More

  ಯಡ್ರಾಮಿ ತಾಲೂಕಿನ ಸರ್ಕಾರಿ ಶಾಲೆಗಳಿಗೆ ಬಿಸಿಯೂಟ ಬಂದ್!

  ಮಲ್ಲಿಕಾರ್ಜುನ ಯಾದಗಿರಿ ಯಡ್ರಾಮಿ
  ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಜತೆಗೆ ಪೌಷ್ಟಿಕ ಆಹಾರ ಸಿಗಲಿ ಎಂಬ ಉದ್ದೇಶದಿಂದ ಸರ್ಕಾರ ಮಧ್ಯಾಹ್ನದ ಬಿಸಿಯೂಟ ಯೋಜನೆ ಆರಂಭಿಸಿದೆ. ಆದರೆ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಮೂರು ತಿಂಗಳಿAದ ಬಿಸಿಯೂಟದ ರೇಷನ್ ಬಂದ್ ಆಗಿದ್ದು, ಮುಖ್ಯ ಶಿಕ್ಷಕರು ಮಕ್ಕಳಿಗೆ ಊಟ ಹೊಂದಿಸಲು ಪರದಾಡುತ್ತಿದ್ದಾರೆ.

  ತಾಲೂಕಿನಲ್ಲಿ ಅನುದಾನಸಹಿತ, ಸರ್ಕಾರಿ ಪ್ರಾಥಮಿಕ, ಪ್ರೌಢ ಸೇರಿ 8 ಕ್ಲಸ್ಟರ್ ವ್ಯಾಪ್ತಿಯಲ್ಲಿ 97ಕ್ಕೂ ಅಧಿಕ ಶಾಲೆಗಳಿವೆ. ಮಧ್ಯಾಹ್ನದ ಬಿಸಿಯೂಟಕ್ಕೆ ಬೇಕಾದ ತರಕಾರಿ, ಮಸಾಲೆ ಪದಾರ್ಥ, ಮೊಟ್ಟೆ/ ಬಾಳೆಹಣ್ಣು/ ಶೇಂಗಾ ಚಕ್ಕಿ ಖರೀದಿಗಾಗಿ ಶಾಲೆ ಖಾತೆಗೆ ನೇರವಾಗಿ ಹಣ ಜಮೆ ಆಗುತ್ತದೆ. ಆದರೆ ಅಕ್ಕಿ, ಬೇಳೆ, ಗೋಧಿ, ಎಣ್ಣೆ ಮತ್ತು ಹಾಲಿನ ಪೌಡರ್ ಪ್ರತಿ ತಿಂಗಳು ಅಕ್ಷರ ದಾಸೋಹ ಇಲಾಖೆ ಮೂಲಕ ಶಾಲೆಗೆ ರವಾನೆಯಾಗುತ್ತದೆ. ಆದರೆ ತಾಲೂಕಿನ ಶಾಲೆಗಳಿಗೆ ಪ್ರತಿ ತಿಂಗಳು ಕೇವಲ ಹಾಲಿನ ಪೌಡರ್ ಬರುತ್ತಿದ್ದು, ಉಳಿದ ರೇಷನ್ ಬರುತ್ತಿಲ್ಲ.

  ಮೇಲಧಿಕಾರಿಗಳ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ. ಇದಲ್ಲದೆ ಹೆಚ್ಚು ದಾಸ್ತಾನಿರುವ ಶಾಲೆಗಳಿಂದ ಆಹಾರ ಸಾಮಗ್ರಿ ಸಾಲವಾಗಿ ಪಡೆದು ಮಕ್ಕಳಿಗೆ ಬಿಸಿಯೂಟ ನೀಡಿ ಎಂದು ಸೂಚಿಸಿದ್ದಾರೆ. ಬೇರೆ ಶಾಲೆಗಳಲ್ಲೂ ಅಷ್ಟು ಪ್ರಮಾಣದಲ್ಲಿ ರೇಷನ್ ಸಿಗದಿರುವುದರಿಂದ ಮಧ್ಯಾಹ್ನದ ಊಟ ಹೊಂದಿಸಲು ಮುಖ್ಯ ಶಿಕ್ಷಕರು ಸಮಸ್ಯೆ ಅನುಭವಿಸುತ್ತಿದ್ದಾರೆ.

  ಕಳೆದ ವರ್ಷ ತಾಲೂಕಿನ ಶಾಲೆಯೊಂದರಲ್ಲಿ ಅಕ್ಷರ ದಾಸೋಹ ಇಲಾಖೆ ಅಧಿಕಾರಿಗಳು ಕಡಿಮೆ ಪ್ರಮಾಣದ ಆಹಾರ ಪದಾರ್ಥ ಇಳಿಸಿ ಪೂರ್ಣ ಪ್ರಮಾಣದ ಬಿಲ್‌ಗೆ ಮುಖ್ಯ ಶಿಕ್ಷಕರಿಂದ ಸಹಿ ಮಾಡಿಸಿಕೊಂಡು ಹೋಗಿರುವ ಬಗ್ಗೆ ಆರೋಪವಿದೆ. ಇದಲ್ಲದೆ ಎಲ್ಲ ಶಾಲೆಗಳಿಗೂ ರೇಷನ್ ನೀಡುವಾಗ ಒಂದಿಷ್ಟು ಪದಾರ್ಥ ವಾಪಸ್ ತೆಗೆದುಕೊಂಡು ಹೋಗುತ್ತಾರೆ ಎಂಬ ದೂರುಗಳು ಕೇಳಿ ಬರುತ್ತಿವೆ.

  ಒಟ್ಟಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಸಂಖ್ಯಾತ ಬಡ ವಿದ್ಯಾರ್ಥಿಗಳು ಬಿಸಿಯೂಟದಿಂದ ವಂಚಿತರಾಗುತ್ತಿದ್ದಾರೆ. ಕೂಡಲೇ ಮೇಲಧಿಕಾರಿಗಳು ಗಮನಹರಿಸಿ ಸಮರ್ಪಕ ರೇಷನ್ ಒದಗಿಸಿ ಎಂದಿನಂತೆ ಬಿಸಿಯೂಟ ಆರಂಭಿಸುವ ಅಗತ್ಯವಿದೆ.

  ಜೂನ್‌ನಿಂದ ಮೊಟ್ಟೆ ಹಣವೂ ಬಂದಿಲ್ಲ: ಬಿಸಿಯೂಟ ವ್ಯವಸ್ಥೆ ಮಾಡುವುದೇ ದೊಡ್ಡ ಕೆಲಸವಾಗಿದ್ದರೆ, ಜೂನ್‌ನಿಂದ ಮೊಟ್ಟೆ ಹಣವೂ ಸರ್ಕಾರ ಶಾಲೆಗಳ ಖಾತೆಗೆ ಹಾಕಿಲ್ಲ. ಇದರಿಂದಾಗಿ ಶಿಕ್ಷಕರೇ ತಮ್ಮ ಸಂಬಳದಲ್ಲಿ ಒಂದಿಷ್ಟು ಹಣ ಮೀಸಲಿಟ್ಟು ಮಕ್ಕಳಿಗೆ ಮೊಟ್ಟೆ ನೀಡುತ್ತಿದ್ದಾರೆ. ಈಗಾಗಲೇ 6 ತಿಂಗಳಾಗಿದ್ದು, ಮುಂದೆ ಹೇಗೆ ಎಂಬ ಚಿಂತೆ ಮುಖ್ಯ ಶಿಕ್ಷಕರನ್ನು ಕಾಡುತ್ತಿದೆ.

  ನೆಪ ಮಾತ್ರಕ್ಕೆ ತಾಲೂಕು ಕಚೇರಿ: ಜೇವರ್ಗಿ ತಾಲೂಕಿನಿಂದ ಯಡ್ರಾಮಿ ವಿಭಜನೆಯಾಗಿದ್ದರೂ ಒಂದಿಷ್ಟು ಕಚೇರಿಗಳು ಬಂದೇ ಇಲ್ಲ. ಅಕ್ಷರ ದಾಸೋಹ ಇಲಾಖೆ ಜೇವರ್ಗಿಯಲ್ಲೇ ಉಳಿದಿದ್ದು, ಸಮರ್ಪಕ ಬೋರ್ಡ್ ಸಹ ಇಲ್ಲ. ಜನರು ಕಚೇರಿಯನ್ನು ಗುರುತಿಸುವುದೇ ಸವಾಲಿನ ಕೆಲಸವಾಗಿದೆ. ತಾಲೂಕು ಕಚೇರಿಯಲ್ಲಿದ್ದು ಶಾಲೆಗಳಿಗೆ ಬೇಕಾಗುವ ಪದಾರ್ಥ ನೀಡಬೇಕಾದ ಸಹಾಯಕ ನಿರ್ದೇಶಕರು ಆಫೀಸ್‌ಗೆ ಬರುವುದೇ ವಿರಳ. ಹೊರಗಿನಿಂದಲೇ ಎಲ್ಲ ಕೆಲಸ ನಿರ್ವಹಣೆ ಮಾಡುತ್ತಾರೆ. ಇದರಿಂದಾಗಿ ಅವರು ಇದ್ದಲ್ಲಿಗೆ ಹೋಗಿ ಕೆಲಸ ಮಾಡಿಕೊಳ್ಳುವ ಸ್ಥಿತಿ ಎದುರಾಗಿದೆ.

  ಅಧಿಕಾರಿಗಳಿಗೆ ಮಾಹಿತಿಯೇ ಇಲ್ಲ !: ಸರ್ಕಾರ ಅಕ್ಷರ ದಾಸೋಹ ಇಲಾಖೆ ಮುಖಾಂತರ ಶಾಲೆಗಳ ಬಿಸಿಯೂಟಕ್ಕೆ ಬೇಕಾಗುವ ಆಹಾರ ಪದಾರ್ಥ ಪೂರೈಸಲಾಗುತ್ತಿದೆ. ಇಲ್ಲಿ ಸರ್ಕಾರದಿಂದ ಇಲಾಖೆಗೆ ಸರಿಯಾಗಿ ರೇಷನ್ ಬಂದಿದ್ದರೂ ಶಾಲೆಗಳಿಗೆ ಮುಟ್ಟಿಸುವ ಕೆಲಸವಾಗುತ್ತಿಲ್ಲ. ಅಕ್ಷರ ದಾಸೋಹ ಇಲಾಖೆ ಶಾಲೆಗಳಿಂದ ಪ್ರತಿ ತಿಂಗಳು ಆಹಾರದ ಇಂಡೆAಟ್ ಪಡೆದು ರೇಷನ್ ವಿತರಿಸುತ್ತದೆ. ಆದರೆ ಅಕ್ಷರ ದಾಸೋಹ ಸಿಬ್ಬಂದಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ. ಮರ‍್ನಾಲ್ಕು ತಿಂಗಳಿAದ ಸಹಾಯಕ ನಿರ್ದೇಶಕರೇ ಆಹಾರ ವಿತರಣೆ ಜವಾಬ್ದಾರಿ ವಹಿಸಿಕೊಂಡಿದ್ದು, ಮಾಹಿತಿ ಕೇಳಿದರೆ ಗೊತ್ತಿಲ್ಲ ಎಂದು ಹೇಳಿ ಜಾರಿಕೊಳ್ಳುತ್ತಿದ್ದಾರೆ.

  ಶಾಲೆಗೆ ಮೂರು ತಿಂಗಳಿAದ ಆಹಾರ ಪದಾರ್ಥ ವಿತರಣೆ ಮಾಡಿಲ್ಲ. ಇದರಿಂದಾಗಿ ಪಕ್ಕದ ಶಾಲೆಗಳಿಂದ ಸಾಲದ ರೂಪದಲ್ಲಿ ಆಹಾರ ಪದಾರ್ಥ ಪಡೆದು ಮಧ್ಯಾಹ್ನದ ಬಿಸಿಯೂಟ ನಿರ್ವಹಣೆ ಮಾಡುತ್ತಿದ್ದೇವೆ. ಸದ್ಯ ಆ ಶಾಲೆಗಳಲ್ಲೂ ಸರಿಯಾದ ಪ್ರಮಾಣದಲ್ಲಿ ರೇಷನ್ ಇಲ್ಲ, ಹೀಗಾಗಿ ಬಿಸಿಯೂಟ ನಿಲ್ಲಿಸಲಾಗಿದೆ.
  | ಹೆಸರು ಹೇಳಲಿಚ್ಛಿಸದ ಮುಖ್ಯ ಶಿಕ್ಷಕ

  ಸರ್ಕಾರದಿಂದಲೇ ರೇಷನ್ ಬಂದಿಲ್ಲ, ಹೀಗಾಗಿ ಶಾಲೆಗಳಿಗೆ ನೀಡಲು ಆಗಿಲ್ಲ. ಕಳೆದ ತಿಂಗಳು ಕೇವಲ ಅಕ್ಕಿ ಮತ್ತು ಗೋಧಿ ಕೊಟ್ಟಿದ್ದಾರೆ. ಬೇಳೆ, ಎಣ್ಣೆ ಬಂದಿಲ್ಲ. ಇದರಿಂದಾಗಿ ವಿತರಣೆಗೆ ಮುಂದಾಗಿಲ್ಲ. ಕಳೆದ ಸಭೆಯಲ್ಲಿ ಸಮಸ್ಯೆಯನ್ನು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದು, ಶೀಘ್ರದಲ್ಲೇ ಪರಿಹಾರ ಕಲ್ಪಿಸುವುದಾಗಿ ಹೇಳಿದ್ದಾರೆ.
  | ಮಹಾದೇವಿ ಶಿವಸಿಂಪಿ, ಎಡಿ, ಅಕ್ಷರ ದಾಸೋಹ ಇಲಾಖೆ ಜೇವರ್ಗಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts