

ಬೆಂಗಳೂರು: ಭಾರತ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್, ಐಪಿಎಲ್ನ ಕೋಲ್ಕತ ನೈಟ್ ರೈಡರ್ಸ್ (ಕೆಕೆಆರ್) ತಂಡದ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. 2012 ಹಾಗೂ 2014ರಲ್ಲಿ ಗಂಭೀರ್ ನಾಯಕತ್ವದಲ್ಲಿಯೇ ಕೆಕೆಆರ್ ಪ್ರಶಸ್ತಿ ಜಯಿಸಿತ್ತು. ಆರಂಭಿಕ ಮೂರು ಆವೃತ್ತಿಗಳಲ್ಲಿ ನೀರಸ ನಿರ್ವಹಣೆ ತೋರಿದ್ದ ಕೆಕೆಆರ್ 2011ರಲ್ಲಿ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ತಂಡದಿಂದ ಕೈಬಿಟ್ಟು ಹೊಸ ತಂಡ ಕಟ್ಟಲು ಯತ್ನಿಸಿತ್ತು. 2011ರಲ್ಲಿ ನಡೆದ ಆಟಗಾರರ ಹರಾಜಿನಲ್ಲಿ ಗಂಭೀರ್ ಕೊಳ್ಳಲು ಕೆಕೆಆರ್ ಸಾಕಷ್ಟು ಕಸರತ್ತು ನಡೆಸಿತ್ತು. ಈ ವಿಷಯವನ್ನು ಸ್ವತಃ ತಂಡದ ಸಿಇಒ ವೆಂಕಿ ಮೈಸೂರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ವಾರಾಂತ್ಯದೊಳಗೆ ಐಪಿಎಲ್ ವೇಳಾಪಟ್ಟಿ ಪ್ರಕಟ ನಿರೀಕ್ಷೆ
ಯೂಟ್ಯೂಬ್ ಚಾನೆಲ್ವೊಂದಕ್ಕೆ ಸಂದರ್ಶನ ನೀಡಿರುವ ವೆಂಕಿ ಮೈಸೂರು, 2011ರ ಆಟಗಾರರ ಹರಾಜಿನಲ್ಲಿ ಮೊದಲ ಹೆಸರೇ ಗಂಭೀರ್ ಅವರದಾಗಿತ್ತು. ನಮಗೆ ನಂಬಲಿಕೆ ಆಗಲಿಲ್ಲ. ಗಂಭೀರ್ ಕೊಂಡುಕೊಳ್ಳಬೇಕು ಅಂತ ನಿರ್ದಿಷ್ಟ ಬಜೆಟ್ ನಿಗದಿಪಡಿಸಿಕೊಂಡಿದ್ದೇವು, ಆದರೆ, ನಮಗೆ ಕೊಚ್ಚಿ ಟಸ್ಕರ್ಸ್ ಗಂಭೀರ್ ಕೊಂಡುಕೊಳ್ಳಲು ಪ್ರಬಲ ಪೈಪೋಟಿ ನೀಡಿತ್ತು. ಇಬ್ಬರ ನಡುವೆ ನಾಯಿ-ಜಗಳದ ರೀತಿ ಪೈಪೋಟಿ ಏರ್ಪಟ್ಟಿತು. ಅಂತಿಮವಾಗಿ ಗಂಭೀರ್ ನಮ್ಮ ಪಾಲಾದರು. ಉಳಿದೆಲ್ಲವೂ ಇತಿಹಾಸ ಎಂದು ಗಂಭೀರ್ ಹೇಳಿಕೊಂಡಿದ್ದಾರೆ. ಗಂಭೀರ್ ಅವರನ್ನು 11.04 ಕೋಟಿ ರೂಪಾಯಿಗೆ ಕೆಕೆಆರ್ ಖರೀದಿಸಿತ್ತು.
ಗೌತಮ್ ಗಂಭೀರ್ ಕೆಕೆಆರ್ ಪರ ಇದುವರೆಗೂ ಅತಿಹೆಚ್ಚು ರನ್ ಕಲೆಹಾಕಿದ ಬ್ಯಾಟ್ಸ್ಮನ್ ಎನಿಸಿದ್ದಾರೆ. 122 ಪಂದ್ಯಗಳಿಂದ 3345 ರನ್ ಗಳಿಸಿದ್ದಾರೆ. ಇದರಲ್ಲಿ 30 ಅರ್ಧಶತಕಗಳು ಒಳಗೊಂಡಿವೆ. ಬಳಿಕ 2018ರಲ್ಲಿ ಗಂಭೀರ್ ಡೆಲ್ಲಿ ತಂಡಕ್ಕೆ ವಾಪಸಾದರು. ಅಂದಿನಿಂದ ಕೆಕೆಆರ್ ತಂಡವನ್ನು ದಿನೇಶ್ ಕಾರ್ತಿಕ್ ಮುನ್ನಡೆಸುತ್ತಿದ್ದಾರೆ.