

ಕಾಸರಗೋಡು: ಕಾಯಕ ಯೋಗಿಗಳಾದ ಕೃಷಿಕರಲ್ಲಿನ ನಿರಂತರ ಶ್ರಮ ಹಾಗೂ ಕರ್ತವ್ಯ ಪ್ರಜ್ಞೆ ದೇಶವನ್ನು ಪ್ರಗತಿಯ ಪಥದತ್ತ ಕೊಂಡೊಯ್ಯುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಕರ್ನಾಟಕ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಮೈಸೂರು ಹೇಳಿದರು.
ಕಾಸರಗೋಡಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯಲ್ಲಿ ಆಯೋಜಿಸಲಾಗಿದ್ದ ಕೇರಳ-ಕರ್ನಾಟಕ ಸ್ಪಂದನ ಸಿರಿ ಕೃಷಿ, ಕನ್ನಡ ಶಿಕ್ಷಣ, ಸಂಸ್ಕೃತಿ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ ಸರ್ವಾಧ್ಯಕ್ಷತೆ ವಹಿಸಿದ್ದರು. ಕನ್ನಡ ಧ್ವಜಾರೋಹಣ, ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆ, ಜ್ಯೋತಿ ಹಾಸನ ಮತ್ತು ತಂಡದಿಂದ ನಾಡಗೀತೆ, ಕೃಷ್ಣಿಮಾ ಭುವನೇಶ್ ಕೂಡ್ಲು ಅವರಿಂದ ಸ್ವಾಗತ ನೃತ್ಯ ಪ್ರದರ್ಶನಗೊಂಡಿತು. ಕರ್ನಾಟಕ ಸರ್ಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ಕಸಾಪ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಶಿಕ್ಷಕಿ ಕೆ.ಟಿ.ಶ್ರೀಮತಿ, ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್ ಮೊದಲಾದವರು ಉಪಸ್ಥಿತರಿದ್ದರು.
ಜಿ.ಎಸ್.ಕಲಾವತಿ ಮಧುಸೂದನ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ವಾಮನ್ ರಾವ್ ಬೇಕಲ್ ಸ್ವಾಗತಿಸಿದರು. ವಿರಾಜ್ ಅಡೂರು ನಿರೂಪಿಸಿದರು. ನರಸಿಂಹ ಭಟ್ ಏತಡ್ಕ ವಂದಿಸಿದರು.
ವಿ.ಬಿ.ಕುಳಮರ್ವ, ಲಲಿತಾಲಕ್ಷ್ಮೀ ಕುಳಮರ್ವ ದಂಪತಿಗೆ ಸ್ಪಂದನ ಶಿಕ್ಷಣ ಸಿರಿ ಸನ್ಮಾನ, ಕೆ.ವಾಮನ್ ರಾವ್ ಬೇಕಲ್, ಸಂಧ್ಯಾರಾಣಿ ದಂಪತಿಗೆ ಕನ್ನಡ ನುಡಿ ಸಿರಿ ದಂಪತಿ ಸನ್ಮಾನ, ಪುಟ್ಟಸ್ವಾಮಿ ಹೊಳೇನರಸೀಪುರ, ಎಚ್.ಎಂ.ರಮೇಶ್ ಚನ್ನರಾಯಪಟ್ಟಣ ಅವರಿಗೆ ಸ್ಪಂದನ ಕೃಷಿ ಸಿರಿ ಪ್ರಶಸ್ತಿ, ಸಾಹಿತಿಗಳಾದ ಕೆ.ನರಸಿಂಹ ಭಟ್ ಏತಡ್ಕ, ವಿರಾಜ್ ಅಡೂರು ಅವರಿಗೆ ಸಾಹಿತ್ಯ ಸೇವಾ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕನ್ನಡ ಪಯಸ್ವಿನಿ ಪ್ರಶಸ್ತಿಯನ್ನು ಭಾಗ್ಯಲಕ್ಷ್ಮೀ ವಿ.ಹಂಪಿ, ಸುಂದರೇಶ್ ಡಿ.ಉಡುವಾರೆ, ಆಶಾಕಿರಣ ಬೇಲೂರು, ಗಿರಿತೇಜ ತೇಜೋಮಯ ಹಾಸನ, ಜಿ.ಎಸ್.ಕಲಾವತಿ ಮಧುಸೂದನ, ಮಂಗಳಾ ನಂದಕುಮಾರ್, ಲಾವಣ್ಯ ಶೇರುಗಾರು ಉಪ್ಪಿನಕುದ್ರು, ಡಾ.ವಾಣಿಶ್ರೀ ಕಾಸರಗೋಡು, ಗುರುರಾಜ್ ಕಾಸರಗೋಡು ಅವರಿಗೆ ನೀಡಿ ಗೌರವಿಸಲಾಯಿತು.