

ಕಿರುತೆರೆ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಪಡೆದ ‘ಬಿಗ್ಬಾಸ್’ ರಿಯಾಲಿಟಿ ಶೋದ 8ನೇ ಸೀಸನ್ ಆರಂಭವಾಗುತ್ತಿದ್ದು, ಜನರಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಮನೆ ಮಾಡಿದೆ. ಫೆ.28ರಂದು ಪ್ರಸಾರ ಆರಂಭವಾಗಲಿದ್ದು, ಸ್ಪರ್ಧಿಗಳು ಯಾರೆಂಬುದು ಅಂದೇ ಬಹಿರಂಗ ಆಗಲಿದೆ. ಈ ಸೀಸನ್ ಬಗ್ಗೆ ಮಾಹಿತಿ ನೀಡಲು ‘ಕಲರ್ಸ್ ಕನ್ನಡ’ ವಾಹಿನಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ನಿರೂಪಕ ಸುದೀಪ್ ಮತ್ತು ವಾಹಿನಿಯ ಬಿಜಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಭಾಗವಹಿಸಿ ಈ ಬಾರಿಯ ವಿಶೇಷತೆಗಳ ಜತೆಗೆ ಈವರೆಗೆ ಬಿಗ್ಬಾಸ್ ಜರ್ನಿ ಕುರಿತು ಮಾತನಾಡಿದ್ದಾರೆ.
ಬೆಂಗಳೂರು: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗೆ ‘ಬಿಗ್ಬಾಸ್’ನ ಎಂಟನೇ ಸೀಸನ್ ಕೊನೇ ಹಂತದಲ್ಲಿರಬೇಕಿತ್ತು. ಆದರೆ, ಕರೊನಾ ಅದೆಲದ್ದಕ್ಕೂ ಪೂರ್ಣ ವಿರಾಮ ಇಟ್ಟಿತ್ತು. ಇನ್ನೇನು ಈ ಬಾರಿಯ ‘ಬಿಗ್ಬಾಸ್’ ಮರೆತೇ ಬಿಟ್ಟಿದ್ದ ವೀಕ್ಷಕರಿಗೆ ಇತ್ತೀಚೆಗಷ್ಟೇ ಕಲರ್ಸ್ ಕನ್ನಡ ವಾಹಿನಿ ‘ಬಿಗ್ಬಾಸ್ ಸೀಸನ್ 8’ ಶುರುವಾಗಲಿದೆ ಎಂದು ಸರ್ಪ್ರೖೆಸ್ ನೀಡಿತ್ತು. ಅದರಂತೆ ಫೆ. 28ರಂದು ಶೋ ಗ್ರಾಂಡ್ ಓಪನಿಂಗ್ ಆಗಲಿದೆ. ಅದಾದ ಬಳಿಕ ಪ್ರತಿನಿತ್ಯ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ.
ಕ್ವಾರಂಟೈನ್ನಲ್ಲಿ 17 ಸ್ಪರ್ಧಿಗಳು
ಕರೊನಾ ಕಡಿಮೆ ಆಯಿತು ಎನ್ನುತ್ತಿರುವಾಗಲೇ, ಇದೀಗ ಎರಡನೇ ಅಲೆ ಶುರುವಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಆ ಬಗ್ಗೆ ಉತ್ತರಿಸುವ ಪರಮೇಶ್ವರ್, ‘ಕಳೆದ ವರ್ಷದಂತೆ ಒಟ್ಟು 17 ಮಂದಿ ಸೆಲೆಬ್ರಿಟಿ ಮತ್ತು ಸೆಮಿ-ಸೆಲೆಬ್ರಿಟಿಗಳು ಸ್ಪರ್ಧಿಗಳಾಗಿದ್ದಾರೆ. ನೂರು ದಿನ ಆಟ. ಕರೊನಾ ಹಿನ್ನೆಲೆಯಲ್ಲಿ ಎಲ್ಲ ಸ್ಪರ್ಧಿಗಳು ಈಗಾಗಲೇ ಕ್ವಾರಂಟೈನ್ನಲ್ಲಿದ್ದಾರೆ. ಎಲ್ಲರಿಗೂ ಕೋವಿಡ್ ಪರೀಕ್ಷೆ ಮಾಡಿದ್ದೇವೆ. ಮನೆ ಪ್ರವೇಶ ಪಡೆಯುವ ಕೊನೇ ಕ್ಷಣದವರೆಗೂ ಕೋವಿಡ್ ವರದಿ ನೋಡಿಕೊಂಡೇ ಪ್ರವೇಶ ಖಚಿತವಾಗಲಿದೆ. ಯಾರಾದರೂ ಅತಿಥಿಗಳು ಒಳ ಪ್ರವೇಶ ಪಡೆಯಬೇಕಾದರೂ, ಮುಂಚಿತವಾಗಿ ಕ್ವಾರಂಟೈನ್ ಮುಗಿಸುವುದು ಕಡ್ಡಾಯ’ ಎಂಬುದು ಅವರ ಮಾತು.
ವೂಟ್ ಸೆಲೆಕ್ಟ್ನಲ್ಲಿ 24X5: ಇಷ್ಟು ದಿನ ಒಂದೂವರೆ ಗಂಟೆಯಷ್ಟು ಮಾತ್ರ ಕಾರ್ಯಕ್ರಮ ಪ್ರಸಾರ ಮಾಡಲಾಗುತ್ತಿತ್ತು. ಆದರೆ, ಈ ಸಲ ವೀಕ್ಷಕರನ್ನು ಮತ್ತಷ್ಟು ಸೆಳೆಯುವ ಉದ್ದೇಶದಿಂದ, ಕಲರ್ಸ್ ಕನ್ನಡದ ವೂಟ್ ಮತ್ತು ವೂಟ್ ಸೆಲೆಕ್ಟ್ನಲ್ಲಿ ವಾರದ ಐದು ದಿನ ದಿನಪೂರ್ತಿ ನಡೆದ ಘಟನೆಯನ್ನು ನೋಡ ಬಹುದಾಗಿದೆ. ಇನ್ನುಳಿದಂತೆ ಶನಿವಾರ ಮತ್ತು ಭಾನುವಾರ ವೇದಿಕೆ ಮೇಲೆ ಸುದೀಪ್ ಅವರ ಉಪಸ್ಥಿತಿ ಇರಲಿದೆ.
ಲಾಕ್ಡೌನ್ ಪರಿಕಲ್ಪನೆ: ಹಿಂದಿ ‘ಬಿಗ್ಬಾಸ್’, ಕರೊನಾ ಪರಿಕಲ್ಪನೆಯಲ್ಲಿ ಈಗಾಗಲೇ ಮೂಡಿಬಂದಿದೆ. ಇದೀಗ ಕನ್ನಡದಲ್ಲಿಯೂ ಅಂಥದ್ದೇ ಲಾಕ್ಡೌನ್ ಅನ್ನೋ ಕಾನ್ಸೆಪ್ಟ್ ಅನ್ನು ಪರಿಚಯಿಸಲಾಗುತ್ತಿದೆ. ‘ಲಾಕ್ ಮತ್ತು ಕೀ ಎಂಬುದೇ ಒಂದು ವಿಶೇಷ ಕಾನ್ಸೆಪ್ಟ್. ಸದ್ಯಕ್ಕೆ ಇದನ್ನೊಂದೇ ರಿವೀಲ್ ಮಾಡಿದ್ದೇವೆ. ಪೋಸ್ಟರ್ನಲ್ಲಿಯೂ ಅದೇ ಕಾನ್ಸೆಪ್ಟ್ ಕಾಣುತ್ತಿದೆ. ಇನ್ನುಳಿದಂತೆ ಈ ಸಲವು ಹತ್ತು ಹಲವು ವಿಶೇಷತೆಗಳ ಗುಚ್ಛ ನೋಡುಗರಿಗೆ ಸಿಗಲಿದೆ’ ಎಂಬುದು ಪರಮೇಶ್ವರ್ ಗುಂಡ್ಕಲ್ ಮಾತು.
ಪ್ರೊಫೈಲ್ ಇದ್ದ ಮಾತ್ರಕ್ಕೆ ವರ್ಕೌಟ್ ಆಗಲ್ಲ : ‘ಈ ವೇದಿಕೆಗೆ ಒಂದು ತಾಕತ್ತಿದೆ. ಹೆಸರು ಮಾಡಿರುವ ವ್ಯಕ್ತಿ ಅಂದ ಮಾತ್ರಕ್ಕೆ ಅವರನ್ನು ‘ಬಿಗ್ಬಾಸ್’ಗೆ ಕರೆತರಲು ಸಾಧ್ಯವಿಲ್ಲ. ಒಂದು ವ್ಯಕ್ತಿತ್ವ ಬೇಕು. ಹೊರಗಡೆ ಹೆಸರಿದೆ ಅಂತ ಮನೆಗೆ ತಂದು ಹಾಕುವುದರಲ್ಲಿ ಅರ್ಥವಿಲ್ಲ. ಮನರಂಜನೆ ಜತೆಗೆ 100ದಿನಗಳ ಕಾಲ ಬದುಕುಳಿಯುವ ಸ್ಮಾರ್ಟ್ನೆಸ್ ಕೂಡ ಆ ಸ್ಪರ್ಧಿಯಲ್ಲಿರಬೇಕು’ ಎನ್ನುತ್ತಾರೆ ಕಿಚ್ಚ.
ಶೋನ ಮತ್ತೊಂದು ಮುಖ ಸುದೀಪ್: ಈ ಏಳು ಸೀಸನ್ಗಳಲ್ಲಿ ಬಿಗ್ಬಾಸ್ ಹಲವು ಬದಲಾವಣೆಗಳನ್ನು ಕಂಡಿದೆ. ಆದರೆ ಬದಲಾಗದೆ ಇರುವ ಏಕೈಕ ವಿಭಾಗ ಎಂದರೆ ನಿರೂಪಣೆ. ‘ಕಿಚ್ಚ’ ಸುದೀಪ್ ಬಗ್ಗೆ ಪರಮೇಶ್ವರ್ ಹೇಳಿಕೊಂಡಿದ್ದು ಹೀಗೆ. ‘ಸೂಕ್ಷ್ಮ ಸಂವೇದನೆ, ಬುದ್ಧಿವಂತಿಕೆ, ಸಹಜವಾಗಿ ಪ್ರತಿಕ್ರಿಯಿಸುವ ಜಾಣ್ಮೆ, ಅನುಭವದ ವ್ಯಕ್ತಿತ್ವ, ಶುದ್ಧ ಕನ್ನಡ ಬಳಕೆ, ಅಪಾರ ಜನಪ್ರಿಯತೆ ಹಾಗೂ ಜೀವನಾನುಭವ, ಎಲ್ಲ ಕ್ಷೇತ್ರದಿಂದ ಬರುವ ಸ್ಪರ್ಧಿಗಳ ಜತೆ ಸಂವಹಿಸಲು ಬೇಕಾದ ಮಾಹಿತಿ. ಇವೇ ಗುಣಗಳು ಸುದೀಪ್ರನ್ನು ಒಬ್ಬ ಸಮರ್ಥ ನಿರೂಪಕನನ್ನಾಗಿ ಪೋಷಿಸಿವೆ’ ಎಂದಿದ್ದಾರೆ.
ಈ ಸಲ ರಾಜಕೀಯ ನಾಯಕರೊಬ್ಬರು ಸ್ಪರ್ಧಿ
‘ಬಿಗ್ಬಾಸ್’ ಶೋ ಹೆಚ್ಚು ಕುತೂಹಲ ಮೂಡಿಸುವುದು ಸ್ಪರ್ಧಿಗಳ ವಿಚಾರದಲ್ಲಿ. ಇದೀಗ ಸೀಸನ್ 8ರಲ್ಲಿ ಅಷ್ಟೇ ಇಂಟ್ರಸ್ಟಿಂಗ್ ಸ್ಪರ್ಧಿಗಳನ್ನೇ ಹೆಕ್ಕಿ ತಂದಿದ್ದಾರಂತೆ ಪರಮೇಶ್ವರ್ ಗುಂಡ್ಕಲ್. ಅದನ್ನು ವಿವರಿಸುವ ಅವರು, ‘ಎಂದಿನಂತೆ ಈ ಸಲದ ಶೋದಲ್ಲಿ ಸಿನಿಮಾ, ಕ್ರೀಡೆ, ಸಂಗೀತ ಕ್ಷೇತ್ರದ ಜತೆಗೆ ರಾಜಕೀಯದಲ್ಲಿ ಗುರುತಿಸಿಕೊಂಡವರೊಬ್ಬರು ಸ್ಪರ್ಧಿಯಾಗಿ ಆಗಮಿಸುತ್ತಿದ್ದಾರೆ’ ಎಂದು ಹೇಳುತ್ತಿದ್ದಂತೆ, ಸುದೀಪ್ ಅಚ್ಚರಿ ರೀತಿಯಲ್ಲಿ ಪ್ರತಿಕ್ರಿಯಿಸಿದರು. ‘ಶೋನಲ್ಲಿ ಅವರಿಗೂ ನಾವು ಪ್ರಶ್ನೆ ಮಾಡಬಹುದೇ?’ ಎಂದರು. ಅದಕ್ಕೆ, ‘ಆ ರಾಜಕೀಯ ವ್ಯಕ್ತಿ ನಿಮಗೆ ಗೊತ್ತಿರುವವರೇ..’ ಎಂದು ನಕ್ಕರು.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ