

ಕೋಲಾರ: ನಗರಸಭೆಯಲ್ಲಿ ಶತಾಯಗತಾಯ ಅಧಿಕಾರ ಹಿಡಿಯಲು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪೈಪೋಟಿ ನಡೆದಿದ್ದು ಪಕ್ಷೇತರರನ್ನು ಸೆಳೆಯಲು ಮುಖಂಡರು ಕಸರತ್ತು ನಡೆಸುತ್ತಿದ್ದಾರೆ.
ಈ ಬಾರಿ ಅಧ್ಯಕ್ಷ ಸ್ಥಾನ ಬಿಸಿಎಂ (ಎ) ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಹುದ್ದೆಗೆ ಬಂಡವಾಳ ಹೂಡಲು ಸಾಮರ್ಥ್ಯವಿರುವ ಸದಸ್ಯರನ್ನು ಕಣಕ್ಕಿಳಿಸಲು ನಿರ್ಧರಿಸಿದ್ದಾರೆ.
ಪಕ್ಷದ ತತ್ವ-ಸಿದ್ಧಾಂತಕ್ಕಿಂತ ಅಧಿಕಾರ ಹಿಡಿಯುವುದು ಮುಖ್ಯವೆಂಬ ತೀರ್ಮಾನಕ್ಕೆ ಬಂದಿರುವ ಮುಖಂಡರು ಅಗತ್ಯವಿದ್ದಲ್ಲಿ ಅಭ್ಯರ್ಥಿ ಗೆಲುವಿಗೆ ಸೆಲ್ಪ್ ಇನ್‌ವೆಸ್ಟ್‌ಮೆಂಟ್ ಮಾಡಲು ಉದ್ದೇಶಿಸಿದ್ದಾರೆ ಎನ್ನಲಾಗಿದೆ.
ಪಕ್ಷಗಳ ಬಲಾಬಲ: ಕೋಲಾರ ನಗರಸಭೆ 35 ಸದಸ್ಯರ ಬೆಂಬಲ ಹೊಂದಿದ್ದು ಕಾಂಗ್ರೆಸ್-12, ಜೆಡಿಎಸ್-8, ಬಿಜೆಪಿ-3, ಎಸ್‌ಡಿಪಿಐ-4 ಹಾಗೂ 8 ಪಕ್ಷೇತರ ಸದಸ್ಯರಿದ್ದಾರೆ. ಕಾಂಗ್ರೆಸ್ ಇಲ್ಲವೆ ಜೆಡಿಎಸ್ ಅಧಿಕಾರ ಹಿಡಿಯಲು 20 ಸದಸ್ಯರ ಬೆಂಬಲ ಬೇಕು.
ಕಾಂಗ್ರೆಸ್‌ಗೆ 8 ಸದಸ್ಯರ ಬೆಂಬಲ ಬೇಕಿರುವುದರಿಂದ ಪಕ್ಷೇತರರನ್ನು ಸೆಳೆಯಲು ತಂತ್ರಗಾರಿಕೆ ರೂಪಿಸುತ್ತಿರುವುದಲ್ಲದೆ, ಬಿ ಪ್ಲಾನ್‌ನಡಿ ನಾಲ್ವರು ಎಸ್‌ಡಿಪಿಐ ಸದಸ್ಯರ ಮನವೊಲಿಸಿ ಅಧಿಕಾರ ಹಂಚಿಕೆಗೆ ಒಪ್ಪಂದ ಮಾಡಿಕೊಳ್ಳಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಜೆಡಿಎಸ್ ಮುಖಂಡರು ಬಿಜೆಪಿ ಹಾಗೂ ಪಕ್ಷೇತರರನ್ನು ಒಗ್ಗೂಡಿಸಿ ನಗರಸಭೆಯಲ್ಲಿ ಅಧಿಪತ್ಯಕ್ಕೆ ಪ್ರಯತ್ನಿಸುತ್ತಿದ್ದು ಎರಡೂ ಪಕ್ಷಗಳು ಬಹುಮತಕ್ಕಾಗಿ ಭರ್ಜರಿ ಬೇಟೆಗಾಗಿ ರಹಸ್ಯ ಕಾರ್ಯಾಚರಣೆಗೆ ಇಳಿದಿದ್ದು ಬಿಜೆಪಿ, ಎಸ್‌ಡಿಪಿಐ ಹಾಗೂ ಮಾಜಿ ಶಾಸಕ ವರ್ತೂರು ಪ್ರಕಾಶ್ ಬೆಂಬಲಿತ ಸದಸ್ಯರು ನಿರ್ಣಾಯಕವಾಗುವ ಲಕ್ಷಣ ಗೋಚರಿಸುತ್ತಿದೆ.
ಗೋವಿಂದಗೌಡರಿಗೆ ಧರ್ಮ ಸಂಕಟ: ಅಧ್ಯಕ್ಷ ಸ್ಥಾನಕ್ಕೆ ಕೈ ಮತ್ತು ತೆನೆಯಿಂದ ಒಟ್ಟು 12 ಮಂದಿ ಆಕಾಂಕ್ಷಿಗಳಿದ್ದಾರೆ ಎನ್ನಲಾಗಿದೆ, ಮತ್ತೊಮ್ಮೆಅಧ್ಯಕ್ಷನಾಗಲು ಅವಕಾಶ ಸಿಗದಿರುವುದರಿಂದ ಬೆಂಬಲಿಗರನ್ನು ಗದ್ದುಗೆ ಮೇಲೆ ಕೂರಿಸಲು ಹೊರಟಿರುವ ಮಾಜಿ ಅಧ್ಯಕ್ಷ, ಹಾಲಿ ಕಾಂಗ್ರೆಸ್ ಸದಸ್ಯ ಬಿ.ಎಂ.ಮುಬಾರಕ್ ಪಕ್ಷದ ವರಿಷ್ಠರು ಅನುಮತಿ ನೀಡಿದರೆ ತಾಕತ್ತು ತೋರಿಸಲು ಇಚ್ಛಿಸಿದ್ದಾರೆ ಎನ್ನಲಾಗಿದೆ. ಕಳೆದ ಅವಧಿಯಲ್ಲಿ ಜೆಡಿಎಸ್ ಅಧಿಕಾರಕ್ಕೆ ತರಲು ಶ್ರಮಿಸಿದ್ದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಈಗ ಕಾಂಗ್ರೆಸ್ಸಿನಲ್ಲಿ ಗುರುತಿಸಿಕೊಂಡಿದ್ದಾರೆ, ಎರಡೂ ಪಕ್ಷದಲ್ಲಿ ಇವರಿಗೆ ಆಪ್ತ ಸದಸ್ಯರು ಇರುವುದರಿಂದ ಧರ್ಮ ಸಂಕಟದಲ್ಲಿ ಸಿಲುಕಿದ್ದಾರಲ್ಲದೆ, ಮುಂದಿನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಎಚ್ಚರಿಕೆಯಿಂದ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಶಾಸಕರಿಗೆ ಸವಾಲು: ಶಾಸಕ ಕೆ.ಶ್ರೀನಿವಾಸಗೌಡರಿಗೆ ಸ್ವಪಕ್ಷದ ಎಂಎಲ್‌ಸಿ ಮನೋಹರ್, ಆಪ್ತರಾದ ಕಾಂಗ್ರೆಸ್ಸಿನ ಎಂಎಲ್‌ಸಿ ನಜೀರ್ ಅಹಮ್ಮದ್, ಶಾಸಕ ಕೆ.ಆರ್.ರಮೇಶ್‌ಕುಮಾರ್ ಸಾಥ್ ನೀಡದಿದ್ದರೆ ನಗರಸಭೆಯಲ್ಲಿ ಬೆಂಬಲಿಗರಿಗೆ ಪಟ್ಟ ಕಟ್ಟುವುದು ಕಷ್ಟವಾಗಬಹುದು.
ಪ್ರಮುಖ ಆಕಾಂಕ್ಷಿಗಳು: ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು 10ನೇ ವಾರ್ಡಿನ ರಂಗಮ್ಮ, 20ನೇ ವಾರ್ಡಿನ ಸೌಭಾಗ್ಯ ಅವರಿಗೆ ಅವಕಾಶವಿದೆ. ಆದರೆ ಕೇವಲ 3 ಸದಸ್ಯರನ್ನು ಹೊಂದಿರುವುದರಿಂದ ಅಧಿಕಾರ ಹಿಡಿಯವುದು ಸುಲಭವಲ್ಲ, 1ನೇ ವಾರ್ಡ್ ಸದಸ್ಯೆ ಆರ್.ಶ್ವೇತಾ ಪ್ರಬಲ ಆಕಾಂಕ್ಷಿಯಾಗಿದ್ದಾರೆ, ಇವರ ಮಾವ ನಗರಸಭೆ ಮಾಜಿ ಸದಸ್ಯ ಮೇಸ್ತ್ರಿ ನಾರಾಯಣಸ್ವಾಮಿ ಶಾಸಕ ಶ್ರೀನಿವಾಸಗೌಡರ ಸಹಾಯದಿಂದ ಸೊಸೆಯನ್ನು ಗದ್ದುಗೆ ಮೇಲೆ ಕೂರಿಸಲು ಕಸರತ್ತು ನಡೆಸಿದ್ದಾರೆ. 8ನೇ ವಾರ್ಡ್ ಕಾಂಗ್ರೆಸ್ ಸದಸ್ಯೆ ಜಿ.ಎಸ್.ಪಾವನಾ, 23ನೇ ವಾರ್ಡಿನ ಅಜ್ರಾನಸ್ರೀನ್, 27ನೇ ವಾರ್ಡಿನ ಕೆ.ಲಕ್ಷ್ಮೀದೇವಮ್ಮ ಹಾಗೂ 33ನೇ ವಾರ್ಡಿನ ನಾಜೀಯಾ ಇನ್ನಿತರರು ಆಕಾಂಕ್ಷಿಗಳಾಗಿದ್ದಾರೆ.