

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಹಿಂದು ದೈವ ದೇವರಿಗೆ ಯಾವುದೇ ಶಕ್ತಿ ಇಲ್ಲ ಎಂದು ತೋರಿಸಲು ಮುಂದಾಗಿ ಕಾಣಿಕೆ ಡಬ್ಬಕ್ಕೆ ಅಶ್ಲೀಲ ವಸ್ತುಗಳನ್ನು ಹಾಕಿದ್ದಾತನಿಗೆ ಕೊರಗಜ್ಜ ತನ್ನ ಶಕ್ತಿ ತೋರಿಸಿದ್ದರು ಎಂದು ಕೊಣಾಜೆ ಠಾಣಾ ನಿರೀಕ್ಷಕ ರಾಜೇಂದ್ರ ಬಿ. ಹೇಳಿದರು.
ಅಸೈಗೋಳಿ ಶ್ರೀ ಗುಳಿಗ ಕೊರಗಜ್ಜ ಸೇವಾ ಸಮಿತಿ ಆಶ್ರಯದಲ್ಲಿ ಫೆ.10ರವರೆಗೆ ನಡೆಯಲಿರುವ ಪುನಃಪ್ರತಿಷ್ಠಾಪನೆ, ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವರ್ಷಾವಧಿ ಕೋಲ ಪ್ರಯುಕ್ತ ಶುಕ್ರವಾರ ಆಯೋಜಿಸಲಾಗಿದ್ದ ಧಾರ್ಮಿಕ ಸಭೆ ಸಮಾರೋಪದಲ್ಲಿ ಮಾತನಾಡಿದರು. ಈ ಸಂದರ್ಭ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರವಿ ರೈ ಪಜೀರ್ ದಂಪತಿಯನ್ನು ಸನ್ಮಾನಿಸಲಾಯಿತು. ಸಾಧಕರಾದ ಸುನಂದಾ ಬಿ.ಅಸೈಗೋಳಿ, ತಿಮ್ಮಪ್ಪ ಗಟ್ಟಿ, ಮನೋಜ್ ಕುಮಾರ್, ರಾಜಣ್ಣ ಅಸೈಗೋಳಿ, ಸಂಕೇತ್ ಶೆಟ್ಟಿ, ತಾರಾನಾಥ ಪೂಜಾರಿ, ವಿಶ್ವನಾಥ ಕೊಲ್ಯ, ಕೋದಂಡರಾಮ, ಹಿರಿಯರಾದ ಕೇಶವ ಪಾಟಾಳಿ- ವಿಮಲಾ ದಂಪತಿ ಅವರನ್ನು ಗೌರವಿಸಲಾಯಿತು. ಸಹಕಾರ ನೀಡಿದ ಸಂಘ-ಸಂಸ್ಥೆಗಳನ್ನು ಅಭಿನಂದಿಸಲಾಯಿತು. ಮಾಜಿ ಸಂಸದರು ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ಗುಳಿಗ ಕೊರಗಜ್ಜ ಸೇವಾ ಸಮಿತಿ ಅಧ್ಯಕ್ಷ ಭಾಸ್ಕರ ಕೆ.ಗುಡ್ಡೆಮಾರ್ ಅಧ್ಯಕ್ಷತೆ ವಹಿಸಿದ್ದರು. ಪಚ್ಚನಾಡಿ ಬಂದಲೆ ಶ್ರೀಮಂತ ರಾಜಗುಳಿಗ ಕ್ಷೇತ್ರದ ಧರ್ಮದರ್ಶಿ ಸತೀಶ್ ಬಂದಲೆ, ತಾಪಂ ಮಾಜಿ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ, ಅಸ್ತ್ರ ಗ್ರೂಪ್ ಸಿಇಒ ಲಾಂಚುಲಾಲ್ ಕೆ.ಎಸ್., ಅಸೈಗೋಳಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಪರಂಜ್ಯೋತಿ ಮಾತೃಮಂಡಳಿ ಅಧ್ಯಕ್ಷೆ ನಾಗವೇಣಿ ಶೆಟ್ಟಿ, ಉದ್ಯಮಿ ಸುಮಿತ್ ಸಾಮಾನಿ, ಸಂತ ಜೋಸೆಫ್ ವಾಝ್ ಪ್ರಾರ್ಥನಾ ಮಂದಿರದ ಅಧ್ಯಕ್ಷ ವಾಜಿ ಟೆಲ್ಲಿಸ್, ಕೊಣಾಜೆ ಗ್ರಾಪಂ ಮಾಜಿ ಅಧ್ಯಕ್ಷ ಶೌಕತ್ ಅಲಿ, ಶ್ರೀ ಗುಳಿಗ ಕೊರಗಜ್ಜ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಸೀತಾರಾಮ ಶೆಟ್ಟಿ ನೆತ್ತಿಲಬಾಳಿಕೆ, ಸೇವಾ ಸಮಿತಿ ಉಪಾಧ್ಯಕ್ಷ ಪ್ರೇಮದಾಸ್ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು. ಶ್ರೀ ಗುಳಿಗ ಕೊರಗಜ್ಜ ಸೇವಾ ಸಮಿತಿ ಕಾರ್ಯದರ್ಶಿ ಸಂದೀಪ್ ಆಂಚನ್ ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರವಿ ರೈ ಪ್ರಸ್ತಾವನೆಗೈದರು. ಜತೆ ಕಾರ್ಯದರ್ಶಿ ಚೇತನ್ ಅಸೈಗೋಳಿ ವಂದಿಸಿದರು. ಆನಂದ ಕೆ.ಅಸೈಗೋಳಿ ಕಾರ್ಯಕ್ರಮ ನಿರೂಪಿಸಿದರು.
ಜೀರ್ಣೋದ್ಧಾರ ಯಶಸ್ಸಿಗೆ ಹಲವು ಸಮಿತಿಗಳನ್ನು ರಚಿಸಲಾಗಿದ್ದು, ಎಲ್ಲರೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದಾರೆ. ಕ್ಷೇತ್ರಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷ ಸಹಕಾರ ನೀಡಿದವರನ್ನು ಗುರುತಿಸುವ ಪ್ರಯತ್ನ ಮಾಡಲಾಗಿದೆ. - ಭಾಸ್ಕರ ಕೆ.ಗುಡ್ಡೆಮಾರ್, ಅಧ್ಯಕ್ಷರು, ಶ್ರೀ ಗುಳಿಗ ಕೊರಗಜ್ಜ ಸೇವಾ ಸಮಿತಿ