

ಮೂಲ್ಕಿ: ಮೂಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಅನೇಕ ಅನಾಹುತಗಳು ನಡೆದು ಅಪಾರ ನಷ್ಟ ಸಂಭವಿಸಿದೆ.
ಕಿನ್ನಿಗೋಳಿ, ಮೂಲ್ಕಿ ರಾಜ್ಯ ಹೆದ್ದಾರಿ ಬದಿಯಲ್ಲಿ ನಡೆಯುತ್ತಿರುವ ಅಮೃತ್ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಗಾಗಿ ಹೊಂಡ ತೋಡಲಾಗಿದ್ದು ಮಳೆ ಪರಿಣಾಮ ಮಣ್ಣು ಸಡಿಲಗೊಂಡು ಕೆಂಚನಕೆರೆ ಸರ್ಕಾರಿ ಶಾಲೆ ಆವರಣ ಗೋಡೆ ಕುಸಿದು ಭಾರಿ ಹಾನಿ ಸಂಭವಿಸಿದೆ. ರಾತ್ರಿ ವೇಳೆ ಘಟನೆ ನಡೆದಿದ್ದು ಅನಾಹುತ ತಪ್ಪಿದೆ. ಸ್ಥಳಕ್ಕೆ ಕಿಲ್ಪಾಡಿ ಗ್ರಾಪಂ ಅಧ್ಯಕ್ಷ ವಿಕಾಸ್ ಶೆಟ್ಟಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಭಾರಿ ಮಳೆಗೆ ಬಪ್ಪನಾಡು ದೇವಸ್ಥಾನದ ಒಳಗಡೆ ನೀರು ನುಗ್ಗಿದ್ದು ಭಕ್ತರಿಗೆ ತೀವ್ರ ತೊಂದರೆಯಾಯಿತು. ನಿರಂತರ ಸುರಿದ ಮಳೆಗೆ ಶಿಮಂತೂರು ದೇವಸ್ಥಾನ ರಸ್ತೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಕೃತಕ ನೆರೆಯಿಂದ ರಸ್ತೆ ಮುಳುಗಡೆಯಾಗಿ ವಾಹನ ಸವಾರರಿಗೆ ಸಂಕಷ್ಟ ಉಂಟಾಯಿತು.
ಮಳೆ-ಗಾಳಿಗೆ ಕಾರ್ನಾಡು ಹರಿಹರ ಬಳಿಯ ರಜಕ ಯಾನೆ ಮಡಿವಾಳರ ಸಮಾಜ ಸೇವಾ ಸಂಘದ ಬಾವಿಯ ಆವರಣ ಗೋಡೆ ಕುಸಿದಿದೆ, ಕರ್ನೀರೆ ನಿವಾಸಿ ಹಸನಬ್ಬ ರಹೀಮ್, ಕಿನ್ನಿಗೋಳಿ ಸಮೀಪದ ನಡಗೋಡು ಲೀಲಾ ಎಂಬುವರ ಮನೆಗೆ ಹಾನಿಯಾಗಿದೆ. ಮಳೆ ಗಾಳಿಯ ಕಾರಣ ಸಸಿಹಿತ್ಲು ಮುಂಡಾ ಬೀಚ್‌ನಲ್ಲೆ ನಡೆಯಬೇಕಿದ್ದ ಸರ್ಪೀಂಗ್ ಸ್ಪರ್ಧೆಯನ್ನು ತಣ್ಣೀರು ಬಾವಿ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಮೂಲ್ಕಿ ತಾಲೂಕು ವ್ಯಾಪ್ತಿಯ ಕಿನ್ನಿಗೋಳಿ, ಹಳೆಯಂಗಡಿ, ಪಡುಪಣಂಬೂರು, ಪಕ್ಷಿಕೆರೆ ಅತಿಕಾರಿಬೆಟ್ಟು, ಬಳ್ಕುಂಜೆ ಪರಿಸರದಲ್ಲಿ ಉತ್ತಮ ಮಳೆಯಾಗಿದ್ದು, ನದಿ ತೀರದ ವಾಸಿಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.