ಕೆನ್ನಾಳು ಕದಂಬ ತಂಡ ಚಾಂಪಿಯನ್: ಹೊಸಬೂದನೂರಿನಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಕಬಡ್ಡಿ ಟೂರ್ನಿ

Kennalu Kadamba team wins Kabaddi tournament Mandya
filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (0.52592593, 0.52592593); modeInfo: ; sceneMode: Night; cct_value: 0; AI_Scene: (-1, -1); aec_lux: 0.0; hist255: 0.0; hist252~255: 0.0; hist0~15: 0.0;
Published on

ಮಂಡ್ಯ: ತಾಲೂಕಿನ ಹೊಸಬೂದನೂರು ಗ್ರಾಮದ ಕಾಶಿವಿಶ್ವನಾಥ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಮೈಸೂರು ವಿಭಾಗ ಮಟ್ಟದ ಹೊನಲು-ಬೆಳಕಿನ ಕಬಡ್ಡಿ ಟೂರ್ನಿಯನ್ನು ಚಾಂಪಿಯನ್ ಆಗಿ ಕೆನ್ನಾಳು ಕದಂಬ ತಂಡ ಹೊರಹೊಮ್ಮಿದೆ.

ರೋಚಕತೆಯಿಂದ ಕೂಡಿದ್ದ ಫೈನಲ್‌ನಲ್ಲಿ ಸಾತನೂರು ಲಕ್ಷ್ಮೀನರಸಿಂಹ ತಂಡವನ್ನು 10(27-17) ಅಂಕದಿಂದ ಕೆನ್ನಾಳು ಕದಂಬ ತಂಡವು ಗೆಲುವು ಸಾಧಿಸುವ ಮೂಲಕ 33 ಸಾವಿರ ರೂ ನಗದು ಹಾಗೂ ಪಾರಿತೋಷಕವನ್ನು ಪಡೆದುಕೊಂಡಿತು. ದ್ವಿತೀಯ ಸ್ಥಾನ ಪಡೆದ ಸಾತನೂರು ಲಕ್ಷ್ಮೀನರಸಿಂಹ ತಂಡವು 23 ಸಾವಿರ ರೂ ನಗದು ಹಾಗೂ ಪಾರಿತೋಷಕವನ್ನು ಪಡೆಯಿತು. ಕೆನ್ನಾಳು ಕದಂಬ ತಂಡದ ಮನೋಜ್‌ಕುಮಾರ್ ಉತ್ತಮ ದಾಳಿ ಮಾಡುವ ಮೂಲಕ ತಮ್ಮ ತಂಡ ಪ್ರಥಮ ಸ್ಥಾನ ಗಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದರು. ಬೂದನೂರು ಬುಲ್ಸ್ ತೃತೀಯ ಹಾಗೂ ಚಿಕ್ಕಮಂಡ್ಯದ ಕಾಶಿವಿಶ್ವನಾಥ ತಂಡವು ಚತುರ್ಥ ಸ್ಥಾನ ಪಡೆದವು.

ಇದಕ್ಕೂ ಮುನ್ನ ಸೆಮಿಫೈನಲ್ ಪಂದ್ಯಕ್ಕೆ ಚಾಲನೆ ನೀಡಿದ ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ಮುಂದಿನ ವರ್ಷ ಫೆಬ್ರವರಿಯಲ್ಲಿ ಬೂದನೂರು ಉತ್ಸವವನ್ನು ಅದ್ಧೂರಿಯಾಗಿ ನಡೆಸಲಾಗುವುದು. ಕಳೆದ ಡಿಸೆಂಬರ್ ತಿಂಗಳಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಬೂದನೂರು ಗ್ರಾಮದ ಸಮೀಪವೇ ನಡೆದಿದ್ದರಿಂದ ಮುಂದಿನ ವರ್ಷ ನಡೆಸುವುದು ಸೂಕ್ತ ಎಂದು ಸರ್ಕಾರ ತಿಳಿಸಿದ್ದರಿಂದಾಗಿ, ಮುಂದೂಡಲಾಗಿದೆಯೇ ವಿನಃ ಯಾವುದೇ ಕಾರಣಕ್ಕೂ ಉತ್ಸವವನ್ನು ನಿಲ್ಲಿಸುವುದಿಲ್ಲ ಎಂದು ಭರವಸೆ ನೀಡಿದರು.

ಬೂದನೂರು ಗ್ರಾಮದಲ್ಲಿರುವ ಹೊಯ್ಸಳರ ಕಾಲದ ಕಾಶಿವಿಶ್ವನಾಥ ಹಾಗೂ ಅನಂತಪದ್ಮನಾಭ ದೇವಸ್ಥಾನಗಳನ್ನು ಪ್ರವಾಸಿ ತಾಣವನ್ನಾಗಿಸುವ ದೃಷ್ಟಿಯಿಂದ ಬೂದನೂರು ಉತ್ಸವವನ್ನು ಆರಂಭಿಸಲಾಗಿದ್ದು, ಇದು ಮುಂದೆ ಯಾರೇ ಅಧಿಕಾರಕ್ಕೆ ಬಂದರೂ ಸರ್ಕಾರದ ವತಿಯಿಂದಲೇ ಬೂದನೂರು ಉತ್ಸವವು ನಡೆಯುವಂತೆ ಗೆಜೆಟ್‌ನಲ್ಲಿ ಆದೇಶ ಹೊರಡಿಸಲಾಗಿದೆ. ಈ ವರ್ಷ ಬೂದನೂರು ಉತ್ಸವ ನಡೆಯದ ಕಾರಣ ಮರೆಯಬಾರದು ಎಂದು ಗ್ರಾಮದ ಯುವಜನತೆ ಸೇರಿ ಕಬಡ್ಡಿ ಉತ್ಸವ ಏರ್ಪಡಿಸಿದ್ದಾರೆ. ಅಲ್ಲದೆ, ಅದರ ಸವಿನೆನಪಿಗಾಗಿ ಗ್ರಾಮದ ಹೆಬ್ಬಾಗಿಲನ್ನೂ ಉದ್ಘಾಟಿಸಲಾಗಿದೆ ಎಂದು ಹೇಳಿದರು.

ಗ್ರಾಮದ ಕೆರೆಯ ಅಭಿವೃದ್ಧಿಗೆ ಸರ್ಕಾರ 5 ಕೋಟಿ ರೂ. ನೀಡಿದ್ದು, ಟೆಂಡರ್ ಸಹ ಮುಗಿದಿದೆ. ಕೆರೆಯು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವುದರಿಂದ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು. ಇದರ ಭೂಮಿ ಪೂಜೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಆಹ್ವಾನಿಸಲಾಗುವುದು. ಗ್ರಾಮದ ರಸ್ತೆ ಅಭಿವೃದ್ಧಿಗೆ 30 ಲಕ್ಷ ರೂ. ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡಲಾಗುವುದು. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಹೇಳಿದರು.

ಗ್ರಾಮದ ಮುಖಂಡರಾದ ಜಯರಾಮ್, ಶೇಖರ್, ಗ್ರಾಪಂ ಸದಸ್ಯರಾದ ನಾಗೇಶ್, ಶಿಲ್ಪಾ, ಮಾಜಿ ಸದಸ್ಯ ರಾಮರಾಜು, ತಾಪಂ ಮಾಜಿ ಸದಸ್ಯ ಬಿ.ಎನ್.ರಘು, ಆಯೋಜಕರಾದ ಮಂಜು, ಚೈತ್ರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net