ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಕೋಡಿಕಲ್ ಕ್ರಾಸ್ ಬಳಿ ಶುಕ್ರವಾರ ವ್ಯಕ್ತಿಯೋರ್ವರು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಟ್ಯಾಂಕರ್‌ನಡಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಉತ್ತರ ಪ್ರದೇಶದ ಯಾದವ್ ಮೃತಪಟ್ಟವರು. ಕೋಡಿಕಲ್ ಕ್ರಾಸ್ ಬಳಿ ಹೆದ್ದಾರಿ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಅತಿ ವೇಗವಾಗಿ ಚಲಾಯಿಸಿಕೊಂಡು ಬಂದ ಬೈಕ್ ಅವರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಅವರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಈ ಸಂದರ್ಭ ಆಗಮಿಸಿದ ಟ್ಯಾಂಕರ್ ಅವರ ಮೇಲೆ ಹರಿದಿದೆ. ಪರಿಣಾಮ ಯಾದವ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ಪರಿಣಾಮ ಸುಮಾರು ಅರ್ಧ ತಾಸು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ಸಂಚಾರ ವಿಭಾಗದ ಎಸಿಪಿ ನಜ್ಮಾ ಫಾರೂಕಿ ಹಾಗೂ ಸಂಚಾರ ಉತ್ತರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು. ಅಪಘಾತಕ್ಕೆ ಕಾರಣನಾದ ಬೈಕ್ ಸವಾರ ಹಾಗೂ ಟ್ಯಾಂಕರ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಅಪಾಯಕಾರಿ ಸ್ಥಳ: ಕೋಡಿಕಲ್ ಕ್ರಾಸ್‌ನಲ್ಲಿ ಆಗಾಗ ಅಪಘಾತ ಸಂಭವಿಸುತ್ತಿದೆ. ಕೂಳೂರು ಕಡೆಯಿಂದ ಬರುವವರು, ಕುಂಟಿಕಾನ ಕಡೆಯಿಂದ, ಕೊಟ್ಟಾರ ಕಡೆಯಿಂದ ಬಂದು ಕೋಡಿಕಲ್ ಕಡೆಗೆ ಹೋಗುವವರು ಇಲ್ಲಿ ಯು ಟರ್ನ್ ತೆಗೆಯುತ್ತಾರೆ. ಇದರ ನಡುವೆ ಕೆಲವರು ವಿರುದ್ಧ ದಿಕ್ಕಿನಿಂದಲೂ ವಾಹನ ಚಲಾಯಿಸಿಕೊಂಡು ಬರುತ್ತಾರೆ. ಅಲ್ಲಿಯೇ ಬಸ್‌ಗೆ ಕಾಯುವವರು ಕೂಡ ಇರುತ್ತಾರೆ. ಹಾಗಾಗಿ ಇಲ್ಲಿ ಅಪಘಾತ ಮರುಕಳಿಸುತ್ತಲೇ ಇದ್ದು, ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಂಬಂಧಪಟ್ಟವರು ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.