

ನವದೆಹಲಿ: ಮುಂಬೈ ತಂಡದ ಖಾಯಂ ಆಟಗಾರನಂತಿದ್ದ ಆಲ್ರೌಂಡರ್ ಕೈರೊನ್ ಪೊಲಾರ್ಡ್, ಐಪಿಎಲ್ ಲೀಗ್ಗೆ ನಿವೃತ್ತಿ ಘೋಷಿಸಿದ್ದಾರೆ. ಪೊಲಾರ್ಡ್ ತನ್ನ ನಿವೃತ್ತಿಯನ್ನು ತಿಳಿಸುತ್ತಿದ್ದಂತೆ ಮುಂಬೈ ಇಂಡಿಯನ್ಸ್ ತಂಡ ತನ್ನ ಅಧಿಕೃತ ಟ್ವಿಟರ್ ಖಾತೆಯ ಪ್ರೊಫೈಲ್ ಫೋಟೋದಲ್ಲಿ, ಪೊಲಾರ್ಡ್ ಫೋಟೋ ಬಳಸಿ ಗೌರವ ಸೂಚಿಸಿದೆ. ಜತೆಗೆ 'ಫಾರ್ ಎವರ್ ಮುಂಬೈ' ಎಂದು ಬರೆದುಕೊಂಡಿದೆ.
2010ರಿಂದ ಮುಂಬೈ ತಂಡದ ಭಾಗವಾಗಿದ್ದ ಪೊಲಾರ್ಡ್ನ್ನು, ಈ ಬಾರಿ ಹರಾಜಿಗೂ ಮುನ್ನ ಮುಂಬೈ ತಂಡ ಕೈಬಿಟ್ಟಿತ್ತು. ಇದರ ಬೆನ್ನಿಗೇ ಪೊಲಾರ್ಡ್ ತನ್ನ ನಿವೃತ್ತಿಯನ್ನು ಹಂಚಿಕೊಂಡಿದ್ದು, ನಾನಿನ್ನು ಐಪಿಎಲ್ ಆಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಬ್ಯಾಟಿಂಗ್ ಕೋಚ್ ಆಗಿ, ಮುಂಬೈ ತಂಡದ ಸದಸ್ಯನಾಗಿರುತ್ತೇನೆ ಎಂದು ಪೊಲಾರ್ಡ್ ಹೇಳಿಕೊಂಡಿದ್ದಾರೆ.
5 ಬಾರಿಯ ಚಾಂಪಿಯನ್ ತಂಡದ ಸದಸ್ಯನಾಗಿದ್ದುಕೊಂಡು, ಕಠಿಣವಾದ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಮುಂಬೈ ತಂಡದಲ್ಲಿ ಬದಲಾವಣೆಯ ಅಗತ್ಯವಿರುವುದು ನನ್ನ ಗಮನಕ್ಕೆ ಬಂದಿದೆ. ಆದರೆ ನನಗೆ ಮುಂಬೈ ತಂಡದಿಂದ ಹೊರಹೋಗಿ, ಬೇರೆ ತಂಡದಲ್ಲಿದ್ದುಕೊಂಡು ಮುಂಬೈ ವಿರುದ್ಧ ಆಡಲು ನನಗೆ ಸಾಧ್ಯವಿಲ್ಲ. ನಾನು ಸದಾ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿಯೇ ಇರುತ್ತೇನೆ ಎಂದು ಪೊಲಾರ್ಡ್ ನಿವೃತ್ತಿಯ ಸಂದರ್ಭದಲ್ಲಿ ಬರೆದುಕೊಂಡಿದ್ದಾರೆ.
2010ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಐಪಿಎಲ್ ಟೂರ್ನಿಗೆ ಪಾದಾರ್ಪಣೆ ಮಾಡಿದ್ದ ಕೈರೊನ್ ಪೊಲಾರ್ಡ್, ಮುಂಬೈ ಇಂಡಿಯನ್ಸ್ 5 ಬಾರಿ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈವರೆಗೆ 189 ಪಂದ್ಯಗಳನ್ನಾಡಿ 3412 ರನ್ಗಳು ಹಾಗೂ 69 ವಿಕೆಟ್ಗಳನ್ನು ಕಬಳಿಸಿದ್ದಾರೆ.