

Kedarnath Chopper Crash: ಗುಜರಾತ್ನ ಅಹಮದಾಬಾದ್ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತ ಮಾಸುವ ಮುನ್ನವೇ ಮತ್ತೊಂದು ಅಪಘಾತ ವರದಿಯಾಗಿದೆ. ಉತ್ತರಾಖಂಡದಲ್ಲಿ ಹೆಲಿಕಾಪ್ಟರ್ ಪತನಗೊಂಡು ಪೈಲಟ್, ಪುಟ್ಟ ಕಂದಮ್ಮ ಸೇರಿದಂತೆ 7 ಮಂದಿ ದಾರುಣ ಅಂತ್ಯ ಕಂಡಿದ್ದಾರೆ. ಹೆಲಿಕಾಪ್ಟರ್ ಡೆಹ್ರಾಡೂನ್ನಿಂದ ಕೇದಾರನಾಥಕ್ಕೆ ತೆರಳುವಾಗ ಈ ದುರಂತ ಸಂಭವಿಸಿದೆ.
ಆರ್ಯನ್ ಏವಿಯೇಷನ್ಗೆ ಸೇರಿದ ಹೆಲಿಕಾಪ್ಟರ್, ಗುಪ್ತಕಾಶಿಯಿಂದ ಕೇದಾರನಾಥಕ್ಕೆ ತೆರಳುತ್ತಿದ್ದಾಗ ಭಾನುವಾರ ಬೆಳಗ್ಗೆ 5.20ಕ್ಕೆ ಈ ದುರ್ಘಟನೆ ಸಂಭವಿಸಿದೆ. ಗೌರಿಕುಂಡ್ ಅರಣ್ಯ ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನವಾಗಿದೆ. ಈ ವೇಳೆ ಹೆಲಿಕಾಪ್ಟರ್ನಲ್ಲಿ ಪೈಲಟ್ ಸೇರಿ ಏಳು ಜನರಿದ್ದರು. ಅವರಲ್ಲಿ, ಆರು ಮಂದಿ ಭಕ್ತರೆಂದು ವರದಿಗಳು ತಿಳಿಸಿವೆ. 2 ತಿಂಗಳ ಹಿಂದೆಯಷ್ಟೇ ಮುದ್ದಾದ ಅವಳಿ ಮಕ್ಕಳಿಗೆ ತಂದೆಯಾದ ಖುಷಿಯಲ್ಲಿದ್ದ ಪೈಲಟ್, ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿರುವುದು ಸದ್ಯ ಕುಟುಂಬಸ್ಥರನ್ನು ಕಂಗಾಲಾಗಿಸಿದೆ.
ಹೆಲಿಕಾಪ್ಟರ್ ಚಲಾಯಿಸಿದ ಜೈಪುರ ಮೂಲದ ಕ್ಯಾಪ್ಟನ್ ರಾಜ್ವೀರ್ ಸಿಂಗ್ ಚೌಹಾಣ್, 15 ವರ್ಷಗಳಿಗೂ ಹೆಚ್ಚು ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ ಮತ್ತು ವಿವಿಧ ಭೂಪ್ರದೇಶಗಳಲ್ಲಿ ಹಾರಾಟ ನಡೆಸಿರುವ ಅಪಾರ ಅನುಭವ ಹೊಂದಿದ್ದರು ಎಂದು ಸುದ್ದಿ ಸಂಸ್ಥೆ ಪಿಟಿಐ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಚೌಹಾಣ್ ಅವರ ಪತ್ನಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ,(ಏಜೆನ್ಸೀಸ್).