ಕೆಕೆಆರ್-ಪಂಜಾಬ್ ಹಣಾಹಣಿ; ಇಂದು ಅಹಮದಾಬಾದ್‌ನಲ್ಲಿ ಮೊದಲ ಪಂದ್ಯ

punjab and kkr for web
Published on

ಅಹಮದಾಬಾದ್: ಕೋವಿಡ್ ಮಹಾಮಾರಿ ನಡುವೆಯೂ ಚೆನ್ನೈ ಹಾಗೂ ಮುಂಬೈ ನಗರಗಳಲ್ಲಿ ಯಶಸ್ವಿಯಾಗಿ ಐಪಿಎಲ್ ಪಂದ್ಯಗಳು ಮುಕ್ತಾಯಗೊಂಡಿದ್ದು, ಇದೀಗ ಲೀಗ್‌ನ ಎರಡನೇ ಚರಣ ಅಹಮದಾಬಾದ್‌ನಲ್ಲಿ ಸೋಮವಾರ ಆರಂಭಗೊಳ್ಳಲಿದೆ. ಜಯಕ್ಕಾಗಿ ಪರಿತಪಿಸುತ್ತಿರುವ ಕೋಲ್ಕತ ನೈಟ್‌ರೈಡರ್ಸ್‌ ಹಾಗೂ ಹ್ಯಾಟ್ರಿಕ್ ಸೋಲಿನ ಬಳಿಕ ಗೆಲುವಿನ ಹಳಿಗೇರಿರುವ ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್-14ರ ತಮ್ಮ 6ನೇ ಹಣಾಹಣಿಯಲ್ಲಿ ಎದುರಾಗಲಿವೆ.

ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನವೆಂಬ ಖ್ಯಾತಿಯ ನರೇಂದ್ರ ಮೋದಿ ಸ್ಟೇಡಿಯಂ ಮೊದಲ ಐಪಿಎಲ್ ಪಂದ್ಯಕ್ಕೆ ಸಜ್ಜಾಗಿದೆ. ಮೊದಲ ಪಂದ್ಯದಲ್ಲಿ ಜಯ ದಾಖಲಿಸಿದ ಬಳಿಕ ಸತತ ನಾಲ್ಕು ಸೋಲು ಕಂಡಿರುವ ಕೆಕೆಆರ್ ತಂಡಕ್ಕೆ ಗೆಲುವೊಂದೇ ಮಾರ್ಗವಾಗಿದೆ. ಮತ್ತೊಂದೆಡೆ, ಮುಂಬೈ ಎದುರು 9 ವಿಕೆಟ್ ಜಯ ದಾಖಲಿಸಿದ ವಿಶ್ವಾಸದಲ್ಲಿರುವ ಕನ್ನಡಿಗ ಕೆಎಲ್ ರಾಹುಲ್ ಪಡೆ ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ.

* ಆತ್ಮವಿಶ್ವಾಸದಲ್ಲಿ ಪಂಜಾಬ್

ಸತತ ಮೂರು ಸೋಲುಗಳಿಂದ ಕಂಗೆಟ್ಟಿದ ಪಂಜಾಬ್ ತಂಡಕ್ಕೆ ಮುಂಬೈ ಎದುರಿನ ಗೆಲುವು ಕೊಂಚ ಸಮಾಧಾನ ತಂದುಕೊಟ್ಟಿದೆ. ಕೆಎಲ್ ರಾಹುಲ್, ಕ್ರಿಸ್ ಗೇಲ್ ಉತ್ತಮ ಫಾರ್ಮ್‌ನಲ್ಲಿದ್ದರೆ, ಕರ್ನಾಟಕದ ಮತ್ತೋರ್ವ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್, ದೀಪಕ್ ಹೂಡ ಅಸ್ಥಿರ ನಿರ್ವಹಣೆ ತಂಡವನ್ನು ಕಂಗೆಡಿಸಿದೆ. ಯುವ ಬೌಲರ್ ರವಿ ಬಿಷ್ಣೋಯಿ ಕಳೆದ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಸೂಕ್ತವಾಗಿ ಬಳಸಿಕೊಳ್ಳುವ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದರು. ಮೊಹಮದ್ ಶಮಿ ಕೂಡ ಲಯ ಕಂಡುಕೊಂಡರೆ, ಯುವ ವೇಗಿ ಅರ್ಷದೀಪ್ ಸಿಂಗ್, ಆಡಿದ 5 ಪಂದ್ಯಗಳಿಂದ 6 ವಿಕೆಟ್ ಕಬಳಿಸಿದ್ದಾರೆ.

* ಕೆಕೆಆರ್‌ಗೆ ಬ್ಯಾಟಿಂಗ್ ವಿಭಾಗದ್ದೇ ಚಿಂತೆ

ಇಂಗ್ಲೆಂಡ್ ನಾಯಕ ಇವೊಯಿನ್ ಮಾರ್ಗನ್ ಸಾರಥ್ಯದ ಕೆಕೆಆರ್ ತಂಡಕ್ಕೆ ಬ್ಯಾಟಿಂಗ್ ವಿಭಾಗವೇ ದೊಡ್ಡ ಚಿಂತೆಯುಂಟು ಮಾಡಿದೆ. ನಿತೀಶ್ ರಾಣಾ, ಶುಭಮಾನ್ ಗಿಲ್, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ ಒಳಗೊಂಡ ಬ್ಯಾಟಿಂಗ್ ಪಡೆ ಇದುವರೆಗೂ ನಿರೀಕ್ಷಿತ ನಿರ್ವಹಣೆ ತೋರಿಲ್ಲ. ಆಂಡ್ರೆ ರಸೆಲ್ ಬ್ಯಾಟಿಂಗ್‌ನಲ್ಲಿ ಗಮನಸೆಳೆಯುತ್ತಿದ್ದರೂ ಬೌಲಿಂಗ್‌ನಲ್ಲಿ ದುಬಾರಿಯಾಗುತ್ತಿದ್ದಾರೆ. ಪ್ಯಾಟ್ ಕಮ್ಮಿನ್ಸ್, ವರುಣ್ ಚಕ್ರವರ್ತಿ, ಪ್ರಸಿದ್ಧ ಕೃಷ್ಣ ಒಳಗೊಂಡ ಬೌಲಿಂಗ್ ಪಡೆ ಮತ್ತಷ್ಟು ಪರಿಣಾಮಕಾರಿಯಾಗಬೇಕಿದೆ. ಮುಂದಿನ ಪಂದ್ಯಗಳಲ್ಲಿ ಒತ್ತಡ ರಹಿತವಾಗಿ ಆಡಬೇಕಾದರೆ ಕೆಕೆಆರ್ ತಂಡಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ.

ಟೀಮ್ ನ್ಯೂಸ್: 

ಪಂಜಾಬ್ ಕಿಂಗ್ಸ್: ಸತತ ವೈಫಲ್ಯದ ನಡುವೆಯೂ ನಿಕೋಲಸ್ ಪೂರನ್ ಸ್ಥಾನ ಉಳಿಸಿಕೊಳ್ಳುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಸಿಗದ ಕಾರಣ ಮತ್ತೊಮ್ಮೆ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಪೂರನ್ ಹೊರಗಿಟ್ಟರೆ, ಡೇವಿಡ್ ಮಲಾನ್ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಬಹುದು. ಜೇ ರಿಚರ್ಡ್‌ಸನ್ ಅಥವಾ ರಿಲಿ ಮೆರೆಡಿತ್ ಇಬ್ಬರಲ್ಲಿ ಒಬ್ಬರೂ ಕಣಕ್ಕಿಳಿಯಬಹುದು.

ಕಳೆದ ಪಂದ್ಯ: ಮುಂಬೈ ಇಂಡಿಯನ್ಸ್ ಎದುರು 9 ವಿಕೆಟ್ ಜಯ

ಕೋಲ್ಕತ ನೈಟ್‌ರೈಡರ್ಸ್‌: ಬೌಲರ್‌ಗಳು ಉತ್ತಮ ನಿರ್ವಹಣೆ ತೋರುತ್ತಿದ್ದರೂ ಬ್ಯಾಟಿಂಗ್ ವಿಭಾಗದಿಂದ ನಿರೀಕ್ಷಿತ ನಿರ್ವಹಣೆ ಬರುತ್ತಿಲ್ಲ. ಹೀಗಾಗಿ ಬ್ಯಾಟಿಂಗ್ ವಿಭಾಗದಲ್ಲಿ ಕೆಲ ಬದಲಾವಣೆ ನಿರೀಕ್ಷಿಸಬಹುದು. ಶಿವಂ ಮಾವಿ ರಾಯಲ್ಸ್ ಎದುರು ಉತ್ತಮ ನಿರ್ವಹಣೆ ತೋರಿದ್ದು, ಮತ್ತೊಮ್ಮೆ ಕಣಕ್ಕಿಳಿಯಲಿದ್ದಾರೆ.

ಕಳೆದ ಪಂದ್ಯ: ರಾಜಸ್ಥಾನ ರಾಯಲ್ಸ್ ಎದುರು 6 ವಿಕೆಟ್ ಸೋಲು.

ಮುಖಾಮುಖಿ: 27, ಪಂಜಾಬ್ ಕಿಂಗ್ಸ್: 9, ಕೆಕೆಆರ್: 18

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಆರಂಭ: ರಾತ್ರಿ 7.30ಕ್ಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net