

ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ ಆರೋಪಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದಲೇ ತಮ್ಮ ಮನೆಗೆ ವಿಡಿಯೋಕಾಲ್ ಕರೆ ಮಾಡಿರುವ ದೃಶ್ಯಗಳು ವೈರಲ್ ಆಗಿದ್ದು, ಮತ್ತೊಮ್ಮೆ ಕಾರಾಗೃಹದ ಅಧಿಕಾರಿಗಳ ಕರ್ತವ್ಯಲೋಪ ಬಯಲಾಗಿದೆ. ಬುದ್ಧನಗರದ ಮಹಮದ್ ಖಾಸೀಫ್ ಮತ್ತು ಆತನ 9 ಸಹಚರರನ್ನು ಪರಪ್ಪನ ಅಗ್ರಹಾರದಲ್ಲಿ ಇಡಲಾಗಿದ್ದು, ಅವರು ತಮ್ಮ ಕೊಠಡಿಗಳಲ್ಲೇ ಮೊಬೈಲ್ ಬಳಕೆ ಮಾಡಿರುವುದು ಪತ್ತೆಯಾಗಿದೆ. ವಿಡಿಯೋ ಕಾಲ್ ಮೂಲಕ ಕುಟುಂಬಸ್ಥರು, ಪರಿಚಯಸ್ಥರೊಂದಿಗೆ ಮಾತನಾಡಿರುವುದು ಬೆಳಕಿಗೆ ಬಂದಿದೆ.
ವಿಡಿಯೋ ಕಾಲ್ ಮಾಡಿರುವುದು ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಶಿವಮೊಗ್ಗ-ಬೆಂಗಳೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳಿಂದ ಮೊಬೈಲ್ಗಳನ್ನು ವಶಕ್ಕೆ ಪಡೆದಿದ್ದಾರೆ. ಇತ್ತೀಚೆಗೆ ಪರಪ್ಪನ ಅಗ್ರಹಾರದ ಆಯ್ದ ಸೆಲ್ಗಳ ಮೇಲೆ ಪೊಲೀಸ್ ಅಧಿಕಾರಿಗಳು ದಾಳಿ ಮಾಡಿದ್ದರು. ಆ ಸಂದರ್ಭದಲ್ಲಿ ಆರೋಪಿಗಳ ಬಳಿ ಮೊಬೈಲ್ಗಳು ಹಾಗೂ ಅದಕ್ಕೆ ಸಂಬಂಧಿಸಿದ ಉಪಕರಣಗಳು ಪತ್ತೆಯಾಗಿದ್ದವು. ಈ ಸಂಬಂಧ ಪರಪ್ಪನ ಅಗ್ರಹಾರದ ಸ್ಟೇಷನ್ನಲ್ಲಿ ಕೇಸ್ ಕೂಡ ದಾಖಲಾಗಿದೆ. ಇದೆಲ್ಲದರ ನಡುವೆ ಶಿವಮೊಗ್ಗದ ಗಾಂಧಿಬಜಾರ್ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶ ಮತ್ತು ಇತರ ಭಾಗದ ಆಯ್ದ ವ್ಯಾಪಾರಿಗಳಿಗೆ ಖಾಸೀಫ್ ಗ್ಯಾಂಗ್ ಹಣಕ್ಕಾಗಿ ಬೆದರಿಕೆ ಹಾಕಿ ಕರೆ ಮಾಡಿವೆ ಎಂಬ ವದಂತಿಯೂ ಹಬ್ಬಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಎನ್ಐಎ ತನಿಖೆ ಚುರುಕು: ಬಜರಂಗ ದಳದ ಕಾರ್ಯಕರ್ತ ಹರ್ಷನ ಹತ್ಯೆ ಪ್ರಕರಣದ ಕುರಿತು ಎನ್ಐಎ (ರಾಷ್ಟ್ರೀಯ ತನಿಖಾ ದಳ) ತನಿಖೆಯನ್ನು ಚುರುಕು ಗೊಳಿಸಿದ್ದು 90ಕ್ಕೂ ಅಧಿಕ ಅಧಿಕಾರಿಗಳು ಶಿವಮೊಗ್ಗದ 13ಕ್ಕೂ ಹೆಚ್ಚು ಸ್ಥಳಗಳಲ್ಲಿ ಮಾಹಿತಿ ಜಾಲಾಡಿ ಹೋಗಿದ್ದಾರೆ.
ಹರ್ಷನ ಹತ್ಯೆ ಪ್ರಕರಣದ ಆರೋಪಿಗಳು ಮೊಬೈಲ್ ಬಳಕೆ ಮಾಡಿರುವ ಬಗ್ಗೆ ಪೊಲೀಸ್ ಮಹಾನಿರ್ದೇಶಕರಿಂದ ಮಾಹಿತಿ ಪಡೆದಿದ್ದೇನೆ. ಕಾರಾಗೃಹದ ನಿಯಮಾವಳಿ ಉಲ್ಲಂಘಿಸಲೆಂದೇ ಕೆಲ ಸಿಬ್ಬಂದಿ ಜೈಲ್ನಲ್ಲಿದ್ದಾರೆ. ಅಂಥವರ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು. | ಆರಗ ಜ್ಞಾನೇಂದ್ರ ಗೃಹ ಸಚಿವ
ಹರ್ಷನ ಪಾಲಕರು ಕಿಡಿ: ಹರ್ಷನನ್ನು ಕೊಂದವರು ಜೈಲಿನಲ್ಲಿ ಆರಾಮಾಗಿದ್ದಾರೆ. ಹೊರಗಡೆ ಓಡಾಡಿಕೊಂಡಿಲ್ಲ ಎಂಬುದನ್ನು ಬಿಟ್ಟರೆ ಅವರಿಗೆ ಎಲ್ಲ ಸವಲತ್ತುಗಳೂ ಅಲ್ಲಿ ಸಿಗುತ್ತಿವೆ. ಆರೋಪಿಗಳಿಗೆ ಯಾವುದೇ ಭಯ ಇಲ್ಲದಂತಾಗಿದ್ದು ದುಡ್ಡುಕೊಟ್ಟರೆ ಏನು ಬೇಕಾದರೂ ಸಿಗಲಿದೆ ಎಂಬುದಕ್ಕೆ ಬೆಂಗಳೂರಿನ ಪರಪ್ಪನ ಅಗ್ರಹಾರ ಸಾಕ್ಷಿಯಾಗಿದೆ ಎಂದು ಹರ್ಷನ ತಂದೆ-ತಾಯಿ ಮತ್ತು ಸಹೋದರಿ ಕಿಡಿಕಾರಿದ್ದಾರೆ. ಆರೋಪಿಗಳು ಪರಪ್ಪನ ಅಗ್ರಹಾರದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಇದಕ್ಕೆ ಜೈಲು ಸಿಬ್ಬಂದಿ ಸಾಥ್ ನೀಡಿರುವುದು ನ್ಯಾಯಾಂಗದ ಮೇಲೆ ನಂಬಿಕೆಯೇ ಕಳೆದುಕೊಳ್ಳುವಂತೆ ಮಾಡಿದೆ ಎಂದು ಕಣ್ಣೀರಿಟ್ಟಿದ್ದಾರೆ.