ಮಾಯಕೊಂಡ: ಜ್ಞಾನವೇ ಸರ್ವಶ್ರೇಷ್ಠ ಸಂಪತ್ತು. ಮನದಲ್ಲಿ ಅರಿವಿನ ದೀಪ ಬೆಳಗುವ ಪ್ರತಿಯೊಬ್ಬರೂ ಜ್ಞಾನ ಉಣ ಬಡಿಸುವ ಗ್ರಂಥಾಲಯಗಳಿಗೆ ತೆರಳಿ ಪುಸ್ತಕ ಓದುವ ಮೂಲಕ ಪ್ರಜ್ಞಾವಂತರಾಗಬೇಕು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಆಶಿಸಿದರು.

ಹೋಬಳಿಯ ಅಣಬೇರು ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯಿತಿಯ ನೂತನ ಡಿಜಿಟಲ್ ಗ್ರಂಥಾಲಯ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ಸ್ಪರ್ಧಾತ್ಮಕ ಯುಗದಲ್ಲಿ ತಂದೆ-ತಾಯಿ ಮಕ್ಕಳಿಗೆ ಉತ್ತಮ ಹಾಗೂ ಗುಣಾತ್ಮಕ ಶಿಕ್ಷಣ ನೀಡುವುದು ಅನಿವಾರ್ಯ. ಹಾಗಾಗಿ ಗ್ರಂಥಾಲಯಗಳಲ್ಲಿ ಕುಳಿತು ಓದುವಂತೆ ಮಕ್ಕಳನ್ನು ಪ್ರೇರೇಪಿಸಬೇಕು ಎಂದರು.
ಗ್ರಾಮಾಂತರ ಪ್ರದೇಶಗಳ ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಕಾಳಜಿವಹಿಸಬೇಕು. ಊರಿಗೆ ದೇವಾಲಯ ಗಳು ಎಷ್ಟು ಮುಖ್ಯವೋ ಅಂತೆಯೇ ಜ್ಞಾನ ನೀಡುವ ಗ್ರಂಥಾಲಯ, ಸರ್ಕಾರಿ ಶಾಲೆಗಳು ಕೂಡ ಅಷ್ಟೇ ಮುಖ್ಯ. ಇವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಗ್ರಾಪಂ ಡಿಜಿಟಲ್ ಗ್ರಂಥಾಲಯದಲ್ಲಿ 3 ಸಾವಿರ ಕಥೆ, ಕಾದಂಬರಿ, ಕವನ ಹಾಗೂ ಸ್ಪರ್ಧಾತ್ಮಕ ಪುಸ್ತಕಗಳಿವೆ. ತಲಾ ಒಂದು ಲ್ಯಾಪ್ಟಾಪ್ ಮತ್ತು ಕಂಪ್ಯೂಟರ್, ಎರಡು ಮೊಬೈಲ್ಗಳಿವೆ. ಇವುಗಳ ಮೂಲಕ ವಿದ್ಯಾರ್ಥಿಗಳು ಕಲಿಯಲು ಸರ್ಕಾರ ಅನುಕೂಲ ಮಾಡಿಕೊಟ್ಟಿದೆ ಎಂದು ಗ್ರಂಥಾಲಯದ ಮೇಲ್ವಿಚಾರಕ ಚೌಡಪ್ಪ ಹೇಳಿದರು.
ಗ್ರಾಪಂ ಅಧ್ಯಕ್ಷ ಓಂಕಾರಪ್ಪ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಶಂಕರ್ಗುರು ನಿರೂಪಿಸಿದರು. ಉಪಾಧ್ಯಕ್ಷೆ ಸರೋಜಮ್ಮ, ಮುಖಂಡರಾದ ವಾಗೀಶಪ್ಪ, ಓಂಕಾರಪ್ಪ, ಫಾಲಾಕ್ಷಪ್ಪ, ರಾಜಶೇಖರ್, ಶಂಕರನಹಳ್ಳಿ ಪ್ರಭು, ಪಿಡಿಒ ವಿದ್ಯಾವತಿ, ಗ್ರಾಪಂ ಸದಸ್ಯರು, ಮಹಿಳಾ ಸಂಘದ ಕಾರ್ಯಕರ್ತರು ಇತರರಿದ್ದರು.