ಸೈಬರ್ ಅಪರಾಧ ತಡೆಗೆ ಖಾಕಿ ಪಣ, ನೊಂದವರಿಗೆ ವಾಪಸ್ ಆಯ್ತು ಬಹುತೇಕ ಹಣ

SP PRSSANNA DESAI PRESS MEET
ವಿಜಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಎಸ್‌ಪಿ ಪ್ರಸನ್ನ ದೇಸಾಯಿ ಸಿಇಎನ್ ಠಾಣೆ ಅಧಿಕಾರಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಎಎಸ್‌ಪಿ ಶಂಕರ ಮಾರಿಹಾಳ, ಡಿವೈಎಸ್‌ಪಿ ಸುನೀಲ ಕಾಂಬಳೆ, ಸಿಪಿಐ ರಮೇಶ ಅವಜಿ ಇದ್ದಾರೆ.
Published on

ವಿಜಯಪುರ: ವ್ಯಾಪಕ ಜಾಗೃತಿಯ ನಡುವೆಯೂ ಹೆಚ್ಚುತ್ತಿರುವ ಸೈಬರ್ ಅಪರಾಧ ಕೃತ್ಯಗಳನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಈವರೆಗೆ ದಾಖಲಾದ 30 ಪ್ರಕರಣಗಳಲ್ಲಿ ವಂಚನೆಯಾಗಿದ್ದ 9.84 ಕೋಟಿ ರೂ.ಗಳ ಪೈಕಿ 7.48 ಕೋಟಿ ರೂಪಾಯಿ ಮರಳಿಸಲಾಗಿದೆ ಎಂದು ಎಸ್‌ಪಿ ಪ್ರಸನ್ನ ದೇಸಾಯಿ ತಿಳಿಸಿದರು.

ಕೇವಲ ನಾಲ್ಕು ತಿಂಗಳ ಅವಧಿಯಲ್ಲಿಯೇ 12 ಪ್ರಕರಣಗಳು ದಾಖಲಾಗಿವೆ. ಕ್ರಿಪ್ಟೊ ಟ್ರೇಡಿಂಗ್, ಪಾರ್ಟ್ ಟೈಮ್ ಜಾಬ್, ಷೇರ್ ಮಾರ್ಕೇಟ್ ಟ್ರೇಡಿಂಗ್, ಕ್ರೆಡಿಟ್/ಡೆಬಿಟ್ ಕಾರ್ಡ್ ಒಟಿಪಿ ಮತ್ತು ಡೀಲರ್‌ಶಿಪ್, ವರ್ಟಿಕಲ್ ಫಾರ್ಮಿಂಗ್ ಹಾಗೂ ಡಿಜಿಟಲ್ ಅರೆಸ್ಟ್ ಸೇರಿದಂತೆ ಹಲವು ಮಾದರಿಯ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿದೆ. ಬಹುತೇಕ ಪ್ರಕರಣಗಳಲ್ಲಿ ನೊಂದವರಿಗೆ ನ್ಯಾಯ ಕೊಡಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಡಿಜಿಟಲ್ ಅರೆಸ್ಟ್

ಪೊಲೀಸರ ವೇಷ ಧರಿಸಿ ವಿಡಿಯೋ ಕಾಲ್ ಮಾಡಿ ಲೈವ್‌ನಲ್ಲಿಯೇ ವ್ಯಕ್ತಿಯನ್ನು ಹಿಡಿದಿಟ್ಟು (ಡಿಜಿಟಲ್ ಅರೆಸ್ಟ್) ವಿಚಾರಣೆ ಹೆಸರಲ್ಲಿ ವಂಚನೆ ಮಾಡುವ ಪ್ರಕರಣದಲ್ಲಿ ಮತ್ತೊಬ್ಬರು ಮೋಸ ಹೋಗಿದ್ದಾರೆ. ಡಾ.ಅನಿರುದ್ಧ ಉಮರ್ಜಿ ಇವರಿಗೆ 54 ಲಕ್ಷ ರೂಪಾಯಿ ವಂಚನೆ ಮಾಡಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಇಲಾಖೆ ಚುರುಕಿನ ಕಾರ್ಯಾಚರಣೆ ನಡೆಸಿದೆ. ರಾಜಸ್ಥಾನ ಮತ್ತು ಹರಿಯಾಣ ರಾಜ್ಯದ 4 ವ್ಯಕ್ತಿಗಳಿಗೆ ದಸ್ತಗಿರಿ ಮಾಡಿ 25 ಲಕ್ಷ ರೂಪಾಯಿ ಮರಳಿ ಕೊಡಿಸಲಾಗಿದೆ. ಇನ್ನುಳಿದ ಹಣದ ಬಗ್ಗೆ ಆಪಾದಿತರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಎಸ್‌ಪಿ ಪ್ರಸನ್ನ ದೇಸಾಯಿ ತಿಳಿಸಿದರು.

ಟ್ರೇಡಿಂಗ್ ಹೆಸರಲ್ಲಿ ವಂಚನೆ

ಐಪಿಒ ಟ್ರೇಡಿಂಗ್ ಹೆಸರಲ್ಲಿ ಡಾ.ದಾದಾಪೀರ ಪೀರಜಾದೆ ಎಂಬುವರಿಗೆ ವಂಚನೆಯಾಗಿದೆ. ಒಟ್ಟು 20,03,390 ರೂ.ಗಳನ್ನು ದೂರುದಾರರಿಗೆ ಮರಳಿ ಕೊಡಿಸಲಾಗಿದೆ ಎಂದರು.

ಬಬನ್ ನಾಮದೇವ ಚವಾಣ್ ಎಂಬುವರಿಗೆ ಎಎಂಸಿ ಥೇಟರ್ಸ್ ಎಂಬ ವೆಬ್‌ಸೈಟ್‌ನಲ್ಲಿ ಹಣ ಹಾಕಿ ಸಿನೇಮಾ ಬುಕ್ ಮಾಡಿದರೆ ಬುಕ್ ಮಾಡಿದ ಹಣದ ಜೊತೆಗೆ ಬೃಹತ್ ಲಾಭಾಂಶ ನೀಡುತ್ತೇವೆ ಎಂದು ಸುಳ್ಳು ಹೇಳಿ ಒಟ್ಟು 14,77,135 ರೂ.ಹಾಕಿಸಿಕೊಂಡು ಮೋಸ ಮಾಡಲಾಗಿದೆ. ಈ ಪ್ರಕರಣದಲ್ಲಿ 3 ಜನರನ್ನು ದಸ್ತಗಿರಿ ಮಾಡಿ ಒಟ್ಟು 11,84,135 ರೂ.ಗಳನ್ನು ಬ್ಯಾಂಕ್ ಖಾತೆ ಮೂಲಕ ಜಪ್ತು ಮಾಡಲಾಗಿದೆ ಎಂದರು.

ಹೀಗೆ ಸಿಇಎನ್ ಠಾಣೆಯಲ್ಲಿ ದಾಖಲಾದ 30 ಪ್ರಕರಣಗಳಲ್ಲಿ ಒಟ್ಟು 9,84,03,949 ರೂ.ಗಳ ಪೈಕಿ 7,48,39,434 ರೂ. ಮರಳಿ ಜಮಾ ಮಾಡಲಾಗಿದೆ ಎಂದು ಎಸ್‌ಪಿ ತಿಳಿಸಿದರು.

ಅಲ್ಲದೇ, ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿರುವ ಎಎಸ್‌ಪಿ ಶಂಕರ ಮಾರಿಹಾಳ ಹಾಗೂ ರಾಮನಗೌಡ ಹಟ್ಟಿ ಮಾರ್ಗದರ್ಶನದ, ಡಿವೈಎಸ್‌ಪಿ ಸುನೀಲ ಕಾಂಬಳೆ ಮತ್ತು ಸಿಪಿಐ ರಮೇಶ ಅವಜಿ ನೇತೃತ್ವದ ತಂಡಕ್ಕೆ ಎಸ್‌ಪಿ ಪ್ರಸನ್ನ ದೇಸಾಯಿ ಶ್ಲಾಘನೆ ವ್ಯಕ್ತಪಡಿಸಿದರು. ಮುಂದುವರಿದು ಸೈಬರ್ ಅಪರಾಧ ತಡೆಗೆ ಸಾರ್ವಜನಿಕರು ಎಚ್ಚೆತ್ತುಕೊಳ್ಳುವುದೊಂದೇ ಪರಿಹಾರ. ಅರಿವಿನಿಂದ ಮಾತ್ರ ಈ ಅಕ್ರಮ ತಡೆಯಲು ಸಾಧ್ಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net