ಕ್ಷೇತ್ರದ ಜನತೆಗೆ ನಿರಂತರ ಸೇವೆ, ಕಾಪು ಕ್ಷೇತ್ರ ಬಿಜೆಪಿ ಕಚೇರಿಗೆ ಭೇಟಿ ನೀಡಿ ಕೋಟ ಶ್ರೀನಿವಾಸ ಪೂಜಾರಿ ಭರವಸೆ

kota pujary
ಕಾಪು ಕ್ಷೇತ್ರ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಪಕ್ಷದ ವತಿಯಿಂದ ಸನ್ಮಾನಿಸಲಾಯಿತು
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳ ಜನರ ನಡುವೆ ಸಮನ್ವಯತೆ ಸಾಧಿಸಿ, ಅವಳಿ ಜಿಲ್ಲೆಗಳ ಜನರ ವಿವಿಧ ಬೇಡಿಕೆಗಳು ಮತ್ತು ಸಮಸ್ಯೆಗಳಿಗೆ ಸ್ಪಂದಿಸಿ, ಎಲ್ಲ ವಿಭಾಗಗಳಲ್ಲಿಯೂ ಕ್ಷೇತ್ರದ ಅಭಿವೃದ್ಧಿಗೆ ಬೇಕಾಗುವ ಪ್ರಯತ್ನ ಮಾಡುತ್ತೇವೆ. ಆ ಮೂಲಕ ಕ್ಷೇತ್ರದ ಜನತೆಗೆ ನಮ್ಮ ನಿರಂತರ ಸೇವೆ ನೀಡಲಾಗುವುದು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಮಂಗಳವಾರ ಕಾಪು ಕ್ಷೇತ್ರ ಬಿಜೆಪಿ ಕಚೇರಿಗೆ ಭೇಟಿ ನೀಡಿ, ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಎನ್‌ಡಿಎ ಒಕ್ಕೂಟಕ್ಕೆ ಗೆಲುವು

ಅಯೋಧ್ಯೆ, ಕಾಶಿ ಕಾರಿಡಾರ್, ತ್ರಿವಳಿ ತಲಾಖ್, ಆರ್ಟಿಕಲ್ 370, ಪ್ರಧಾನಮಂತ್ರಿ ಆಯುಷ್ಮಾನ್ ಯೋಜನೆ, ಕಿಸಾನ್ ಸಮ್ಮಾನ್ ಸೇರಿದಂತೆ ಹಲವು ಬಗೆಯ ಕೊಡುಗೆ, ಸೌಲಭ್ಯಗಳಿಗಿಂತ ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟ ನೀಡಿದ ಚೀಟಿ ಗ್ಯಾರಂಟಿಯನ್ನು ದೇಶದ ಜನತೆ ನಂಬಿದ ಪರಿಣಾಮ ಬಿಜೆಪಿಗೆ ಹಿನ್ನಡೆಯಾದರೂ ಎನ್‌ಡಿಎ ಒಕ್ಕೂಟಕ್ಕೆ ಗೆಲುವಾಗಿದೆ. ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಿ ದೇಶವನ್ನು ವಿಶ್ವಗುರುವನ್ನಾಗಿ ಮುನ್ನಡೆಸುವುದು ಖಚಿತವಾಗಿದೆ ಎಂದರು.

ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ನಿರೀಕ್ಷೆಗೂ ಮೀರಿದ ಬಹುಮತದೊಂದಿಗೆ ಕೋಟ ಶ್ರೀನಿವಾಸ ಪೂಜಾರಿ ಸಂಸದರಾಗಿ ಆಯ್ಕೆಯಾಗಿದ್ದು, ಈ ಗೆಲುವು ಕಾರ್ಯಕರ್ತರಿಗೆ ಸಲ್ಲುವಂತದ್ದು. ಕಾಪು ಕ್ಷೇತ್ರದಲ್ಲಿ 32 ಸಾವಿರಕ್ಕೂ ಅಧಿಕ ಮತಗಳ ಅಂತರದ ಗೆಲುವು ಸಿಕ್ಕಿದ್ದು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಶ್ರಮವೇ ಮುಖ್ಯ ಕಾರಣ. ಈ ಗೆಲುವು ವಿಜಯದ ಆರಂಭ. ಮುಂದಿನ ಜಿಪಂ ಮತ್ತು ತಾಪಂ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಚುನಾವಣಾ ಸಂಚಾಲಕ ಕುತ್ಯಾರು ನವೀನ್ ಶೆಟ್ಟಿ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ.ಸುವರ್ಣ, ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ್ ನಾಯಕ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪೃಥ್ವಿರಾಜ್ ಶೆಟ್ಟಿ, ಯುವ ಮೋರ್ಚಾ ಕ್ಷೇತ್ರಾಧ್ಯಕ್ಷ ಸೋನು ಪಾಂಗಾಳ, ಮಹಿಳಾ ಮೋರ್ಚಾ ಕ್ಷೇತ್ರಾಧ್ಯಕ್ಷೆ ನೀತಾ ಗುರುರಾಜ್, ಕಾಪು ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ರಾವ್, ಶರಣ್ ಕುಮಾರ್ ಮಟ್ಟು ಉಪಸ್ಥಿತರಿದ್ದರು.

ಕಾರ್ಯಕರ್ತರು, ಮುಖಂಡರ ಪರಿಶ್ರಮ ಮತ್ತು ಎಲ್ಲರ ಸಹಕಾರ, ಪ್ರಯತ್ನದ ಫಲವಾಗಿ ಬಿಜೆಪಿ ಗೆದ್ದಿದೆ. ನಮ್ಮ ಶಾಸಕರು ಇರುವಲ್ಲಿ, ಇಲ್ಲದೆ ಇರುವಲ್ಲಿಯೂ ಬಿಜೆಪಿಗೆ ಬಹುಮತ ದೊರಕಿದೆ. ರಾಜ್ಯದಲ್ಲಿ ಮೋದಿ ಶಕ್ತಿ, ಪಕ್ಷ ಸಂಘಟನೆ ಗೆದ್ದಿದೆ. ಮೋದಿ ಗ್ಯಾರಂಟಿಗೆ ಗೆಲುವಾಗಿದೆ, ಕಾಂಗ್ರೆಸ್ ಗ್ಯಾರಂಟಿಗೆ ಸೋಲಾಗಿದೆ.
ಕೋಟ ಶ್ರೀನಿವಾಸ ಪೂಜಾರಿ

ಅವಕಾಶ ಸ್ವಾರ್ಥಕ್ಕಾಗಿ ಬಳಸಿಲ್ಲ

ಗ್ರಾಮ ಪಂಚಾಯಿತಿಯಿಂದ ಸಂಸದನಾಗುವವರೆಗೆ 34 ವರ್ಷಗಳಿಂದ ಪಕ್ಷ ವಿವಿಧ ಅವಕಾಶ ನೀಡುತ್ತಾ ಬಂದಿದೆ. ಈ ಅವಕಾಶವನ್ನು ಸ್ವಂತಕ್ಕಾಗಿ ಬಳಸಿಲ್ಲ. ಪಕ್ಷ, ಕಾರ್ಯಕರ್ತರು ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ಸಮಯವನ್ನು ಮೀಸಲಿಟ್ಟಿದ್ದೇನೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net