

ಕೋಲ್ಕತ್ತಾ: ದೇಶಾದ್ಯಂತ ಸಂಚಲನ ಮೂಡಿಸಿರುವ ಕೋಲ್ಕತ್ತಾ ಟ್ರೈನಿ ಡಾಕ್ಟರ್ ರೇಪ್ ಮತ್ತು ಮರ್ಡರ್ ಪ್ರಕರಣದ ಆರೋಪಿ ಸಂಜಯ್ ರಾಯ್ ನನ್ನು ಸಿಬಿಐ ಅಧಿಕಾರಿಗಳು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ನಾನು ಯಾವ ತಪ್ಪನ್ನೂ ಮಾಡಿಲ್ಲ. ಉದ್ದೇಶಪೂರ್ವಕವಾಗಿ ನನ್ನನ್ನು ಸಿಲುಕಿಸಲಾಗಿದೆ ಎಂದು ಕಣ್ಣೀರು ಹಾಕಿರುವುದಾಗಿ ಹಲವು ರಾಷ್ಟ್ರೀಯ ಮಾಧ್ಯಮಗಳು ಬಹಿರಂಗಪಡಿಸಿವೆ.
ಪ್ರಕರಣದಲ್ಲಿ ಆರೋಪಿ ಒಪ್ಪಿಗೆ ಬಳಿಕ ಪಾಲಿಗ್ರಾಫ್ ಪರೀಕ್ಷೆ ನಡೆಸಲು ನ್ಯಾಯಾಲಯ ಅಧಿಕಾರಿಗಳಿಗೆ ಅನುಮತಿ ನೀಡಿದೆ. ಆದರೆ, ವಿಚಾರಣೆ ವೇಳೆ ನೀವು ಪಾಲಿಗ್ರಾಫ್ ಪರೀಕ್ಷೆಗೆ ಏಕೆ ಒಪ್ಪುತ್ತೀರಿ ಎಂದು ನ್ಯಾಯಾಧೀಶರು ಆರೋಪಿಯನ್ನು ಪ್ರಶ್ನಿಸಿದಾಗ ಆತ ಭಾವುಕನಾಗಿ ನಾನು ನಿರಪರಾಧಿ, ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನನ್ನು ಸಿಲುಕಿಸಲಾಗಿದೆ. ಈ ಪರೀಕ್ಷೆಯು ಸತ್ಯವನ್ನು ಬಹಿರಂಗಪಡಿಸುತ್ತದೆ ಎಂದು ಹೇಳಿದ್ದಾನೆ. ಹೀಗಾಗಿ ಈ ಪ್ರಕರಣ ಮತ್ತೊಂದು ಮಹತ್ವದ ತಿರುವು ಪಡೆದುಕೊಂಡಿದೆ.
ಆದರೆ ಆರೋಪಿ ಸಿಬಿಐ ತನಿಖೆಯಲ್ಲಿ ತಪ್ಪೊಪ್ಪಿಕೊಂಡ ಸುದ್ದಿ ಇತ್ತೀಚೆಗೆ ಬಂದಿತ್ತು. ಆರೋಪಿಯು ಮರುಮಾತಿಲ್ಲದೆ ಇಡೀ ಘಟನೆಯನ್ನು ವಿವರಿಸಿದ್ದಾನೆ. ಅವನು ಯಾವುದೇ ಪಶ್ಚಾತ್ತಾಪ ಪಡಲಿಲ್ಲ ಎಂದು ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿ ಬಹಿರಂಗಪಡಿಸಿದ್ದರು ಎಂದು ಇತ್ತೀಚೆಗೆ ವರದಿಯಾಗಿತ್ತು. ಇನ್ನು ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯದ ವೈದ್ಯಕೀಯ ತಂಡವು ಆರೋಪಿಯ ಮಾನಸಿಕ ಸ್ಥಿತಿಯನ್ನು ವಿಶ್ಲೇಷಿಸಿತ್ತು. ಆದರೆ ಆರೋಪಿ ತಾನು ಯಾವ ತಪ್ಪನ್ನೂ ಮಾಡಿಲ್ಲ ಎಂದಿರುವುದು ಚರ್ಚೆಗೆ ಗ್ರಾಸವಾಗಿದೆ.