

ಕಾಸರಗೋಡು: ನಗರದ ಪ್ರಸಿದ್ದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ರಾಜ್ಯದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಆಯೋಜಿಸಿರುವ ಕೋಟಿ ಪಂಚಾಕ್ಷರಿ ಜಪಯಜ್ಞ ಸೋಮವಾರ ಆರಂಭಗೊಂಡಿತು. ಉಚ್ಚಿಲ ಪದ್ಮನಾಭ ತಂತ್ರಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತಿದೆ.
ಜಪಯಜ್ಞ ಕುಂಡಕ್ಕೆ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಪ್ರಥಮ ಸಮಿಧೆ ಸಮರ್ಪಿಸುವುದರೊಂದಿಗೆ ಕೋಟಿ ಪಂಚಾಕ್ಷರಿ ಜಪಯಜ್ಞ ಆರಂಭಗೊಂಡಿತು. ನಂತರ ತಲಾ ಒಂದು ಸಾವಿರ ಮಂದಿ ಭಕ್ತರು ನಿಗದಿತ ಮೂರು ಹಂತಗಳಲ್ಲಿ ಯಜ್ಞ ಕುಂಡಕ್ಕೆ ಸಮಿಧೆ ಸಮರ್ಪಿಸಿದರು.
18ರಂದು ಸಂಜೆ ಶ್ರೀಚಕ್ರ ಪೂಜೆ ನಡೆಯುವುದು. 19ರಂದು ಬೆಳಗ್ಗೆ ಶ್ರೀರುದ್ರಹೋಮ ಆರಂಭಗೊಳ್ಳಲಿದ್ದು, ಅಪರಾಹ್ನ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉಪಸ್ಥಿತಿಯಲ್ಲಿ ರುದ್ರಹೋಮ ಪೂರ್ಣಾಹುತಿ ನಡೆಯುವುದು. ವಿವಿಧ ದಿನಗಳಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಪಾಲ್ಗೊಂಡು ಆಶೀರ್ವಚನ ನೀಡುವರು.
ಒಂದು ಕೋಟಿ ಪಂಚಾಕ್ಷರಿ
ನಾಲ್ಕು ದಿನಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ. ಪ್ರತಿದಿನ ಬೆಳಗ್ಗೆ 7, 9 ಹಾಗೂ 11ಕ್ಕೆ ಮೂರು ಹಂತಗಳಲ್ಲಿ ತಲಾ ಒಂದು ಸಾವಿರ ಮಂದಿಯಿಂದ ಯಜ್ಞಕುಂಡಕ್ಕೆ ಸಮಿಧೆ ಸಮರ್ಪಿಸುತ್ತಿದ್ದಾರೆ. ಪ್ರತಿಯೊಬ್ಬ ತಲಾ ಒಂದು ಸಾವಿರ ಸಮಿಧೆ ಸಮರ್ಪಿಸಲಿದ್ದು, ದಿನವೊಂದಕ್ಕೆ 30 ಲಕ್ಷದಂತೆ ಮೂರು ದಿವಸಗಳ ಕಾಲ 90 ಲಕ್ಷ ಹಾಗೂ ಕೊನೇ ದಿನದಂದು 10 ಲಕ್ಷ ಸೇರಿ ಒಟ್ಟು ಒಂದು ಕೋಟಿ ಪಂಚಾಕ್ಷರಿ ಜಪಯಜ್ಞ ಸಲ್ಲಿಸಲಾಗುವುದು.