

ವಿಜಯವಾಣಿ ಸುದ್ದಿಜಾಲ ಉಡುಪಿ
ಅದಮಾರು ಮಠದ ಮೂಲಯತಿ ನರಹರಿ ತೀರ್ಥ ಶ್ರೀಪಾದರಿಂದ ಮೊದಲ ಬಾರಿಗೆ ಯಕ್ಷಗಾನ ಕಲೆಗೆ ಪ್ರೋತ್ಸಾಹ ಲಭಿಸಿದ್ದು, ಉಡುಪಿಯೇ ಯಕ್ಷಗಾನದ ಉಗಮಸ್ಥಾನವಾಗಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಮಾಹಿತಿ ನೀಡಿದರು.
ಉಡುಪಿಯ ರಾಜಾಂಗಣದಲ್ಲಿ ಯಕ್ಷ ಶಿಕ್ಷಣ ಟ್ರಸ್ಟ್ (ರಿ.) ಉಡುಪಿ ವತಿಯಿಂದ ನ.30ರಿಂದ ಡಿ.14ರ ವರೆಗೆ ಉಡುಪಿ ತಾಲೂಕಿನ 27 ಪ್ರೌಢಶಾಲೆಗಳ ವಿದ್ಯಾರ್ಥಿಗಳಿಂದ ಪ್ರದರ್ಶನಗೊಳ್ಳಲಿರುವ ಕಿಶೋರ ಯಕ್ಷಗಾನ ಸಂಭ್ರಮಕ್ಕೆ ಶನಿವಾರ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಅಂಬಲಪಾಡಿ ದೇಗುಲದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ, ಮಾಜಿ ಶಾಸಕ ಕೆ.ರಘುಪತಿ ಭಟ್, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಂ ಶೆಟ್ಟಿ, ಡಿಡಿಪಿಐ ಕೆ.ಗಣಪತಿ, ಬಿಇಒ ಡಾ. ಯಲ್ಲಮ್ಮ, ಪಣಂಬೂರು ವಾಸುದೇವ ಐತಾಳ್, ಯು. ವಿಶ್ವನಾಥ ಶೆಣೈ, ಮಠದ ಕಾರ್ಯಕ್ರಮಗಳ ಸಂಚಾಲಕ ರಮೇಶ್ ಭಟ್ ಉಪಸ್ಥಿತರಿದ್ದರು.
ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ಯಕ್ಷಶಿಕ್ಷಣ ಟ್ರಸ್ಟ್ನ ವಿಶ್ವಸ್ಥ ನಾರಾಯಣ ಎಂ. ಹೆಗಡೆ ವಂದಿಸಿದರು.
ಸಮಾರಂಭದ ಬಳಿಕ ವಿದ್ಯೋದಯ ಪಬ್ಲಿಕ್ ಸ್ಕೂಲ್ನ ವಿದ್ಯಾರ್ಥಿಗಳಿಂದ ನರಸಿಂಹ ತುಂಗ ನಿರ್ದೇಶನದಲ್ಲಿ ಶಶಿಪ್ರಭಾ ಪರಿಣಯ ಯಕ್ಷಗಾನ ಪ್ರದರ್ಶನ ನಡೆಯಿತು.
ಲೆಕ್ಕವಿಡಲು ಸಾಧ್ಯವಿಲ್ಲದಷ್ಟು ಕಲಾವಿದರು ನಲಿದ, ನರ್ತಿಸಿದ, ಹಾಡಿದ, ವಿವಿಧ ಭಗೆಯ ಕಲೆ ಪ್ರದರ್ಶಿಸಿದ ಈ ಐತಿಹಾಸಿಕ ರಾಜಾಂಗಣದ ವೇದಿಕೆಯಲ್ಲಿ ಮಕ್ಕಳು ಯಕ್ಷಗಾನ ಕುಣಿಯುವುದು ಬಾಲಕನಾದ ಉಡುಪಿಯ ಕಡಗೋಲು ಶ್ರೀಕೃಷ್ಣನಿಗೂ ಬಹಳ ಸಂತಸದ ವಿಚಾರ. ಮಕ್ಕಳಿಗೆ ಯಕ್ಷಗಾನ ಕಲೆ ಕಲಿಸುತ್ತಿರುವ ಯಕ್ಷಶಿಕ್ಷಣ ಟ್ರಸ್ಟ್ನ ಕಾರ್ಯ ದೇಶಕ್ಕೇ ಮಾದರಿಯಾಗಿದೆ. ಚಿಣ್ಣರ ಈ ಯಕ್ಷಗಾನ ಅಭಿಯಾನ ಯಶಸ್ವಿಯಾಗಿ ನಡೆಯಲಿ ಎಂದು ಸುಗುಣೇಂದ್ರ ಶ್ರೀ ಆಶೀರ್ವದಿಸಿದರು.
ನಮ್ಮ ಹಿಂದಿನ ಪರ್ಯಾಯದಲ್ಲಿ ಯಕ್ಷ ಶಿಕ್ಷಣ ಟ್ರಸ್ಟ್ಅನ್ನು ಉದ್ಘಾಟಿಸಲಾಗಿತ್ತು. ಅಂದು ಆರಂಭಗೊಂಡಿದ್ದ ಯಕ್ಷ ಶಿಕ್ಷಣ, ಇದೀಗ ನಮ್ಮ ಚತುರ್ಥ ಪರ್ಯಾಯದ ಅವಧಿಯಲ್ಲಿ ಯಕ್ಷಗಾನ ಕ್ರಾಂತಿಯೇ ಆಗಿದೆ. ಈ ಕಲೆ ಉಳಿಸುವಲ್ಲಿ ವಿದ್ಯಾರ್ಥಿಗಳೂ ಸಹಕರಿಸಿದ್ದಾರೆ. ಸನಾತನ ಧರ್ಮದ ಈ ಯಕ್ಷಗಾನ ಕಲೆ ಯಕ್ಷ ಶಿಕ್ಷಣ ಟ್ರಸ್ಟ್ ಮೂಲಕ ಇನ್ನಷ್ಟು ಬೆಳೆಯಲಿ. | ಸುಗುಣೇಂದ್ರ ತೀರ್ಥ ಶ್ರೀಪಾದರು. ಪರ್ಯಾಯ ಪುತ್ತಿಗೆ ಮಠ, ಉಡುಪಿ ಉಡುಪಿ ರಾಜಾಂಗಣದಲ್ಲಿ ಕಿಶೋರ ಯಕ್ಷಗಾನ ಸಂಭ್ರಮಕ್ಕೆ ಸುಗುಣೇಂದ್ರ ಶ್ರೀ ಚಾಲನೆ ನೀಡಿದರು. ನಿ.ಬೀ. ವಿಜಯ ಬಲ್ಲಾಳ, ಕೆ.ರಘುಪತಿ ಭಟ್, ಡಾ. ತಲ್ಲೂರು ಶಿವರಾಂ ಶೆಟ್ಟಿ, ಕೆ.ಗಣಪತಿ, ಯಲ್ಲಮ್ಮ, ವಿಶ್ವನಾಥ ಶೆಣೈ, ಎಂ.ಗಂಗಾಧರ ರಾವ್, ಮುರಲಿ ಕಡೆಕಾರ್ ಹಾಗೂ ಪ್ರದರ್ಶನ ನೀಡುವ ವಿದ್ಯಾರ್ಥಿಗಳು ಇದ್ದರು.