

ವಿಜಯವಾಣಿ ಸುದ್ದಿಜಾಲ ಮಂಗಳೂರು
ಪರಿಸರ ರಕ್ಷಣೆ ಹಾಗೂ ಕೊಂಕಣ ರೈಲು ಮಾರ್ಗದ ಇಕ್ಕೆಲಗಳ ಸೌಂದರ್ಯ ವೃದ್ಧಿಗೆ ಈ ವರ್ಷ ಕೊಂಕಣ ರೈಲ್ವೆ 5,000 ಗಿಡ ನಾಟಿ ಮಾಡಲು ಉದ್ದೇಶಿಸಿದೆ ಎಂದು ಮಹಾರಾಷ್ಟ್ರದ ಪ್ರಧಾನ ಕಾರ್ಯದರ್ಶಿ(ಅರಣ್ಯ) ಬಿ.ವೇಣುಗೋಪಾಲ ರೆಡ್ಡಿ ಐಎಎಸ್ ಹೇಳಿದರು.
ನವಿ ಮುಂಬೈನ ಸೀವುಡ್ಸ್‌ನಲ್ಲಿರುವ ಕೊಂಕಣ ರೈಲ್ವೆ ವಿಹಾರದಲ್ಲಿ ಆಯೋಜಿಸಿದ ಗಿಡ ನಾಟಿ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಇದು ಪರಿಸರ ಸಂರಕ್ಷಣೆಯತ್ತ ಮಹತ್ವದ ಹೆಜ್ಜೆಯಾಗಿದೆ. ಕೊಂಕಣ ರೈಲ್ವೆಯು ಹವಾಮಾನ ಬದಲಾವಣೆಯ ದುಷ್ಪರಿಣಾಮ ತಗ್ಗಿಸುವಲ್ಲಿ ಮತ್ತು ಆರೋಗ್ಯಕರ, ಹಸಿರು ಭೂಮಿಯನ್ನು ಉತ್ತೇಜಿಸಲು ಮುತುವರ್ಜಿ ವಹಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪುಣೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿವೇಕ್ ಖಂಡೇಕರ್ ಮತ್ತು ಥಾಣೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಪ್ರತಿಭಾ, ಕೊಂಕಣ್ ರೈಲ್ವೆ ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಸಂತೋಷ್ ಕುಮಾರ್ ಝಾ ಉಪಸ್ಥಿತರಿದ್ದರು.