಕ್ಷಗಳು ಟೀಕೆ ಮಾಡಿದ್ದವು. ಆದರೆ ಕೇಂದ್ರ ಸರ್ಕಾರ ನಡೆಸಿದ ಸರ್ವೇಯಲ್ಲಿ ರಾಜ್ಯದ ತಲಾ ಆದಾಯ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ 1 ಲಕ್ಷ ಕೋಟಿ ರೂಗಳನ್ನು ಜನರ ಕೈಗೆ ನೇರವಾಗಿ ವರ್ಗಾವಣೆ ಮಾಡುತ್ತಿದೆ. ಪರಿಣಾಮ ಜನರ ಆರ್ಥಿಕ ಶಕ್ತಿ ವೃದ್ಧಿಯಾಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಭರವಸೆ ನೀಡಿದಂತೆ ಅಧಿಕಾರಕ್ಕೆ ಬಂದ ಆರು ತಿಂಗಳ ಒಳಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಾಗ ಈ ಯೋಜನೆಯನ್ನು ವಿರೋಧ ಪಕ್ಷದವರು ಬಿಟ್ಟಿ ಗ್ಯಾರಂಟಿ ಎಂದು ಅಪಪ್ರಚಾರ ನಡೆಸಿದರು. ಅಲ್ಲದೆ, ಈ ಯೋಜನೆಯಿಂದ ಆರ್ಥಿಕವಾಗಿ ಒಡೆತ ಬೀಳಲಿದೆಂದು ಟೀಕಿಸಿದ್ದರು. ಆದರೀಗ ರಾಜ್ಯದ ತಲಾ ಆದಾಯದಲ್ಲಿ ಹೆಚ್ಚಳವಾಗಿರುವುದು ಸರ್ವೇಯಲ್ಲಿ ತಿಳಿದುಬಂದಿದೆ ಎಂದರು.

ಸಂವಿಧಾನದ ಮೇಲೆ ಕೇಂದ್ರ ಸರ್ಕಾರ ನಿರಂತರ ದಾಳಿ ನಡೆಸುತ್ತಿದೆ. ಸಮಾಜವಾದ, ಜಾತ್ಯತೀತ ಪದಗಳನ್ನೇ ತೆಗೆದುಹಾಕಲು ಮುಂದಾಗಿದೆ. ವಿರೋಧ ಪಕ್ಷಗಳ ವಿರುದ್ಧ ದಾಳಿ ಮಾಡಲು ಚುನಾವಣಾ ಆಯೋಗ, ಇಡಿ, ನ್ಯಾಯಾಂಗವನ್ನು ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತದೆ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ಪ್ರಚಾರ ಸಮಿತಿ ಕೆಲಸ ಮಾಡಲಿದೆ. ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿಯು ಇದುವರೆಗೆ ಕೇವಲ ಚುನಾವಣೆಗಾಗಿ ಮಾತ್ರ ಎಂಬ ಪ್ರತೀತಿ ಇತ್ತು. ಆದರೆ, ಇದೇ ಮೊದಲ ಬಾರಿಗೆ ಕೆಪಿಸಿಸಿ ಮತ್ತು ಮುಖ್ಯಮಂತ್ರಿಯವರ ಶಿಫಾರಸ್ಸಿನ ಮೇರೆಗೆ ಪ್ರಚಾರ ಸಮಿತಿಯನ್ನು ಎಐಸಿಸಿ ಮಾನ್ಯಗೊಳಿಸಿ, ಕಾಯಂಗೊಳಿಸಿದೆ. ಪ್ರಚಾರ ಸಮಿತಿಗೆ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಅಧ್ಯಕ್ಷರ ನೇಮಕ ಆಗಿದೆ. ಜಿಲ್ಲಾ ಸಮಿತಿ, ಬ್ಲಾಕ್ ಸಮಿತಿ, ಬೂತ್ ಸಮಿತಿ ರಚಿಸಲು ಮುಂದಾಗಲಾಗಿದೆ. ಸುಮಾರು ಒಂದು ಲಕ್ಷ ಕಾರ್ಯಕರ್ತರನ್ನು ಈ ಸಮಿತಿಯಲ್ಲಿ ಸೇರಿಸಿಕೊಂಡು ಸಂಘಟನೆ ಬಲಪಡಿಸಲು ನಿರ್ಧರಿಸಲಾಗಿದೆ ಎಂದರು.

ಕಾಂಗ್ರೆಸ್ ಪಕ್ಷದ ಸಿದ್ಧಾಂತ, ನಾಯಕತ್ವ ಮತ್ತು ಪಕ್ಷದ ಕಾರ್ಯಕ್ರಮಗಳ ಬಗ್ಗೆ ಪ್ರಚುರಪಡಿಸುವುದು, ವಿರೋಧ ಪಕ್ಷಗಳ ಅಪಪ್ರಚಾರದ ವಿರುದ್ಧ ಸತ್ಯವನ್ನು ಕಾರ್ಯಕರ್ತರಿಗೆ ತಿಳಿಸಲು ಚುನಾವಣಾ ಪ್ರಚಾರ ಸಮಿತಿ ವಿವಿಧ ಕಾರ್ಯಕ್ರಮ ಆಯೋಜಿಸಲಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಈಗಾಗಲೇ ದೇಶದಾದ್ಯಂತ ‘ಮತಗಳ್ಳತನ’ದ ಬಗ್ಗೆ ಆಂದೋಲನ ಆರಂಭಿಸಿದ್ದಾರೆ. ಪ್ರತಿಯೊಬ್ಬ ಪ್ರಜೆಯ ಮತದಾನದ ಹಕ್ಕನ್ನು ಕಾಪಾಡಲು ಮುಂದಾಗಿದ್ದಾರೆ. ಈ ಬಗ್ಗೆ ಪಕ್ಷದ ಕಾರ್ಯಕರ್ತರಿಗೆ ಅರಿವು ಮೂಡಿಸಿ, ಆಂದೋಲನ ವ್ಯಾಪಕಗೊಳಿಸಲು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಕೆಪಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷರಾದ ಎಂ.ಶಿವಣ್ಣ, ಮುನೀರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ, ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಾಜಿ, ಮಹಿಳಾ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷೆ ಶುಭದಾಯಿನಿ, ಕೆಪಿಸಿಸಿ ಕಾರ್ಯದರ್ಶಿ ಎಚ್.ತ್ಯಾಗರಾಜು, ನಗರಸಭಾ ಸದಸ್ಯ ಶ್ರೀಧರ್, ಜಿಲ್ಲಾ ವಕ್ತಾರ ಸಿ.ಎಂ.ದ್ಯಾವಪ್ಪ, ಮೈಶುಗರ್ ಮಾಜಿ ಅಧ್ಯಕ್ಷ ಹಾಲಹಳ್ಳಿ ರಾಮಲಿಂಗಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net