

ಕೋಲ್ಕತ: ಎರಡು ಬಾರಿಯ ಐಪಿಎಲ್ ಚಾಂಪಿಯನ್ ಕೋಲ್ಕತ ನೈಟ್‌ರೈಡರ್ಸ್ ತಂಡ ಅಂಫಾನ್ ಚಂಡಮಾರುತದಿಂದ ತತ್ತರಿಸಿರುವ ಪಶ್ಚಿಮ ಬಂಗಾಳದ ನೆರವಿಗೆ ನಿಂತಿದೆ. ಬಾಲಿವುಡ್ ನಟ ಶಾರೂಖ್ ಖಾನ್ ಮತ್ತು ನಟಿ ಜೂಹಿ ಚಾವ್ಲಾ ಸಹ-ಮಾಲೀಕತ್ವದ ಕೆಕೆಆರ್ ಫ್ರಾಂಚೈಸಿ, ಪಶ್ಚಿಮ ಬಂಗಾಳದ ನೆರವಿಗಾಗಿ ತನ್ನ ವಿವಿಧ ಯೋಜನೆಗಳನ್ನು ಬುಧವಾರ ಪ್ರಕಟಿಸಿದೆ. ಕೋಲ್ಕತ ನಗರದಲ್ಲಿ 5 ಸಾವಿರ ಗಿಡಗಳನ್ನು ನೆಡುವ ಸಂಕಲ್ಪವೂ ಇದರಲ್ಲಿ ಸೇರಿದೆ.
ಇದನ್ನೂ ಓದಿ: ಯುವರಾಜ್ಗೆ ರೈನಾ ಟಾಂಗ್ ನೀಡಿದ್ದೇಕೆ?
ಪಶ್ಚಿಮ ಬಂಗಾಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನಿಶ್ಚಿತ ಮೊತ್ತದ ದೇಣಿಗೆ ನೀಡುವುದಾಗಿಯೂ ಕೆಕೆಆರ್ ಫ್ರಾಂಚೈಸಿ ತಿಳಿಸಿದೆ. ಕಳೆದೊಂದು ದಶಕದಲ್ಲೇ ಪ್ರಬಲವಾದ ಚಂಡಮಾರುತ ಇತ್ತೀಚೆಗೆ ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿದ ಪರಿಣಾಮ ಲಕ್ಷಾಂತರ ಜನರು ಆಸ್ತಿಪಾಸ್ತಿ ಕಳೆದುಕೊಂಡು ಸಂತ್ರಸ್ತರಾಗಿದ್ದರೆ, 86 ಮಂದಿ ಮೃತಪಟ್ಟಿದ್ದರು.
ಇದನ್ನೂ ಓದಿ: ಒಂದೇ ದಿನ ಮೂವರು ಕ್ರಿಕೆಟಿಗರಿಗೆ ಜನ್ಮದಿನದ ಸಂಭ್ರಮ
‘ಈ ಸವಾಲಿನ ಸಮಯದಲ್ಲಿ ನಾವೆಲ್ಲರೂ ಬಲಿಷ್ಠರಾಗಿ ನಿಲ್ಲಬೇಕು. ಮತ್ತೊಮ್ಮೆ ನಾವೆಲ್ಲರೂ ಜತೆಯಾಗಿ ನಗು ಬೀರೋಣ’ ಎಂದು ಶಾರುಖ್ ಖಾನ್ ಸಂದೇಶ ನೀಡಿದ್ದು, ರಾಜ್ಯದ ವಿವಿಧ ಗ್ರಾಮ, ಜಿಲ್ಲೆಗಳಿಗೆ ತೆರಳಿ ಆಹಾರಧಾನ್ಯ ಮತ್ತು ಅಗತ್ಯ ವಸ್ತುಗಳನ್ನು ವಿತರಿಸುವುದಾಗಿಯೂ ತಿಳಿಸಿದ್ದಾರೆ. ಈ ವೇಳೆ ತಮ್ಮ ಸ್ವಯಂ ಸೇವಕರು ಸಾಮಾಜಿಕ ಅಂತರ ಮತ್ತು ನೈರ್ಮಲ್ಯ ಕಾಪಾಡಿಕೊಳ್ಳಲಿದ್ದಾರೆ. ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ಮುಂತಾದ ಸುರಕ್ಷಾ ಸಾಧನಗಳನ್ನೂ ಬಳಸಲಿದ್ದಾರೆ ಎಂದು ತಿಳಿಸಿದ್ದಾರೆ.