ಕೇರಳ ಹೈಕೋರ್ಟ್‌ನಿಂದ ಬಂತೊಂದು ಆದೇಶ: ಸಹಸ್ರಾರು ವಾಹನ ಮಾಲೀಕರು ನಿರಾಳ

kerala high court
Published on

ಕೊಚಿ: ಲಾಕ್‌ಡೌನ್‌ ಸಮಯದಲ್ಲಿ ಹೊರಗಡೆ ತಿರುಗಾಡಬೇಡಿ ಎಂದರೂ ಕೇಳದೇ ಗಾಡಿ ತೆಗೆದುಕೊಂಡು ಹೋದ ತಪ್ಪಿಗೆ ಸಹಸ್ರಾರು ಮಂದಿಯ ಗಾಡಿಗಳನ್ನು ಪೊಲೀಸರು ಸೀಜ್‌ ಮಾಡಿಟ್ಟು ಬುದ್ಧಿ ಕಲಿಸಿದ್ದಾರೆ. ಅದೇ ರೀತಿ ಕೇರಳ ರಾಜ್ಯದಲ್ಲಿಯೂ ಸಾವಿರಾರು ಗಾಡಿಗಳು ಸೀಜ್‌ ಆಗಿವೆ.

‘ದಂಡ ಕೊಡುತ್ತೇವೆ, ಗಾಡಿಯನ್ನು ಕೊಟ್ಟುಬಿಡಿಯಪ್ಪ’ ಎಂದು ಹಲವಾರು ಮಾಲೀಕರು ಪೊಲೀಸರನ್ನು ಪರಿಪರಿಯಾಗಿ ಬೇಡಿಕೊಂಡರೂ ರೂಲ್ಸ್‌ ಅಂದರೆ ರೂಲ್ಸ್‌, ಗಾಡಿಯನ್ನು ಕೊಡಲ್ಲ ಎಂದುಬಿಟ್ಟಿದ್ದರು ಪೊಲೀಸರು. ಬೇರೆ ದಾರಿ ಕಾಣದೆ ಅನೇಕ ಗಾಡಿ ಮಾಲೀಕರು ಹೈಕೋರ್ಟ್‌ ಮೊರೆ ಹೋಗಿದ್ದರು.

ಅವರೆಲ್ಲರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು, ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದವರ ಮಾತ್ರವಲ್ಲದೇ, ಯಾರ್ಯಾರ ಗಾಡಿಗಳನ್ನು ಲಾಕ್‌ಡೌನ್‌ ಅವಧಿಯಲ್ಲಿ ಸೀಜ್‌ ಮಾಡಲಾಗಿದೆಯೋ ಅವೆಲ್ಲವುಗಳನ್ನೂ ಮಾಲೀಕರಿಗೆ ವಾಪಸ್‌ ನೀಡುವಂತೆ ಆದೇಶಿಸಿದೆ.

ಮಾರ್ಚ್‌ 24ರಿಂದ ಇಲ್ಲಿಯವರೆಗೆ ಸೀಜ್‌ ಮಾಡಿರುವ ಗಾಡಿಗಳನ್ನು ಮಾಲೀಕರಿಗೆ ನೀಡುವಂತೆ ನ್ಯಾಯಮೂರ್ತಿ ರಾಜಾ ವಿಜಯರಾಘವನ್‌ ನೇತೃತ್ವದ ಪೀಠ ಆದೇಶಿಸಿದೆ. ಹಾಗೆಂದು ಗಾಡಿಗಳನ್ನು ಸುಮ್ಮನೆ ವಾಪಸ್‌ ಪಡೆಯಬಹುದು ಎಂದುಕೊಳ್ಳುವಂತಿಲ್ಲ. ಏಕೆಂದರೆ ಗಾಡಿಯನ್ನು ವಾಪಸ್‌ ಪಡೆಯಬೇಕಾದರೆ ಕೆಲವು ಷರತ್ತುಗಳನ್ನೂ ಕೋರ್ಟ್‌ ವಿಧಿಸಿದೆ.
ಅವುಗಳೆಂದರೆ, ಮೊದಲನೆಯದಾಗಿ ಗಾಡಿ ತಮ್ಮದೇ ಎಂದು ಸಾಬೀತುಪಡಿಸುವ ಗಾಡಿ ಸಂಬಂಧಿತ ದಾಖಲೆಗಳನ್ನು (ಆರ್‌ಸಿ ಬುಕ್‌, ನೋಂದಣಿ ಪತ್ರ, ಡಿಎಲ್‌ ಇತ್ಯಾದಿ) ಪೊಲೀಸರಿಗೆ ತೋರಿಸಬೇಕು. ಇದರ ಜತೆಗೆ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿರುವ ಕಾರಣಕ್ಕೆ ಸೂಕ್ತ ದಂಡವನ್ನು ಕಟ್ಟಿ ವಾಹನ ಕೊಂಡೊಯ್ಯಬೇಕು ಎಂದು ಕೋರ್ಟ್‌ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಮತ್ತು ಆಟೋ ರಿಕ್ಷಾ ಆದರೆ 1000 ರೂ. ಲಘು ವಾಹನಗಳು 2000 ರೂ, ಸ್ಟೇಜ್‌ ಕ್ಯಾರೇಜ್‌, ಕಾಂಟ್ರ್ಯಾಕ್ಟ್‌ ಕ್ಯಾರೇಜ್‌, ಮೀಡಿಯಂ ಗೂಡ್ಸ್‌ ವೆಹಿಕಲ್‌ಗಳಿಗೆ 4000 ರೂ ಹಾಗೂ ಭಾರಿ ವಾಹನಗಳಿಗೆ 5000 ರೂ. ಕಟ್ಟಲೇಬೇಕಾದ ಅನಿವಾರ್ಯತೆ ಇದೆ.

ಪದೇ ಪದೇ ಇಂಥದ್ದೇ ತಪ್ಪು ಮಾಡಿರುವವರಿಗೆ ಈ ಆದೇಶ ಅನ್ವಯ ಆಗುವುದಿಲ್ಲ ಎನ್ನುವ ಮೂಲಕ, ಮೇಲಿಂದ ಮೇಲೆ ಟ್ರಾಫಿಕ್‌ ನಿಯಮ ಉಲ್ಲಂಘಿಸಿದವರು ಮಾತ್ರ ಏನೂ ಮಾಡುವಂತಿಲ್ಲ! (ಏಜೆನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net