ಜುಲೈ 24ಕ್ಕೆ ಭೂಮಿ ಸಮೀಪಕ್ಕೆ ಕ್ಷುದ್ರಗ್ರಹ

satellite
Published on

 ವಾಷಿಂಗ್ಟನ್: ದೈತ್ಯ ಕ್ಷುದ್ರಗ್ರಹವೊಂದು ಜುಲೈ 24ಕ್ಕೆ ಭೂಮಿಯ ಸಮೀಪದಲ್ಲಿ ಹಾದುಹೋಗಲಿದೆ. ಒಂದು ಕ್ರೀಡಾಂಗಣದಷ್ಟು ದೊಡ್ಡದಾದ ಅಥವಾ ತಾಜ್ ಮಹಲ್ ಗಾತ್ರಕ್ಕಿಂತ ಮೂರು ಪಟ್ಟು ದೊಡ್ಡದಾದ ಈ ಕಾಯಕ್ಕೆ ‘2008 ಗೋ20’ ಎಂದು ಹೆಸರಿಸಲಾಗಿದೆ. ಈ ಗ್ರಹ ತಾಸಿಗೆ 18 ಸಾವಿರ ಕಿ.ಮೀ. ವೇಗದಲ್ಲಿ (ಅಂದಾಜು ಸೆಕೆಂಡಿಗೆ 8 ಕಿ.ಮೀ.) ಸಂಚರಿಸುತ್ತಿರುವ ಕಾರಣ ಇದಕ್ಕೆ ಅಡ್ಡಲಾಗಿ ಬರುವ ಯಾವುದೇ ವಸ್ತು ಛಿದ್ರವಾಗಲಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿದೆ.

ಕ್ಷುದ್ರಗ್ರಹವು 220 ಮೀಟರ್ ಸುತ್ತಳತೆಯನ್ನು ಹೊಂದಿದ್ದು, ಭೂಮಿಯಿಂದ 287,08,47,607 ಕಿ.ಮೀ. ದೂರದಲ್ಲಿ (ಅಂದರೆ ಭೂಮಿಯಿಂದ ಚಂದ್ರನಿಗೆ ಇರುವ ಅಂತರದ ಎಂಟು ಪಟ್ಟು ಹೆಚ್ಚು) ಅತಿ ವೇಗದಲ್ಲಿ ಸಂಚರಿಸಲಿದೆ. ಇದು ಭೂಮಿಗೆ ಅಪ್ಪಳಿಸುವ ಸಾಧ್ಯತೆ ಕಡಿಮೆಯಾದರೂ ಕ್ಷುದ್ರಗ್ರಹವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದಿದೆ.

‘2008 ಗೋ20’ ಸಂಚರಿಸುವ ಕಕ್ಷೆಯನ್ನು ‘ಅಪೋಲೊ’ ಎಂದು ವರ್ಗೀಕರಿಸಲಾಗಿದ್ದು, ಈ ಕಕ್ಷೆಯಲ್ಲಿ ಸಾಗುವ ಕಾಯಗಳು ಅಪಾಯಕಾರಿ ಆಗಿರುತ್ತವೆ. ಇಂಥದೊಂದು ಕಾಯ ಭೂ ಕಕ್ಷೆಯ ಸಮೀಪದಲ್ಲಿ ಇದೆ. ಇದಕ್ಕೆ ‘1862 ಅಪೋಲೊ ಕ್ಷುದ್ರಗ್ರಹ’ ಎಂದು ಹೆಸರಿಸಲಾಗಿದೆ. ಇದನ್ನು ಜರ್ಮನಿಯ ಖಭೌತ ವಿಜ್ಞಾನಿ ಕಾರ್ಲ್ ರೀನ್ಮುತ್ ಮೊದಲು ಪತ್ತೆ ಮಾಡಿದರು ಎಂದು ನಾಸಾ ಮಾಹಿತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net