ಗಣೇಶೋತ್ಸವಕ್ಕೂ ಕರೊನಾ ಅಡ್ಡಿ, ಮೂರ್ತಿ ತಯಾರಿಕೆಗೂ ವಿಘ್ನ

2-klr-2
Published on

ಕೋಲಾರ: ‘ಪ್ರತಿ ವರ್ಷ ತಿಂಗಳಿಗೆ ಮುನ್ನವೇ ಗಣಪತಿ ಮೂರ್ತಿಗಳನ್ನು ಆರ್ಡರ್ ಮಾಡುತ್ತಿದ್ದರು. ಈ ಬಾರಿ ಇದುವರೆಗೆ ಒಂದು ಆರ್ಡರ್ ಕೂಡಾ ಬಂದಿಲ್ಲ, ಯಾರಿಂದಲೂ ಫೋನ್ ಕಾಲ್ ಕೂಡ ಇಲ್ಲ’.

ಇದು ನಗರದಲ್ಲಿ ಕಳೆದ ನಾಲ್ಕು ದಶಕಗಳಿಂದ ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿರುವ ಕುಂಬಾರೇಶ್ವರ ಕೈಗಾರಿಕೆಯ ಒಡತಿ ಗೌರಮ್ಮ ಅವರ ಆತಂಕದ ನುಡಿಗಳಾದರೆ ಇನ್ನು ಕೆಲವರು ಮೂರ್ತಿ ತಯಾರಿಕೆಯ ಕೆಲಸಕ್ಕೇ ಕೈ ಹಾಕಿಲ್ಲ.

ವಿಘ್ನವಿನಾಶಕ ವಿನಾಯಕ ಚತುರ್ಥಿಗೆ ಇನ್ನು ಇಪ್ಪತ್ತು ದಿನಗಳಷ್ಟೇ ಬಾಕಿ ಇದೆ. ಈ ಬಾರಿ ಅದ್ದೂರಿ ಗಣೇಶೋತ್ಸವಕ್ಕೆ ವೇಗವಾಗಿ ಹಬ್ಬುತ್ತಿರುವ ಕರೊನಾ ಸೋಂಕು ವಿಘ್ನ ತಂದೊಡ್ಡಿದೆ. ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರ ಅನುಮತಿ ನೀಡುವ ಬಗ್ಗೆ ಇನ್ನೂ ಸ್ಪಷ್ಟ ತೀರ್ಮಾನ ಪ್ರಕಟಿಸದಿರುವುದರಿಂದ ಮೂರ್ತಿ ತಯಾರಕರಲ್ಲೂ ಆತಂಕ ಮನೆ ಮಾಡಿದೆ.

ಗೌರಿ-ಗಣೇಶ ಚತುರ್ಥಿಯಂದು ಮನೆ ಮನೆಯಲ್ಲೂ ಗೌರಿ ಗಣೇಶನ ಮಣ್ಣಿನ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸುತ್ತಾರೆ. ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಪೈಪೋಟಿ ಮೇಲೆ ಭಾರಿ ಗಾತ್ರದ ಅತ್ಯಾಕರ್ಷಕವಾದ ವಿಭಿನ್ನ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ.

ಇದೆಲ್ಲದಕ್ಕೂ ಪೂರ್ವ ತಯಾರಿಯಾಗಿ ಗಣಪತಿ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಳ್ಳುವುದು ಕುಂಬಾರರು. ಇತ್ತೀಚೆಗೆ ಇತರ ಕಲಾವಿದರು ಕೂಡ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಈ ವರ್ಷ ಕರೊನಾ ಕಾರಣದಿಂದ ದೊಡ್ಡ ಮಟ್ಟದ ಸಿದ್ಧತೆಗಳು ಕೋಲಾರದಲ್ಲಿ ಕಾಣುತ್ತಿಲ್ಲ.

ನಗರದ ಕುಂಬಾರೇಶ್ವರ ಕೈಗಾರಿಕೆಯಲ್ಲಿ ಪ್ರತಿ ವರ್ಷವೂ ಗಣೇಶ ಚತುರ್ಥಿಗೆ ಮೂರ್ನಾಲ್ಕು ತಿಂಗಳಿಗೆ ಮುನ್ನವೇ ಗಣಪತಿ ಮೂರ್ತಿ ತಯಾರಿಕೆಯಲ್ಲಿ ತೊಡಗುತ್ತಿದ್ದ ಕೈಗಳಿಗೆ ಕೆಲಸ ಸಿಕ್ಕಿಲ್ಲ. ತಿಂಗಳಿಂದೀಚೆಗೆ ಸಣ್ಣ ಪ್ರಮಾಣದಲ್ಲಿ ಚಿಕ್ಕಚಿಕ್ಕ ಗಣಪತಿ ಮೂರ್ತಿಗಳ ತಯಾರಿಕೆ ಕಾರ್ಯಕ್ಕೆ ಗೌರಮ್ಮ ಮತ್ತು ಕುಟುಂಬದವರು ಕೆಲಸ ಪ್ರಾರಂಭಿಸಿದ್ದಾರೆ. 15ಕ್ಕೂ ಹೆಚ್ಚು ಜನರನ್ನಿಟ್ಟುಕೊಂಡು ಮೂರ್ತಿ ತಯಾರಿಕೆ ಮಾಡುತ್ತಿದ್ದ ಕುಟುಂಬ ಇದೀಗ ಬೆರಳೆಣಿಕೆಯ ಸಿಬ್ಬಂದಿಯನ್ನಿಟ್ಟುಕೊಂಡು ಕೆಲಸದಲ್ಲಿ ನಿರತವಾಗಿದೆ.

ಪ್ರತಿ ವರ್ಷ 4 ಇಂಚಿನಿಂದ ಹಿಡಿದು 6-7 ಅಡಿ ಎತ್ತರದವರೆಗಿನ 1000ಕ್ಕೂ ಅಧಿಕ ಗಣಪತಿ ಮೂರ್ತಿ ತಯಾರಿಸಲಾಗುತ್ತಿತ್ತು. ಈ ವರ್ಷ 1ರಿಂದ ಒಂದು ಮುಕ್ಕಾಲು ಅಡಿ ಎತ್ತರದ ಮೂರ್ತಿಗಳನ್ನಷ್ಟೇ ತಯಾರಿಸಲಾಗುತ್ತಿದೆ. ಶೇ.80ರಷ್ಟು ಮೂರ್ತಿಗಳು ಬಣ್ಣ ರಹಿತ ಪರಿಸರಸ್ನೇಹಿಯಾದರೆ ಶೇ.20 ಮೂರ್ತಿಗಳಿಗೆ ವಾಟರ್ ಪೇಯಿಂಟ್ ಬಳಸಲಾಗುತ್ತಿದೆ. ತಯಾರಿಸುವ ಒಟ್ಟು ಮೂರ್ತಿಗಳಲ್ಲಿ ಶೇ. 50ಕ್ಕಷ್ಟೇ ಬಣ್ಣ ಬಳಿಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಬೇಡಿಕೆ ಬಂದರಷ್ಟೇ ಬಣ್ಣ ಬಳಿಯಲಾಗುವುದು ಎನ್ನುತ್ತಾರೆ ಗೌರಮ್ಮ. ಮೂರ್ತಿ ತಯಾರಿಕೆ ಇಲ್ಲ: ನಗರದಲ್ಲಿ ಸ್ಪಂದನ ಗುಡಿ ಕೈಗಾರಿಕೆ ಕೂಡ ಮೂರ್ತಿ ತಯಾರಿಕೆಯಲ್ಲಿ ಸೈ ಎನಿಸಿಕೊಂಡಿದೆ. ಮಾಲೀಕ ಸ್ಪಂದನ ರಂಗನಾಥ್ ಕರೊನಾ ಕಾರಣದಿಂದ ಈ ವರ್ಷ ಹೊಸ ಮೂರ್ತಿಗಳ ತಯಾರಿಕೆಗೆ ಇಳಿದಿಲ್ಲ. ಇದೇ ರೀತಿ ಅನೇಕರು ಮೂರ್ತಿ ತಯಾರಿಕೆಗೆ ಕೈ ಹಾಕಿಲ್ಲ.

ಈ ವರ್ಷ ಇದುವರೆಗೆ ಯಾರೂ ಗಣಪತಿ ಮೂರ್ತಿಗೆ ಬೇಡಿಕೆ ಇಟ್ಟಿಲ್ಲ. ಬಂಡವಾಳ ಹಾಕಿ ನಷ್ಟ ಮಾಡಿಕೊಳ್ಳುವುದು ಬೇಡವೆಂದು ಮನೆಯಲ್ಲಿ ಪೂಜಿಸುವ ಸಣ್ಣ ಮೂರ್ತಿಗಳನ್ನಷ್ಟೇ ತಯಾರಿಸುತ್ತಿದ್ದೇವೆ. ಗೌರಮ್ಮ, ಕುಂಬಾರೇಶ್ವರ ಕೈಗಾರಿಕೆ, ಕೋಲಾರ ಈ ವರ್ಷದ ಗಣೇಶೋತ್ಸವಕ್ಕೆ ಕರೊನಾ ಆತಂಕ ತಂದೊಡ್ಡಿರುವುದರಿಂದ ಗಣೇಶ ಮೂರ್ತಿ ತಯಾರಿಕೆಗೆ ಮುಂದಾಗಿಲ್ಲ. ಹಿಂದಿನ ವರ್ಷ ತಯಾರಿಸಿದ ಮೂರ್ತಿಗಳೇ ಇನ್ನೂ ಇವೆ. ಬೇಡಿಕೆ ಬಂದರೆ ಅವುಗಳಿಗೆ ಬಣ್ಣ ಹಚ್ಚಿ ಸಿದ್ಧಪಡಿಸಲಾಗುವುದು. ಸ್ಪಂದನ ರಂಗನಾಥ್, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net