ಕೇರಳದ ಖಾಸಗಿ ಆಸ್ಪತ್ರೆಯಲ್ಲಿ ಮಹಿಳಾ ಸಿಬ್ಬಂದಿಗೆ ಮಾರ್ಷಲ್ ಆರ್ಟ್ಸ್ ತರಬೇತಿ!

crime
Published on

ಕೊಚ್ಚಿ: ಕೋಲ್ಕತ್ತಾದ ಆಸ್ಪತ್ರೆಯೊಂದರಲ್ಲಿ ತರಬೇತಿ ನಿರತ ವೈದ್ಯೆ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹಿನ್ನಲೆಯಲ್ಲಿ ಕೇರಳದ ಕೊಚ್ಚಿಯ ಆಸ್ಪತ್ರೆಯೊಂದು ರಾಜ್ಯಾದ್ಯಂತ ತನ್ನ ಮಹಿಳಾ ಸಿಬ್ಬಂದಿಗೆ ಮಾರ್ಷಲ್ ಆರ್ಟ್ಸ್ ತರಬೇತಿ ನೀಡಲು ಮುಂದಾಗಿದೆ.

ತನ್ನ ಮಹಿಳಾ ಸಿಬ್ಬಂದಿಗೆ ಮಾರ್ಷಲ್ ಆರ್ಟ್ಸ್ ತರಬೇತಿ ನೀಡುವ ಸಲುವಾಗಿ ಆರಂಭಿಕ ಹಂತದಲ್ಲಿ 50 ಲಕ್ಷ ರೂಪಾಯಿ ಮೀಸಲಿಡಲಾಗಿದೆ ಎಂದು ವಿಪಿಎಸ್ ಲೇಕ್​ಶೋರ್ ಆಸ್ಪತ್ರೆ ತಿಳಿಸಿದೆ.

ಪ್ರಾಥಮಿಕ ಹಂತದಲ್ಲಿ ಆರು ತಿಂಗಳೊಳಗೆ 50 ಸಾವಿರ ಮಹಿಳಾ ಸಿಬ್ಬಂದಿಗೆ ಉಚಿತವಾಗಿ ತರಬೇತಿ ನೀಡಲು ಯೋಜಿಸಲಾಗಿದೆ. ಇದರ ಜೊತೆಗೆ ಮಹಿಳೆಯ ಆತ್ಮರಕ್ಷಣೆಗಾಗಿ ಪೆಪ್ಪರ್ ಸ್ಪ್ರೇ ಹಾಗೂ ಸುರಕ್ಷತಾ ಸಾಧನಗಳನ್ನು ಒಳಗೊಂಡ ಅಗತ್ಯ ರಕ್ಷಣಾ ವಸ್ತುಗಳಿರುವ ಕಿಟ್ ನೀಡಲಾಗುವುದು ಎಂದು ಸಂಸ್ಥೆ ಹೇಳಿದೆ.

ಸ್ಥಳೀಯ ಸಂಸ್ಥೆಗಳ ಸಹಯಗೋಗ ಮತ್ತು ರಾಜ್ಯ ಸರ್ಕಾರದ ಬೆಂಬಲದೊಂದಿಗೆ ಮಾರ್ಷಲ್ ಆರ್ಟ್ಸ್ ತರಬೇತಿ ನೀಡಲಾಗುವುದು. ಆಸ್ಪತ್ರೆಯಲ್ಲಿ ಸುರಕ್ಷಿತ ವಾತಾವರಣ ಸೃಷ್ಟಿಸುವ ನಮ್ಮ ಬದ್ಧತೆಯ ಎಲ್ಲ ಮಹಿಳಾ ಸಿಬ್ಬಂದಿಗೆ ತರಬೇತಿ ಕಡ್ಡಾಯಗೊಳಿಸಲಾಗಿದೆ.

ಮಾರ್ಷಲ್ ಆರ್ಟ್ಸ್ ತರಬೇತಿ ಮೂಲಕ ಮಹಿಳೆಯ ದೈಹಿಕ ಸಾರ್ಮರ್ಥ್ಯದೊಂದಿಗೆ ಮಾನಸಿಕ ಶಕ್ತಿಯನ್ನು ವೃದ್ಧಿಸಲಿದೆ ಎಂದು ವಿಪಿಎಸ್ ಲೇಕ್​ಶೋರ್ ಆಸ್ಪತ್ರೆ ಹೇಳಿದೆ.

ಶಿಕ್ಷಣ: ಮಹಿಳಾ ಸಿಬ್ಬಂದಿಯನ್ನು ಮಾನಸಿಕವಾಗಿ ಮತ್ತಷ್ಟು ಗಟ್ಟಿಗೊಳಿಸಲು ಮಕ್ಕಳ ಮತ್ತು ಮಹಿಳಾ ಕಲ್ಯಾಣ ಸಮಿತಿಗಳು ಸೇರಿದಂತೆ ವಿವಿಧ ಸರ್ಕಾರಿ ಏಜೆನ್ಸಿಗಳ ಸಹಯೋಗದೊಂದಿಗೆ ಲೈಂಗಿಕ ಶಿಕ್ಷಣ ತರಗತಿಗಳನ್ನು ನೀಡಲಿದೆ. ಅಹಿತಕರ ಸಂದರ್ಭಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ ಎಂದು ಆಸ್ಪತ್ರೆ ಹೇಳಿದೆ.

ಇವೆಲ್ಲದರ ಜೊತೆಗೆ ಮಹಿಳಾ ಸಿಬ್ಬಂದಿಯ ನೆರವಿಗಾಗಿ ಅಸ್ಪತ್ರೆಯು ತನ್ನದೇ ಆದ ಮೊಬೈಲ್ ಅಪ್ಲಿಕೇಷನ್ ಅನ್ನು ಅಭಿವೃದ್ಧಿಪಡಿಸಿದೆ. ಇದು ತುರ್ತು ಸಂದರ್ಭದಲ್ಲಿ ಸಹಕಾರಿಯಾಗಲಿದೆ.ಈ ಮೊಬೈಲ್ ಅಪ್ಲಿಕೇಷನ್ ಆ್ಯಪ್ ಬಳಕೆದಾರರ ಲೈವ್ ಲೊಕೇಶನ್ ಅನ್ನು ಆಸ್ಪತ್ರೆಯ ಸೆಕ್ಯುರಿಟಿ ಡೆಸ್ಕ್ ಮತ್ತು ಆಯ್ದ HOD ಗಳಿಗೆ ರವಾನಿಸಲು ವಿನ್ಯಾಸಗೊಳಿಸಲಾಗಿದೆ. ತುರ್ತು ಪರಿಸ್ಥಿತಿಯ ಸಮಯದಲ್ಲಿ ಅಧಿಕಾರಿಗಳು ತಕ್ಷಣ ಎಚ್ಚರಿಸುತ್ತಾರೆ ಎಂದು ಖಚಿತಪಡಿಸುತ್ತದೆ. ಈ ಪೂರ್ವಭಾವಿ ಕ್ರಮವು ಆಸ್ಪತ್ರೆಯ ಪರಿಸರದಲ್ಲಿ ಒಟ್ಟಾರೆ ಸುರಕ್ಷತೆ ಮತ್ತು ಸ್ಪಂದಿಸುವಿಕೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net