

ಬೆಂಗಳೂರು: ಕನ್ನಡ ಭಾಷೆಗೆ ಸಂಬಂಧಿಸಿದಂತೆ ಅಸಂಬದ್ಧ ಹೇಳಿಕೆ ನೀಡಿ ತಮಿಳು ನಟ ಕಮಲ್ ಹಾಸನ್ ಕನ್ನಡಿಗರಿಂದ ಛೀಮಾರಿಗೊಳಗಾಗಿದ್ದರು. ಇದರಿಂದಾಗಿ ನಟನ ‘ಥಗ್‌ಲೈಫ್’ ಚಿತ್ರ ರಾಜ್ಯದಲ್ಲಿ ಬಿಡುಗಡೆಯಾಗದೆ ಅನಿಶ್ಚತತೆ ಎದುರಿಸಿತು. ಹಾಗೆಯೇ ಈ ಪ್ರಕರಣದ ವಿಚಾರಣೆ ಸದ್ಯ ಕೋರ್ಟ್‌ನಲ್ಲಿ ನಡೆಯುತ್ತಿದೆ. ಇದರ ನಡುವೆಯೇ ಕಮಲ್ ಹೇಳಿಕೆಯನ್ನು ನಿರ್ದೇಶಕ ಪ್ರೇಮ್ ಮತ್ತು ನಟ ಧ್ರುವ ಸರ್ಜಾ ತಮಿಳು ನಾಡಿನಲ್ಲಿಯೇ ವಿರೋಧಿಸಿದ್ದಾರೆ. ಶುಕ್ರವಾರ ಚೆನ್ನೈನಲ್ಲಿ ‘ಕೆಡಿ’ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಪ್ರೇಮ್ ಮತ್ತು ಧ್ರುವ, ‘ಮಾತೃಭಾಷೆಯ ವಿಚಾರಕ್ಕೆ ಬಂದರೆ ಯಾರೂ ಸುಮ್ಮನಿರುವುದಿಲ್ಲ’ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಿರ್ದೇಶಕ ಪ್ರೇಮ್, ‘ತಾಯಿಯ ಬಗ್ಗೆ ಯಾರಾದರೂ ಅವಹೇಳನಕಾರಿಯಾಗಿ ಮಾತನಾಡಿದರರೆ, ನಾವು ಸುಮ್ಮನಿರುತ್ತೇವೆಯೇ? ಹಾಗೆಯೇ ಕಮಲ್ ಹಾಸನ್ ನೀಡಿದ ಹೇಳಿಕೆಯು ಕನ್ನಡಿಗರಿಗೆ ನೋವುಂಟು ಮಾಡಿತು. ಹಾಗೆಂದ ಮಾತ್ರಕ್ಕೆ ಕರ್ನಾಟಕದಲ್ಲಿ ಯಾವುದೇ ತಮಿಳು ಚಿತ್ರಗಳು ರಿಲೀಸ್ ಮಾಡುವುದು ಬೇಡ ಎಂದಿಲ್ಲ. ಆದರೆ, ಕಮಲ್ ಹಾಸನ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರಷ್ಟೇ. ದೇಶದ ಎಲ್ಲ ಭಾಷೆಗಳೂ ಒಂದೇ ಎನ್ನುವುದು ನನ್ನ ಭಾವನೆ. ಕರ್ನಾಟಕದಲ್ಲಿ ಯಾವುದೇ ತಮಿಳು ಚಿತ್ರ ರಿಲೀಸ್ ಆದರೆ, ನನ್ನನ್ನು ಸೇರಿ ಸಾಕಷ್ಟು ಪ್ರೇಕ್ಷಕರು ವೀಕ್ಷಿಸುತ್ತಾರೆ. ಅದರಿಂದ ಆ ಸಿನಿಮಾ ಹೆಚ್ಚು ಹಣ ಗಳಿಕೆ ಮಾಡುತ್ತದೆ. ಹಾಗೆಯೇ ನೀವೆಲ್ಲ ಬಂದರೆ, ನಿಮಗೆ ನಾವು ಹೊಟ್ಟೆ ತುಂಬಾ ಊಟ ಹಾಕಿ, ಸಂಸ್ಕಾರದಿಂದ ಆತಿಥ್ಯ ನೀಡುತ್ತೇವೆ. ಇದು ಕನ್ನಡಿಗರ ಗುಣ. ಅದೇ ರೀತಿಯಾಗಿ ಈ ಸಂಸ್ಕಾರ ನಮಗೂ ತಮಿಳುನಾಡಿನಲ್ಲಿ ದೊರೆಯುತ್ತದೆ. ಆದರೆ, ಮಾತೃಭಾಷೆ ವಿಚಾರದ ಬಗ್ಗೆ ಮಾತನಾಡಿದ್ದು, ನಮಗೆ ನೋವಾಯಿತು ಅಷ್ಟೇ’ ಎಂದು ಉತ್ತರಿಸಿದ್ದಾರೆ.
ನಟ ಧ್ರು ಸರ್ಜಾ ಕೂಡ ಕಮಲ್ ಹೇಳಿಕೆಯನ್ನು ವಿರೋಧಿಸಿ, ‘ನಮ್ಮಲ್ಲಿ ಸಾಕಷ್ಟು ತಮಿಳು ಸಿನಿಮಾಗಳು ರಿಲೀಸ್ ಆಗುತ್ತವೆ. ಯಾವತ್ತಿಗೂ ಯಾರೂ ಯಾವ ಚಿತ್ರದ ಪ್ರದರ್ಶನವನ್ನೂ ನಿಲ್ಲಿಸಿಲ್ಲ. ಆದರೆ, ಕಮಲ್ ಹಾಸನ್ ಹೇಳಿಕೆ ಕನ್ನಡಿಗರ ಮನಸ್ಸನ್ನು ಘಾಸಿಗೊಳಿಸಿತು. ಪ್ರತಿಯೊಬ್ಬರು ಮಾತೃಭಾಷೆಯನ್ನು ಪ್ರೀತಿಸುತ್ತಾರೆ. ಅದಕ್ಕೆ ಭಾಷೆ ವಿಚಾರಕ್ಕೆ ಬಂದರೆ, ಪ್ರತಿಯೊಬ್ಬರು ಪ್ರತಿಕ್ರಿಯೆ ನೀಡುತ್ತಾರೆ. ಇನ್ನು ಕನ್ನಡ ಪ್ರೇಕ್ಷಕರು ತಮಿಳು ಸಿನಿಮಾಗಳನ್ನು ಖಂಡಿಯ ಬೆಂಬಲಿಸುತ್ತಾರೆ. ಆದರೆ, ಮಾತೃಭಾಷೆಯ ಸ್ವಾಭಿಮಾನ ವಿಚಾರಕ್ಕೆ ಬಂದಾಗ ಖಂಡಿತವಾಗಿ ವಿರೋಧಿಸುತ್ತಾರೆ ಕೂಡ. ಇದು ನನ್ನ ನೇರ ಉತ್ತರ’ ಎಂದು ಪುನರುಚ್ಚರಿಸಿದರು.