ಒಂಬತ್ತು ವರ್ಷಗಳ ಬಳಿಕ ತವರು ನೆಲದಲ್ಲಿ ಶತಕ ಬಾರಿಸಿದ ಕೆ.ಎಲ್​. ರಾಹುಲ್​! KL Rahul

KL Rahul
Published on

KL Rahul : ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಅಹಮದಾಬಾದ್ ಟೆಸ್ಟ್ ಪಂದ್ಯದಲ್ಲಿ (ಭಾರತ vs ವೆಸ್ಟ್ ಇಂಡೀಸ್) ಟೀಮ್ ಇಂಡಿಯಾ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಭರ್ಜರಿ ಶತಕ ದಾಖಲಿಸಿದ್ದಾರೆ. 190 ಎಸೆತಗಳಲ್ಲಿ 12 ಬೌಂಡರಿಗಳ ಸಹಾಯದಿಂದ ಅಮೋಘ ಸೆಂಚುರಿ ಬಾರಿಸಿದರು. ಇದು ಟೆಸ್ಟ್‌ನಲ್ಲಿ ರಾಹುಲ್ ಅವರ 11 ನೇ ಶತಕವಾಗಿದ್ದು, ತವರು ನೆಲದಲ್ಲಿ ಎರಡನೇ ಶತಕವಾಗಿದೆ. 2016 ರಲ್ಲಿ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ರಾಹುಲ್ ತಮ್ಮ ತವರಿನಲ್ಲಿ ತಮ್ಮ ಕೊನೆಯ ಶತಕ ಗಳಿಸಿದರು. ಸುಮಾರು 9 ವರ್ಷಗಳ ಬಳಿಕ ಮತ್ತೆ ತವರಿನಲ್ಲಿ ಶತಕ ಸಂಭ್ರಮ ಮಾಡಿದ್ದಾರೆ.

ಭಾರತ 72 ಓವರ್‌ಗಳ ನಂತರ 4 ವಿಕೆಟ್​ ಕಳೆದುಕೊಂಡು 239 ಸ್ಕೋರ್ ಮಾಡಿದೆ. ಟೆಸ್ಟ್​ ಆರಂಭದ ಎರಡನೇ ದಿನವಾದ ಇಂದು (ಅಕ್ಟೋಬರ್ 2) ರಾಹುಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಶುಭಮಾನ್ ಗಿಲ್ ಅರ್ಧಶತಕ ಪೂರೈಸಿದ ಸ್ವಲ್ಪ ಸಮಯದ ನಂತರ ಔಟಾದರು. ರೋಸ್ಟನ್ ಚೇಸ್ ಬೌಲಿಂಗ್‌ನಲ್ಲಿ ಜಸ್ಟಿನ್ ಗ್ರೀವ್ಸ್‌ಗೆ ಕ್ಯಾಚ್ ನೀಡಿ ಪೆವಿಲಿಯನ್ ತಲುಪಿದರು. ಇದಾದ ಸ್ವಲ್ಪ ಹೊತ್ತಿನಲ್ಲೇ ಶತಕ ಸಿಡಿಸಿದ ರಾಹುಲ್​ ಕೂಡ ಔಟಾದರು.

ಭಾರತದ ಇನ್ನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ 36 ರನ್ ಮತ್ತು ಸಾಯಿ ಸುದರ್ಶನ್ 7 ರನ್ ಗಳಿಸಿದರು. ವೆಸ್ಟ್ ಇಂಡೀಸ್ ಪರ ರೋಸ್ಟನ್ ಚೇಸ್ 2 ವಿಕೆಟ್ ಮತ್ತು ಜೇಡನ್ ಸೀಲ್ಸ್ ಹಾಗೂ ಜೊಮೆಲ್​ ವಾರಿಕನ್​ ತಲಾ ಒಂದು ವಿಕೆಟ್ ಪಡೆದಿದ್ದಾರೆ.

ಇದಕ್ಕೂ ಮೊದಲು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 162 ರನ್‌ಗಳಿಗೆ ಆಲೌಟ್ ಆಯಿತು. ಸಿರಾಜ್ (14-3-40-4), ಜಸ್​ಪ್ರೀತ್​ ಬುಮ್ರಾ (14-3-42-3), ಕುಲದೀಪ್ ಯಾದವ್​ (6.1-0-25-2) ಮತ್ತು ವಾಷಿಂಗ್ಟನ್ ಸುಂದರ್ (3-0-9-1) ಅವರ ಪ್ರಯತ್ನದಿಂದಾಗಿ ವೆಸ್ಟ್ ಇಂಡೀಸ್ ಬ್ಯಾಟರ್​ಗಳು ತರಗೆಲೆಗಳಂತೆ ಉದುರಿ ಹೋದರು.

ವೆಸ್ಟ್ ಇಂಡೀಸ್ ಇನ್ನಿಂಗ್ಸ್‌ನಲ್ಲಿ ಏಳನೇ ಕ್ರಮಾಂಕದಲ್ಲಿ ಆಡಿದ ಜಸ್ಟಿನ್ ಗ್ರೀವ್ಸ್ 32 ರನ್ ಗಳಿಸುವ ಮೂಲಕ ಅತ್ಯಧಿಕ ಸ್ಕೋರರ್​ ಎನಿಸಿಕೊಂಡರು. ಗ್ರೀವ್ಸ್ ಜೊತೆಗೆ, ಅಲಿಕ್ ಅಥಾನಾಸಿಯಸ್ (12), ಬ್ರಾಂಡನ್ ಕಿಂಗ್ (13), ನಾಯಕ ರೋಸ್ಟನ್ ಚೇಸ್ (24), ಶೈ ಹೋಪ್ (26) ಮತ್ತು ಖಾರಿ ಪಿಯರೆ (11) ಕೂಡ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಎರಡಂಕಿಯ ರನ್ ಗಳಿಸಿದರು.

ಇನ್ನುಳಿದವರಲ್ಲಿ, ಜಾನ್ ಕ್ಯಾಂಪ್ಬೆಲ್ 8, ತೇಜ್ನರೈನ್ ಚಂದ್ರಪಾಲ್ ಡಕ್ ಔಟ್, ಜೋಮೆಲ್ ವಾರಿಕನ್ 8 ಮತ್ತು ಜೋಹಾನ್ ಲೇನ್ ಒಂದು ರನ್ ಗಳಿಸಿ ಔಟಾದರು. ಈ ಇನ್ನಿಂಗ್ಸ್​ನಲ್ಲಿ ಭಾರತೀಯ ವಿಕೆಟ್ ಕೀಪರ್ ಧ್ರುವ್ ಜುರೆಲ್ 4 ಕ್ಯಾಚ್ ಗಳನ್ನು ಹಿಡಿದರು. ವೆಸ್ಟ್ ಇಂಡೀಸ್ ತಂಡ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ಪ್ರವಾಸದಲ್ಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net