

ಕೋಲ್ಕತ್ತ: ಪತಿಯನ್ನು ಮೊಬೈಲ್ ಚಾರ್ಜರ್ನಿಂದಲೇ ಹತ್ಯೆ ಮಾಡಿದ ವಕೀಲೆಗೆ ಪಶ್ಚಿಮಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಫಾಸ್ಟ್ ಟ್ರ್ಯಾಕ್ ಕೋರ್ಟ್, 10,000 ರೂ.ದಂಡದೊಂದಿಗೆ, ಜೀವಾವಧಿ ಶಿಕ್ಷೆ ವಿಧಿಸಿ ಇಂದು ತೀರ್ಪು ನೀಡಿದೆ.
ಏನಿದು ಪ್ರಕರಣ?
ಅನಿಂದಿತಾ ಮತ್ತು ರಜತ್ ಇಬ್ಬರೂ ವಕೀಲರು. ಕೋಲ್ಕತ್ತದ ಹೈಕೋರ್ಟ್ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಬರುಬರುತ್ತ ಇವರಲ್ಲಿ ಮನಸ್ತಾಪ ಶುರುವಾಯಿತು. ಅದೇ ದೊಡ್ಡದಾಗಿ ಪತಿ ರಜತ್ನನ್ನು ಅನಿಂದಿತಾ ಮೊಬೈಲ್ ಚಾರ್ಜರ್ನಿಂದಲೇ ಹತ್ಯೆ ಮಾಡಿದ್ದಳು. ಕಳೆದ ನವೆಂಬರ್ನಲ್ಲಿಯೇ ಘಟನೆ ನಡೆದಿತ್ತು. ಹಾಗೇ ರಂಜಿತ್ ತಂದೆ ಅನಿಂದಿತಾ ವಿರುದ್ಧ ದೂರು ನೀಡಿದ್ದರು.
ಕೋರ್ಟ್ನಲ್ಲಿ ಅನಿಂದಿತಾ ಪರ ವಾದ ಮಂಡಿಸಿದ್ದ ವಕೀಲರು, ನನ್ನ ಕಕ್ಷಿದಾರಳು ಯಾವುದೇ ಅಪರಾಧ ಮಾಡಿಲ್ಲ. ರಂಜಿತ್ ಜತೆ ಜಗಳ ಆಗಿದ್ದ ಹಿನ್ನೆಲೆಯಲ್ಲಿ ಮಗುವಿನೊಂದಿಗೆ ಬೇರೆ ಕೋಣೆಯಲ್ಲಿ ಮಲಗುತ್ತಿದ್ದರು. ಆದರೆ ಒಂದು ದಿನ ಅವನ ರೂಂನಿಂದ ಶಬ್ದ ಬಂದ ಹಿನ್ನೆಲೆಯಲ್ಲಿ ಹೋಗಿ ನೋಡಿದಾಗ ಆತ ನೇಣು ಹಾಕಿಕೊಂಡಿದ್ದ ಎಂದು ಹೇಳಿದ್ದರು.
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಬಿಭಾಸ್ ಚಟರ್ಜಿ, ಇದೊಂದು ಪೂರ್ವ ನಿಯೋಜಿತ ಕೊಲೆಯಾಗಿದ್ದು, ಅನಿಂದಿತಾಗೆ ಮರಣದಂಡನೆ ವಿಧಿಸಬೇಕು ಎಂದು ವಾದಿಸಿದ್ದರು. ತನಿಖೆ ವೇಳೆ ಅನಿಂದಿತಾ ಸಾಕ್ಷಿ ನಾಶ ಮಾಡಿದ್ದೂ ಗೊತ್ತಾಗಿತ್ತು. ವಿಚಾರಣೆಗಳೆಲ್ಲ ಈ ಬಾರಿಯ ಮಾರ್ಚ್ನಲ್ಲಿ ಮುಕ್ತಾಯವಾಗಿತ್ತು. ಇದನ್ನೂ ಓದಿ: ಮತ್ತೊಂದು ಲವ್ ಜಿಹಾದ್ ಪ್ರಕರಣ ; ಹಿಂದು ಬಾಲಕಿಯನ್ನು ಅಪಹರಿಸಿದ ಮೂವರು ಹೆಂಡಿರ ಗಂಡ
ಅನಿಂದಿತಾಗೆ ಮೂರು ವರ್ಷದ ಮಗು ಇರುವ ಕಾರಣಕ್ಕೆ ಮತ್ತು ಕೊಲೆಯನ್ನು ನೋಡಿದವರು ಯಾರೂ ಇಲ್ಲ ಎಂಬ ಅಂಶಗಳನ್ನು ಇಟ್ಟುಕೊಂಡು ಜೀವಾವಧಿ ಶಿಕ್ಷೆ ವಿಧಿಸಿದೆ.
ಅನಿಂದಿತಾಳನ್ನು ಕೋರ್ಟ್ನಿಂದ ನೇರವಾಗಿ ಜೈಲಿಗೆ ಕರೆದುಕೊಂಡು ಹೋಗಲಾಗಿದೆ. ತನ್ನ ಕೊನೇ ಉಸಿರು ಇರುವವರೆಗೂ ಹೋರಾಡುತ್ತೇನೆ ಎಂದು ಹೇಳಿದ್ದಾಳೆ. (ಏಜೆನ್ಸೀಸ್)